Home Mangalorean News Kannada News ಬಸ್‌ನಲ್ಲಿ ಸಿಕ್ಕಿದ್ದ ಪರ್ಸ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕ

ಬಸ್‌ನಲ್ಲಿ ಸಿಕ್ಕಿದ್ದ ಪರ್ಸ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕ

Spread the love

ಬಸ್‌ನಲ್ಲಿ ಸಿಕ್ಕಿದ್ದ ಪರ್ಸ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕ

ಬಂಟ್ವಾಳ: ಬಸ್‌ನಲ್ಲಿ ಸಿಕ್ಕಿದ್ದ ಪರ್ಸ್‌ಗಳನ್ನು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಕೆಎಸ್ಸಾರ್ಟಿಸಿ ಬಸ್‌ನ ಚಾಲಕ ಹಾಗೂ ನಿರ್ವಾಹಕರೊಬ್ಬರು ಪ್ರಮಾಣಿಕತೆ ಮೆರೆದ ಘಟನೆ ಬಿ.ಸಿ.ರೋಡ್‌ನಲ್ಲಿ ಗುರುವಾರ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಬಸ್‌ನ ಚಾಲಕ ಈರಯ್ಯ ಬೆಳ್ಳೇರಿ ಎಂಬವರು ಪ್ರಯಾಣಿಕ ಶ್ರೀನಿವಾಸ್ ಎಂಬವರ ಪರ್ಸ್‌ನ್ನು ಕಂಡು ಮರಳಿ ಕೊಟ್ಟರೆ, ಕಾಸರಗೋಡು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಹಮೀದ್ ಎಂಬವರು ಕಳೆದುಕೊಂಡ ಪರ್ಸ್‌ನ್ನು ನಿರ್ವಾಹಕ ಮಹದೇವಸ್ವಾಮಿ ಮರಳಿಸಿದ್ದಾರೆ.

ಶ್ರೀನಿವಾಸ ಅವರು ಪರ್ಸ್‌ನ್ನು ಪಂಪ್‌ವೆಲ್‌ನಲ್ಲಿ ಕಳೆದುಕೊಂಡಿದ್ದರೆ, ಅಬ್ದುಲ್ ಹಮೀದ್ ಅವರು ಕಾಸರಗೋಡು ಮತ್ತು ಬಿ.ಸಿ.ರೋಡ್ ದಾರಿ ಮಧ್ಯೆ ಕಳೆದುಕೊಂಡಿದ್ದರು. ಕಾಸರಗೋಡು ಮೂಲದ ಅಬ್ದುಲ್ ಹಮೀದ್ ಎಂಬವರು ಜು. 11ರಂದು ಕಾಸರಗೋಡಿನಿಂದ ಬಿ.ಸಿ.ರೋಡ್ ಕಡೆಗೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಸಂಚರಿಸಿದ್ದು, ಬಸ್‌ನಲ್ಲಿ ತನ್ನ ಪರ್ಸ್‌ಅನ್ನು ಕಳೆದುಕೊಂಡಿದ್ದರು. ಈ ಪರ್ಸ್‌ನಲ್ಲಿ 26 ಸಾವಿರ ನಗದು ಹಾಗೂ ದುಬೈ ಕರೆನ್ಸಿಗಳು, ಇತರ ಕಾರ್ಡ್‌ಗಳಿದ್ದವು.

ಸಿಕ್ಕಿದ ಪರ್ಸ್ ಅನ್ನು ಬಸ್ ನಿರ್ವಾಹಕ ಮಹದೇವ್ ಸ್ವಾಮಿ ಅವರು ಇಂದು ಬೆಳಗ್ಗೆ ಕೆಎಸ್ಸಾರ್ಟಿಸಿ ಬಿ.ಸಿ.ರೋಡ್ ಘಟಕದ ಕಚೇರಿಯಲ್ಲಿ ಪುತ್ತೂರು ವಿಭಾಗೀಯ ನಿಯಂತ್ರಣಧಿಕಾರಿ ನಾಗರಾಜ್ ಶೀರಾಳಿ ಹಾಗೂ ಬಿ.ಸಿ.ರೋಡ್ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಅವರ ಸಮಕ್ಷಮದಲ್ಲಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ.

ಪರ್ಸ್ ಕಳೆದುಕೊಳ್ಳುವುದು, ಅದರಲ್ಲಿ ಬೆಲೆಬಾಳುವ ವಸ್ತುಗಳಿದ್ದರೂ ಮಾರು ಹೋಗದೆ ಮರಳಿಸಿ ಪ್ರಾಮಾಣಿಕತೆ ಮೆರೆಯುವವರು ಇಂದು ಕಡಿಮೆಯಾಗಿದ್ದಾರೆ ಎಂಬ ಮಾತುಗಳ ನಡುವೆ ಕೆಎಸ್ಸಾರ್ಟಿಸಿಯ ಚಾಲಕ, ನಿರ್ವಾಹಕರೊಬ್ಬರು ಈ ಶ್ಲಾಘನೀಯ ಕಾರ್ಯ ನಡೆಸಿ ಗಮನ ಸೆಳೆಯುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


Spread the love

Exit mobile version