ಬಹುಸಂಸ್ಕೃತಿ ಉತ್ಸವದಲ್ಲಿ ವಿವಿಧ ಭಾಷೆಗಳ ಸಾಂಸ್ಕೃತಿಕ ವೈವಿಧ್ಯ

Spread the love

 ಬಹುಸಂಸ್ಕೃತಿ ಉತ್ಸವದಲ್ಲಿ ವಿವಿಧ ಭಾಷೆಗಳ ಸಾಂಸ್ಕೃತಿಕ ವೈವಿಧ್ಯ

ಮಂಗಳೂರು: ಸುವರ್ಣ ಕರ್ನಾಟಕ ಸಂಭ್ರಮದ ಅಂಗವಾಗಿ ಡಿಸೆಂಬರ್ 3 ಮತ್ತು 4 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುವ ʼಬಹುಸಂಸ್ಕೃತಿ ಉತ್ಸವʼದಲ್ಲಿ ವಿವಿಧ ಭಾಷಾ ಸಂಸ್ಕೃತಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಡಿ. 3ರಂದು ಬೆಳಗ್ಗೆ 9.00ಕ್ಕೆ ಅಂಬೇಡ್ಕರ್ ವೃತ್ತದಿಂದ ಪುರಭವನ ತನಕ ನಡೆಯಲಿರುವ ಭವ್ಯ ಸಾಂಸ್ಕೃತಿಕ ಮೆರವಣಿಗೆ ಯಲ್ಲಿ ಕರಾವಳಿ ಹಾಗೂ ಕೊಡಗು ಜಿಲ್ಲೆಯ ಸಾಂಸ್ಕೃತಿಕ ವೈಭವನ್ನು ಪ್ರತಿಬಿಂಬಿಸುವ ವಿವಿಧ ಅಕಾಡೆಮಿಗಳ ಕಲಾ ತಂಡಗಳು ಮತ್ತು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ,ಮಂಗಳೂರು ನಗರಪಾಲಿಕೆಯ ವತಿಯಿಂದ ಅನೇಕ ಸ್ತಬ್ದಚಿತ್ರಗಳು ಭಾಗವಹಿಸಲಿವೆ.

ಡಿ. 3ರ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 9.00 ಗಂಟೆ ತನಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರೆ ಭಾಷಾ ಅಕಾಡೆಮಿ ವತಿಯಿಂದ ʼಅರೆಭಾಷೆ ಸಿರಿ ಸಂಸ್ಕೃತಿʼ ನೃತ್ಯ ರೂಪಕ‌, ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಡೋಲು ವಾದನದ ಗಜಮೇಳ ಹಾಗೂ ದುಡಿ ಕುಣಿತ, ಕೊಡವ ಅಕಾಡೆಮಿಯಿಂದ ಕೊಂಬು-ಕೊಟ್ಟ್, ಉಮ್ಮತಾಟ್, ದುಡಿಕೊಟ್ಟ್ ಪಾಟ್, ಗೆಜ್ಜೆತಂಡ್ ಆಟ್, ಉರ್’ಟಿಕೊಟ್ಟ್ ಆಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ ಮತ್ತು ಕೋಲಾಟ ನಡೆಯಲಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಸಿದ್ದಿ ಮತ್ತು ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ ಮತ್ತು ಬಾಯ್ಲಾ ನೃತ್ಯ ಹಾಗೂ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ದಪ್ಫು ಕುಣಿತ, ಒಪ್ಪನೆ ಪಾಟ್ ಮತ್ತು ಕೋಲಾಟ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿರಲಿದೆ. ಸಂಜೆ 6.00ಕ್ಕೆ ಯಕ್ಷಗಾನ ಅಕಾಡೆಮಿಯಿಂದ ʼಶ್ರೀದೇವಿ ಭುವನೇಶ್ವರಿʼ ಯಕ್ಷಗಾನ ಪ್ರಸಂಗ ನಡೆಯಲಿದೆ.

ಡಿ. 4ರಂದು ಸಂಜೆ 4.30ರಿಂದ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ಸಂಗೀತ ಲಹರಿ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಐವತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಆಶಯದೊಂದಿಗೆ ರಾಜ್ಯಾದ್ಯಂತ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.

ಕರಾವಳಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಬಹುಸಂಸ್ಕೃತಿ ಉತ್ಸವವಾಗಿ ಆಚರಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕೊಂಕಣಿ ಅಕಾಡೆಮಿ, ಬ್ಯಾರಿ ಅಕಾಡೆಮಿ, ಅರೆ ಭಾಷೆ ಅಕಾಡೆಮಿ, ಕೊಡವ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿ ಈ ಕಾರ್ಯಕ್ರಮ ಆಯೋಜಿಸಿದೆ.‌

ಕಾರ್ಯಕ್ರಮ ಆಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಉಡುಪಿ ಜಿಲ್ಲಾಡಳಿತ, ಕೊಡಗು ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಹಭಾಗಿತ್ವ ವಹಿಸಿದೆ.


Spread the love
Subscribe
Notify of

0 Comments
Inline Feedbacks
View all comments