ಬಾಂಬ್ ಇಡುವ ಮುನ್ನ ಕಾರ್ಕಳದ ಬಾರ್ ನಲ್ಲಿ ಕೆಲಸಕ್ಕಿದ್ದ ಆದಿತ್ಯ ರಾವ್ -ಪೊಲೀಸ್ ಆಯುಕ್ತ ಎಸ್. ಹರ್ಷ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕವನ್ನಿರಿಸಿ ಈಗ ಪೊಲೀಸರ ವಶದಲ್ಲಿರುವ ಉಡುಪಿ ಮೂಲದ ಆದಿತ್ಯ ರಾವ್ ಕೃತ್ಯಕ್ಕೆ ಎರಡು ದಿನ ಮೊದಲು ಕಾರ್ಕಳದ ಬಾರಿನಲ್ಲಿ ಕೆಲಸಕ್ಕಿದ್ದ ಎಂದು ಪೊಲೀಸ್ ಆಯುಕ್ತ ಡಾ. ಪಿ. ಎಸ್. ಹರ್ಷ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿ ಆದಿತ್ಯ ರಾವ್ ಕಾರ್ಕಳ ಪೇಟೆಯಲ್ಲಿರುವ ಕಿಂಗ್ಸ್ ಬಾರ್ ಗೆ ಬಂದು ಕೆಲಸ ಕೇಳಿದ್ದ. ತಾನು ಈ ಹಿಂದೆ ಮಂಗಳೂರಿನಲ್ಲಿ ಬಿಲ್ ಕೌಂಟರ್, ವೆಯಿಟರ್, ಸಪ್ಲೈಯರ್ ಆಗಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ.
ಬಾರ್ ಮ್ಯಾನೇಜರ್ ಈತನ ಆಧಾರ್ ಕಾರ್ಡ್ ಮತ್ತು ಫೋಟೋ ಕೇಳಿದಾಗ ಮೊದಲು ಇಲ್ಲ ಎಂದಿದ್ದ. ಆದರೆ ಮ್ಯಾನೇಜರ್ ಅದಿಲ್ಲದೆ ಕೆಲಸ ನೀಡುವುದಿಲ್ಲ ಎಂದಿದ್ದಕ್ಕೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಕೊಟ್ಟು ಕೆಲಸಕ್ಕೆ ಸೇರಿದ್ದ ಎಂದರು.
ಈ ಹಿಂದಿನ ಬಾಂಬ್ ಬೆದರಿಕೆ ಪ್ರಕರಣ ಮತ್ತು ಈಗಿನ ಬಾಂಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನಿಗೆ ಸಜೆ ಆಗುತ್ತದೆ. ಈ ಮೊದಲು ಆದಿತ್ಯ ಚಿಕ್ಕಬಳ್ಳಾಪುರದಲ್ಲಿ ಜೈಲು ಸಜೆ ಅನುಭವಿಸಿದ್ದಾನೆ. ಜೈಲಿನಲ್ಲಿದ್ದಾಗಲೂ ಇನ್ನೂ ಏನಾದರು ದೊಡ್ಡ ಅನಾಹುತ ಮಾಡಬೇಕು ಎಂದು ಯೋಚಿಸುತ್ತಿದ್ದ ಎಂದು ತಿಳಿದು ಬಂದಿತ್ತು. ಇದನ್ನೇ ಆತ ಒಪ್ಪಿಕೊಂಡಿದ್ದಾನೆ.
ಜೈಲಿನಿಂದ ಹೊರಬಂದ ಮೇಲೆ ಇಂಟರ್ನೆಟ್ಗಳಿಂದ ಬಾಂಬ್ ತಯಾರಿ ಮತ್ತು ಸ್ಫೋಟಕಗಳ ಬಗ್ಗೆ ಆಳವಾದ ಅಭ್ಯಾಸ ಮಾಡಿರುವುದು ಕಳವಳಕಾರಿ ಅಂಶ ಎಂದರು.
