ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ಯುವತಿಯ ಜೊತೆ ಅನುಚಿತ ವರ್ತನೆ: ಸರಕಾರಿ ಬಸ್ ನಿರ್ವಾಹಕ ಪೊಲೀಸ್ ವಶಕ್ಕೆ
ಕೊಣಾಜೆ: ಮಂಗಳೂರು- ಮುಡಿಪು ಮಾರ್ಗವಾಗಿ ಸಂಚರಿಸುವ ಸರಕಾರಿ ಬಸ್ಸೊಂದರಲ್ಲಿ ನಿದ್ದೆಗೆ ಜಾರಿದ್ದ ಪ್ರಯಾಣಕ ಯುವತಿಯೊಬ್ಬಳ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬಸ್ ನಿರ್ವಾಹಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಮೂಲದ ಪ್ರದೀಪ್ ಆರೋಪಿ ಬಸ್ ನಿರ್ವಾಹಕ ಎಂದು ತಿಳಿದುಬಂದಿದೆ.
ಬುಧವಾರ ಮುಡಿಪುವಿನಿಂದ ಮಂಗಳೂರಿಗೆ ಈ ಸರಕಾರಿ ಬಸ್ ಸಂಚರಿಸುವ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಬಸ್ ನಿರ್ವಾಹಕ ಪ್ರದೀಪ್ ಪ್ರಯಾಣದ ವೇಳೆ ನಿದ್ದೆಗೆ ಜಾರಿದ್ದ ಯುವತಿಯೊಬ್ಬಳನ್ನು ದೇಹದ ಖಾಸಗಿ ಭಾಗವನ್ನು ಸ್ಪರ್ಶಿಸಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಸಹ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ನಿರ್ವಾಹಕನನ್ನು ಸೇವೆಯಿಂದ ವಜಾಗೊಳಿಸಿದ ಸಾರಿಗೆ ಸಚಿವರು
ಮಂಗಳೂರಿನ ಮುಡಿಪು -ಸ್ಟೇಟ್ ಬ್ಯಾಂಕ್ ಭಾಗದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದ್ದು, ಪ್ರಯಾಣಿಕರೊಬ್ಬರು ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಿರ್ವಾಹಕನನ್ನು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಮಂಗಳೂರು ವಿಭಾಗದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋಗೆ ಸಂಬಂಧಪಟ್ಟಂತೆ, ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ವಾಹಕನನ್ನು ಅಮಾನತು ಮಾಡಿರುವುದು ಸರಿಯಷ್ಟೇ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳೊಡನೆ ಗೌರವದೊಂದಿಗೆ ನಡೆದುಕೊಳ್ಳುವುದು ನಮ್ಮ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿರಬೇಕು. ಈ ರೀತಿಯ ಅಸಹ್ಯಕರ ನಡವಳಿಕೆ ಅಕ್ಷಮ್ಯ ಅಪರಾಧ.
ಕೆ ಎಸ್ ಆರ್ ಟಿ ಸಿ ಬಸ್ಸುಗಳು ಹಾಗೂ ಚಾಲಕ ನಿರ್ವಾಹಕರ ಬಗ್ಗೆ ಸಾರ್ವಜನಿಕ ಪ್ರಯಾಣಿಕರು ಅತೀವ ನಂಬಿಕೆ ಮತ್ತು ಪ್ರೀತಿ ಹೊಂದಿದ್ದಾರೆ. ಕೆಲವೊಬ್ಬರು ಮಾಡುವ ಈ ರೀತಿಯ ಕೆಲಸಗಳು ಸಂಸ್ಥೆ ಹಾಗೂ ಸಿಬ್ಬಂದಿಗಳ ಗೌರವಕ್ಕೆ ಧಕ್ಕೆ ತರುವಂತಹದು. ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಿ, ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದಲೇ ವಜಾ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ.