ಬಲ್ಮಠ – ಬೆಂದೂರ್ವೆಲ್ ರಸ್ತೆ ಬ್ಲೇಸಿಯಸ್ ಡಿ’ಸೋಜಾ ರಸ್ತೆಯಾಗಿ ನಾಮಕರಣ: ಶಾಸಕ ಲೋಬೊ
ಮಂಗಳೂರು : ಬೆಂದೂರ್ ವೆಲ್ – ಬಲ್ಮಠ ರಸ್ತೆಯನ್ನು ಮಾಜಿ ಎಮ್ ಎಲ್ ಸಿ ದಿವಂಗತ ಬ್ಲೇಸಿಯಸ್ ಡಿ’ಸೋಜಾ ರಸ್ತೆ ಎಂದು ನಾಮಕರಣ ಮಾಡಲಾಗುವುದು ಎಂದು ಮಂಗಳೂರು ಶಾಸಕ ಜೆ ಆರ್ ಲೋಬೊ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸದ್ರಿ ರಸ್ತೆ ಮಂಗಳೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಬಲ್ಮಠ ಕೆನರಾ ಬ್ಯಾಂಕ್ ನಿಂದ ಬೆಂದೂರ್ ವೆಲ್ ಕರಾವಳಿ ಸರ್ಕಲಿನ ತನಕದ ರಸ್ತೆಯನ್ನು ಕಾಂಗ್ರೆಸ್ ನಾಯಕ ಬ್ಲೇಸಿಯಸ್ ಡಿ’ಸೋಜಾ ರಸ್ತೆ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ.
ಬ್ಲೇಸಿಯಸ್ ಡಿ’ಸೋಜಾ 1962 ರಿಂದ 1979 ರ ತನಕ ಕೌನ್ಸಿಲ್ ನಲ್ಲಿ ಸೇವೆ ನೀಡಿದ್ದು, ಈ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ನೀಡಿದ್ದರು. ಬ್ಲೇಸಿಯಸ್ ಅವರು ಮಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರಾಗಿ ಕೂಡ ಸೇವೆ ನೀಡಿದ್ದರು.
ಅವರ ಅಧ್ಯಕ್ಷತೆಯ ಸಂದರ್ಭದಲ್ಲಿ ನಗರ ನೀರಿನ ತೀವೃ ಸಮಸ್ಯೆಯನ್ನು ಎದುರಿಸುತ್ತಿದ್ದ ಅದರ ಪರಿಹಾರಕ್ಕೆ ಶ್ರಮಿಸಿದ್ದರು. ಅಲ್ಲದೆ ಮಾರ್ಕೆಟ್, ಒಳಚರಂಡಿ ಸಮಸ್ಯೆ ಅಭಿವೃದ್ಧಿಗೆ ಕೂಡ ಶ್ರಮಿಸಿದ್ದರು. ಅಲ್ಲದೆ ಪಕ್ಷದ ಅಭಿವೃದ್ಧಿಗೂ ಕೂಡ ಕೆಲಸ ಮಾಡಿದ್ದರು. ಆಟೋಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಜಿಲ್ಲಾ ಹಾಕಿ ಫೆಡರೇಶನ್ ಅಧ್ಯಕ್ಷರಾದ್ದರು. ಚೆಶಾಯರ್ ಹೋಮ್ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದರು.
ಜುಲೈ 16ರಂದು ನಗರಲ್ಲಿ ಡಾ ಬಿ ಆಂಬೆಡ್ಕರ್ 125 ನೇ ಜನ್ಮಶತಮಾನೋತ್ಸವದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಜರುಗಲಿದ್ದು, ಅಂದು ಬ್ಲೇಶಿಸಯಸ್ ಡಿಸೋಜಾ ಅವರ ಅಭಿವೃದ್ಧಿ ಕೆಲಸಗಳ ನೆನಪು ನಮನ ಎಂಬ ವೀಡಿಯೊ ಚಿತ್ರೀಕರಣ ಪ್ರದರ್ಶಿಸಲಾಗುವುದು. ಅಲ್ಲದೆ ಸರಕಾರದ ಮೂರು ವರುಷದ ಸಾಧನೆಗಳ ವಿವರ ಕೂಡ ನೀಡಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಅತಿಥಿಗಳಾಗಿ ಕರೆಯಲಾಗಿದ್ದು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಸಚಿವ ಡಾ ಜಿ ಪರಮೇಶ್ವರ್, ಕಾಂಗ್ರೆಸ್ ಹಿರಿಯ ನಾಯಕರಾದ ಶಾಂತಾರಾಮ ನಾಯ್ಕ್, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ದಿನೇಶ್ ಗುಂಡುರಾವ್, ಡಿಕೆ ಶಿವಕುಮಾರ್, ಹೆಚ್ ಸಿ ಮಹದೇವಪ್ಪ, ಮಂತ್ರಿಗಳಾದ ಯು ಟಿ ಖಾದರ್, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಪರಿಷತ್ ಸದಸ್ಯ ಸಲೀಮ್ ಅಹಮ್ಮದ್, ಮೇಯರ್ ಹರಿನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೇಯರ್ ಹರಿನಾಥ್, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಸಿಂತಾ ಆಲ್ಫ್ರೇಡ್, ಅಶ್ರಫ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.