ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ – ಡಾ. ಎಚ್. ಎನ್ ಮುರಳೀಧರ್
ಮೂಡಬಿದಿರೆ: ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ. ಕೀರ್ತನೆಗಳ ಮೂಲಧನತ್ವವಿರುವುದೇ ಸಂಭೋದನೆಯಲ್ಲಿ. ಇದರಿಂದಲೇ ಕೀರ್ತನೆಗಳ ಸೃಷ್ಟಿಯಾಗಿದ್ದು, ಅದರ ಮೂಲ ಸೂತ್ರ ಇರುವುದು ಏಕರೂಪಿಯಾಗಿರುವ ಸೈದ್ಧಾಂತಿಕತೆಯಲ್ಲಿ. ಏಕರೂಪತೆಯೊಂದಿಗೆ ಅದರ ಸಾರಾಂಶವನ್ನು ಅರ್ಥೈಸಿಕೊಳ್ಳವುದು ಅವಶ್ಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಚ್. ಎನ್ ಮುರಳೀಧರ್ ಹೇಳಿದರು.
ಆಳ್ವಾಸ್ ನುಡಿಸಿರಿಯ `ಕರ್ನಾಟಕ ದರ್ಶನ: ಜಾನಪದ ಪರಂಪರೆ’ ವಿಚಾರಗೋಷ್ಠಿಯಲ್ಲಿ ಕೀರ್ತನೆಗಳು ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ದಾಸರು ಕಾಲಕ್ಕನುಗುಣವಾಗಿ ಅನೇಕ ದನಿಗಳಲ್ಲಿ ಮಾತನಾಡುವುದರ ಜೊತೆಗೆ ಪರಕಾಯ ಪ್ರವೇಶವನ್ನು ಮಾಡಿದ್ದಾರೆ. ಸಮಾಜದ ಹಲವು ಮುಖಗಳ ಪ್ರತಿಬಿಂಬಗಳಲ್ಲಿ ಕೀರ್ತನೆ ಪ್ರಾತಿನಿಧ್ಯ ಪಡೆದಿದೆ. ದಾಸರು ಎಲ್ಲಾ ಅರ್ಥಗಳಲ್ಲಿಯೂ ಅಮೂರ್ತರು. ದಾಸರು ಆಧ್ಯಾತ್ಮ ಜಿಜ್ಞಾಸೆಯನ್ನು ಮೂಡಿಸುತ್ತಾರೆ, ಅಭಿವ್ಯಕ್ತಿಯಲ್ಲಿ ಬಹುರೂಪವನ್ನು ಧಾರಣೆ ಮಾಡುತ್ತಾರೆ. ದಾಸರು ಬಹುರೂಪವನ್ನು ಮಾನ್ಯ ಮಾಡಿಕೊಂಡಿರುವುದರಿಂದ ಬಹುರೂಪವನ್ನು ಹೀರಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ವಿವರಿಸಿದರು.
ಸಮಾಜ ಕಟ್ಟುವಿಕೆಯಲ್ಲಿ ಕೀರ್ತನೆಯ ಪಾತ್ರವನ್ನು ವಿವರಿಸಿದ ಮುರಳೀಧರ್, ಸೃಷ್ಟಿಯ ಮೂಲಧಾತುವಿರುವುದೇ ಸಂಬೋಧನೆಯಲ್ಲಿ. ದಾಸರು ತಮ್ಮ ಆಧ್ಯಾತ್ಮ ಜಿಜ್ಞಾಸೆಯನ್ನು ಶ್ರೀಸಾಮಾನ್ಯರಿಗೂ ತಲುಪುವಂತೆ ಬರೆದಿದ್ದಾರೆ. ಕೀರ್ತನ ನಾಮವೆಂಬ ಪರ್ಯಾಯದ ಮೂಲಕ ಸಾಮಾಜಿಕ ವ್ಯವಸ್ಥೆಯ ಕಟ್ಟುಪಾಡನ್ನು ಒಡೆದು ಹಾಕಿದ್ದಾರೆ. ದೈನಂದಿನ ಚಟುವಟಿಕೆಯನ್ನು ಇರುವಂತೆಯೇ ಒಪ್ಪಿಕೊಂಡು ಕೀರ್ತನೆಗಳನ್ನು ರಚಿಸಿದ್ದಾರೆ. ಆಧ್ಯಾತ್ಮವು ಯಾವುದೇ ಜಾತಿ, ಧರ್ಮವನ್ನು ವಿಭಜಿಸುವುದಿಲ್ಲ. ಕೀರ್ತನೆಗಳು ಪ್ರಾಯೋಗಿಕ ನೆಲೆಯನ್ನು ಕಂಡುಕೊಂಡಿವೆ ಎಂದರು.
`ಕೀರ್ತನೆಗಳು ಬಹುರೂಪಿ ಆಯಾಮಗಳನ್ನು ಹೊಂದಿವೆ. ಬಹುರೂಪತೆಯ ಎಲ್ಲಾ ಅಭಿವ್ಯಕ್ತಿಗಳು ದಾಸರಿಂದಲೇ ಸಾಧ್ಯ ಹೊರತು, ಬೇರೆ ಯಾರಿಂದಲೂ ಅಲ್ಲ. ದಾಸರ ಪ್ರಕಾರ ಶರಣಾಗತಿ ಎಂದರೆ ಅಸ್ತಿತ್ವದ ಅಗಾಧತೆಗೆ ಶರಣಾಗುವುದು. ಸಮಾಜವು ಘೋಷಿತ ಸಿದ್ಧಾಂತಕ್ಕೆ ಕಟ್ಟಿಬಿದ್ದಿರುವುದರಿಂದ ಅದು ತನ್ನತನವನ್ನು ಕಳೆದುಕೊಳ್ಳುತ್ತಿದೆ’ ಎಂದು ದಾಸರ ಪದಗಳೊಂದಿಗೆ ವಿಶ್ಲೇಷಿಸಿದರು.
ವಿಚಾರಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ ಎಸ್. ಘಂಟಿ ಹಾಗೂ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ವಿಚಾರಗೋಷ್ಠಿಯನ್ನು ಸಂಸ್ಕøತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಭಟ್ ನಿರೂಪಿಸಿದರು.
ಶರಧಿ ಆರ್. ಫಡ್ಕೆ