ಬಾಂಬ್ ತಯಾರಿಕೆ ಬಗ್ಗೆ ತಿಂಗಳುಗಟ್ಟಲೆ ರಿಸರ್ಚ್ ಮಾಡಿದ್ದಾನೆ. ಆನ್ಲೈನ್ನಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ದೊರೆಯುವ ಸ್ಫೋಟಕ ವಸ್ತಗಳು ಬಗ್ಗೆ ತಿಳಿದಿದ್ದಾನೆ.
ಮುಕ್ತ ಮಾರುಕಟ್ಟೆಯಲ್ಲಿ ಕೊಂಡರೆ ಸಿಕ್ಕಿಬೀಳಬಹುದು ಎಂಬ ಭಯದಿಂದ ವಸ್ತುಗಳನ್ನು ಖರೀದಿಸಲು ಹೋಗಿಲ್ಲ. ಅಲ್ಲದೆ ಯಾವ ವಸ್ತುಗಳಿಂದ ಸ್ಫೋಟಕ ತಯಾರಿಸಬಹುದು ಮತ್ತು ಅವುಗಳನ್ನು ಹೇಗೆ ಹೊಂದಿಸಬೇಕು ಎಂಬುದರ ಬಗ್ಗೆ ಅರಿತಿರುವುದಾಗಿ ಆದಿತ್ಯ ತಿಳಿಸಿದ್ದಾನೆ ಎಂದು ಆಯುಕ್ತರ ಮಾಹಿತಿ ನೀಡಿದರು.
ಮೈಸೂರು ಕಾಲೇಜಿನಲ್ಲಿ ಎಂಬಿಎ ಪದವೀಧರ ಮತ್ತು ಬಿಇ ಮೆಕಾನಿಕಲ್ ಇಂಜಿಯರ್ ಪದವೀಧರನೂ ಹೌದು ಎಂದು ಒಪ್ಪಿಕೊಂಡಿದ್ದಾನೆ. ಮೊದಲು ವಿವಿಧ ಖಾಸಗಿ ಬ್ಯಾಂಕ್ಗಳಲ್ಲಿ ಉದ್ಯೋಗ ಮಾಡಿದ ಆದಿತ್ಯ, ಒಂದೇ ಕಡೆ ಬಹಳ ದಿನಕಾಲ ಕೆಲಸ ಮಾಡುತ್ತಿರಲಿಲ್ಲ. ಒಂದೇ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಆಗುವುದಿಲ್ಲ ಎಂದು ಪದೇಪದೆ ಕೆಲಸ ಬದಲಿಸಿದೆ ಎಂದು ತಿಳಿಸಿದ್ದಾನೆ ಎಂದರು.
ಪೀಣ್ಯದಲ್ಲಿ ಕಾಮಧೇನು ಆಟೋ ಮೊಬೈಲ್ಸ್ ಕೆಲ ದಿನಗಳ ಕಾಲ ಮಾತ್ರ ಕೆಲಸ ಮಾಡಿ, ನಂತರ ಎಂಎನ್ಸಿ ಕಂಪನಿಯಲ್ಲಿ ತನ್ನ ದಾಖಲೆಗಳನ್ನು ತಿದ್ದಿ ಕೆಲಸಕ್ಕೆ ಸೇರುತ್ತಾನೆ. ಆದರೆ ಸಿಕ್ಕಿ ಬೀಳುವ ಭಯದಿಂದ ಅಲ್ಲಿಯೂ ಕೆಲಸ ತೊರೆಯುತ್ತಾನೆ.
ನಂತರ ಸೆಕ್ಯುರಿಟಿ ಗಾರ್ಡ್ ಆಗಿ ಮೂಡುಬಿದಿರೆ ಕಾಲೇಜು ಹಾಗೂ ಉಜಿರೆ ಕಾಲೇಜುಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾನೆ ಎಂದರು.