ಬಾಕಿ ತುಟ್ಟಿಭತ್ಯೆ ನೀಡಲು ಒತ್ತಾಯಿಸಿ ಉಡುಪಿಯಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನೆ
ಉಡುಪಿ: ಅಚ್ಚೆ ದಿನ್ ಬಗ್ಗೆ ಮಾತನಾಡುವ ಶಾಸಕರು, ಸಂಸದರು ಬೀಡಿ ಕಾರ್ಮಿಕರ ಬಗ್ಗೆ ಸದನ ಅಥವಾ ಸಂಸತ್ನಲ್ಲಿ ಚಕಾರ ಎತ್ತುತ್ತಿಲ್ಲ. 2015ರ ಬೀಡಿ ಕಾರ್ಮಿಕರ ತುಟ್ಟಿ ಭತ್ಯೆ ಬಾಕಿ ಬಗ್ಗೆ ಸರಕಾರದ ಮೇಲೆ ಒತ್ತಡ ಹಾಕು ತ್ತಿಲ್ಲ. ಬೀಡಿ ಕಾರ್ಮಿಕರ ಸಮಸ್ಯೆ ಆಲಿಸದ ಈ ಸರಕಾರಗಳಿಗೆ ಕಣ್ಣು ಹಾಗೂ ಕಿವಿ ಇಲ್ಲವಾಗಿದೆ ಎಂದು ದಕ್ಷಿಣ ಕನ್ನಡ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ತುಟ್ಟಿ ಭತ್ಯೆ ನೀಡದೆ ಸರಕಾರದ ಆದೇಶವನ್ನು ಉಲ್ಲಂಘಿಸಿ ಕಾರ್ಮಿಕರಿಗೆ ಶೋಷಣೆ ಮಾಡುತ್ತಿರುವ ಮಾಲಕರ ವಿರುದ್ಧ ಬೀಡಿ ಮತ್ತು ಟೋಬ್ಯಾಕೋ ಲೇಬರ್ ಯೂನಿಯನ್(ಸಿಐಟಿಯು) ಉಡುಪಿ ಹಾಗೂ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ನೇತೃತ್ವದಲ್ಲಿ ಶನಿವಾರ ಅಂಬಲಪಾಡಿಯಲ್ಲಿರುವ ಭಾರತ್ ಬೀಡಿ ಕಂಪೆನಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
1000 ಬೀಡಿಗೆ ರೂ 22.72ರಂತೆ ಬೀಡಿ ಕಾರ್ಮಿಕರಿಗೆ ನೀಡಬೇಕಾಗಿದೆ. ಅದರೆ ಬೀಡಿ ಕಂಪನಿಯ ಮಾಲಕರು ಅದನ್ನು ನೀಡದೆ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ. ಸರಕಾರದ ಆದೇಶ ಉಲ್ಲಂಘಿಸಿ ಕಾರ್ಮಿಕರಿಗೆ ಶೋಷಣೆ ಮಾಡುತ್ತಿರುವ ಬೀಡಿ ಮಾಲಕರ ವಿರುದ್ಧ ಹೋರಾಟವನ್ನು ತೀವ್ರಗೊಳಿಸ ಬೇಕು. ಆಗ ಮಾತ್ರ ಅವರ ದುಹಂಕಾರ ಇಳಿಸಿ ಬಗ್ಗು ಬಡಿ ಯಲು ಸಾಧ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬಡ ಬೀಡಿ ಕಾರ್ಮಿಕರು ಕಷ್ಟ ಪಟ್ಟು ಬೀಡಿ ಕಟ್ಟಿದ, ತುಟ್ಟಿಭತ್ಯೆ, ಕನಿಷ್ಠ ವೇತನ ನೀಡಲು ಮಾಲಕರು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಅವಿಭಜಿತ ದ.ಕ ಜಿಲ್ಲೆಯ ಶಾಸ ಕರು, ಸಂಸದರು ಸರಕಾರದ ಮೇಲೆ ಒತ್ತಡ ಹೇರಿ ಮಾಲಕರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನ ಗಳಲ್ಲಿ ಶಾಸಕರು ಮನೆ, ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ದ.ಕ. ಹಾಗೂ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶೇಖರ್, ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್, ಕುಂದಾಪುರ ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಕೀಸ್, ಉಡುಪಿ ಬೀಡಿ ಟೋಬ್ಯಾಕೊ ಲೇಬರ್ ಯುನಿಯನ್ ಅಧ್ಯಕ್ಷೆ ನಳಿನಿ ಎಸ್., ಎಐಟಿ ಯುಸಿ ಉಡುಪಿ ಮುಖಂಡರಾದ ಶಿವಾನಂದ, ