ಬಲಾತ್ಕಾರದ ಬಂದ್ ಮಾಡಿದವರ ಮೇಲೆ ಕ್ರಮ : ಜಿಲ್ಲಾಧಿಕಾರಿ ಇಬ್ರಾಹಿಂ ಎಚ್ಚರಿಕೆ

Spread the love

ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿರುವ ಮಂಗಳೂರು ಬಂದ್ ವೇಳೆ ಬಲತ್ಕಾರವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಲು ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಲ್ಲಿ ಬಂದ್ ಆಯೋಜಿಸಿದ ಸಂಘಟಕರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿಗಳು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ಒಂದು ಕುಡಿಯುವ ನೀರಿನ ಯೋಜನೆಯಾಗಿದ್ದು, ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿದ್ದು, ರಾಜ್ಯ ಪೂರ್ವ ಭಾಗದ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವೃ ಆಭಾವವಿರುವ ಹಿನ್ನಲೆಯಲ್ಲಿ ಆ ಭಾಗದ ಜನರಿಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ 2010 ರಲ್ಲಿ ಯೋಜನೆ ರೂಪುಗೊಂಡಿದ್ದು, ಕಳೆದ ನಾಲ್ಕು ಸರಕಾರಗಳ ಅವಧಿಯಲ್ಲಿ ವಿವಿಧ ಹಂತದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ.
ಎತ್ತಿನ ಹೊಳೆ ಯೋಜನೆಯ ಅನುಷ್ಠಾನದ ಕುರಿತು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಸಾಧಕ ಬಾಧಕಗಳ ಕುರಿತಂತೆ ಚರ್ಚಿಸಲು, ಈ ಹಿಂದೆ 2014 ಸಪ್ಟೆಂಬರ್ 18ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆದಿರುತ್ತದೆ. ಸಭೆಯಲ್ಲಿ ಜಿಲ್ಲೆಯ ಜನತೆಯ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ ಯೋಜನೆಯ ಕುರಿತು ಸಮಗ್ರ ಚಿತ್ರಣ ನೀಡುವ ದೃಷ್ಟಿಯಿಂದ, ಸ್ಥಳೀಯರೊಂದಿಗೆ ಇನ್ನೊ ಸಭೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ 2015 ಸಪ್ಟೆಂಬರ್ 19 ರಂದು ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆಯನ್ನು ಕೂಡ ನಡೆಸಲಾಗಿತ್ತು,
ಬಳಿಕ 2015 ಅಕ್ಟೋಬರ್ 19 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆಯನ್ನು ಏರ್ಪಡಿಸಿದ್ದು, ಜಿಲ್ಲೆಯ ಹೋರಾಟಗಾರರು ಮತ್ತು ಸಭೆಯಲ್ಲಿ ಭಾಗವಹಿಸುವವರು ಸಭೆಯನ್ನು ಮುಂದೂಡಲು ಕೋರಿದ ಮೇರೆಗೆ ಸಭೆಯನ್ನು ಮುಂದೂಡಲಾಗಿತ್ತು. ನಂತರ ಇತ್ತೀಚೆಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ವೇಳೆ ಶೀಘ್ರವಾಗಿ ಸಭೆಯನ್ನು ನಡೆಸುವ ಭರವಸೆ ನೀಡಿರುತ್ತಾರೆ.
ಇದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಮೇ 17 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿರುತ್ತಾರೆ, ಮತ್ತು ಸದ್ಯದಲ್ಲೇ ಸಭೆಯನ್ನು ಏರ್ಪಡಿಸುವುದಾಗಿ ಕೂಡ ಮುಖ್ಯಮಂತ್ರಿಗಳು ತಿಳಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ಧಾರೆ.
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ದಕ ಜಿಲ್ಲಾ ಬಂದ್ ನಡೆಸವುದಾಗಿ ಹೋರಾಟಗಾರರು ತಿಳಿಸಿದ ಪರಿಣಾಮ ಬಂದ್ ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮನವಿ ಮಾಡಿದ್ದು, ಬಂದ್ ಸ್ವಯಂ ಪ್ರೇರಿತವಾಗಿದ್ದು, ಹಿಂತೆಗೆದುಕೊಳ್ಳಲು ಹೋರಾಟಗಾರು ಒಪ್ಪಿರುವುದಿಲ್ಲ ಅಲ್ಲದೆ ಯಾವುದೇ ರೀತಿಯಲ್ಲಿ ಬಲಾತ್ಕಾರವಾಗಿ ಬಂದನ್ನು ಮಾಡುವುದಿಲ್ಲ, ಯಾವುದೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಪ್ರಯತ್ನಿಸುವುದಿಲ್ಲ ಎಂದು ಹೋರಾಟಗಾರರು ತಿಳಿಸಿರುತ್ತಾರೆ.
ಆದ್ದರಿಂದ ಬಂದನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೋರಾಟಗಾರರು ತಿಳಿಸಿರುವುದರ ಪರಿಣಾಮ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದ್ದು, ಯಾರಾದರೂ ಬಲಾತ್ಕಾರವಾಗಿ ಬಂದ್ ಮಾಡಲು ಯತ್ನಿಸಿದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.


Spread the love