ಬಸ್ ನಿಲ್ದಾಣ ತೆರವು ಮಾಡಿದ ಅಧಿಕಾರಿಗಳ ಕ್ರಮ ಖಂಡಿಸಿ ರಸ್ತೆಗಿಳಿದ ಎಬಿವಿಪಿ ಮೇಲೆ ಲಘು ಲಾಠಿ ಪ್ರಹಾರ

Spread the love

ಬಸ್ ನಿಲ್ದಾಣ ತೆರವು ಮಾಡಿದ ಅಧಿಕಾರಿಗಳ ಕ್ರಮ ಖಂಡಿಸಿ ರಸ್ತೆಗಿಳಿದ ಎಬಿವಿಪಿ ಮೇಲೆ ಲಘು ಲಾಠಿ ಪ್ರಹಾರ

ಮಂಗಳೂರು: ಮಂಗಳೂರು ನಗರದಲ್ಲಿ ಬಸ್ ನಿಲ್ದಾಣವನ್ನು ಏಕಾಏಕಿ ತೆರವು ಮಾಡಿದ ಅಧಿಕಾರಿಗಳ ಕ್ರಮ ಖಂಡಿಸಿ ಎಬಿವಿಪಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹಂಪನಾಕಟ್ಟೆಯ ಬಸ್ಸು ತಂಗುದಾಣ ಏಕಾಏಕಿ ತೆರವುಗೊಳಿಸಿ ವಿದ್ಯಾರ್ಥಿ ಸಮುದಾಯಕ್ಕೆ ಆಗಿರುವ ಸಮಸ್ಯೆ ಕುರಿತು ಈ ಹಿಂದೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವ ಬಗ್ಗೆಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದರು ಕೂಡ ಸಮಸ್ಯೆ ಬಗೆಹರಿಯದ್ದನ್ನು ಖಂಡಿಸಿ ಮಂಗಳೂರಿನ ಕೇಂದ್ರ ಭಾಗ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ ಮಾಡಲಾಯಿತು.

ಹಂಪನಕಟ್ಟೆಯಲ್ಲಿ ತೆರವುಗೊಳಿಸಿದ ಪ್ರಯಾಣಿಕರ ತಂಗುದಾಣವನ್ನು ಮತ್ತೆ ನಿರ್ಮಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರು ಹಾಗೂ ಪಾಲಿಕೆ ಆಯುಕ್ತರು ಸ್ಥಳಕ್ಕೆ ಬಂದು ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸುಮಾರು ಅರ್ಧ ಗಂಟೆ ಕಳೆದ ಬಳಿಕವೂ ಸ್ಥಳಕ್ಕೆ ಯಾವ ಅಧಿಕಾರಿಗಳೂ ಬಾರದಿದ್ದುದನ್ನು ಕಂಡು ಸಿಟ್ಟಿಗೆದ್ದ ಪ್ರತಿಭಟನಾಕಾರರು ಏಕಾಏಕಿ ರಸ್ತೆಗೆ ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ರಸ್ತೆಗಿಳಿದ ವಿದ್ಯಾರ್ಥಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಎಬಿವಿಪಿ ಕಾರ್ಯಕರ್ತರು ಅಗ್ರಹಿಸಿದರು, ವಿದ್ಯಾರ್ಥಿಗಳ ಆಗ್ರಹಕ್ಕೆ ಮಣಿದು ಮಂಗಳೂರು ತಶೀಲ್ದಾರ್ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಯನ್ನ ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಸುವಿತ್, ತಾಲೂಕು ಸಂಚಾಲಕ ಶ್ರೇಯಸ್ ಮತ್ತು ಕಾರ್ಯಕರ್ತರಾದ ಮೋನಿಶ್, ಪ್ರತೀಕ್, ಶಶಾಂಕ್, ನಿಖಿತ್, ಸಾತ್ವಿಕ್, ಇನ್ನಿತರರು ಉಪಸ್ಥಿತರಿದ್ದರು.


Spread the love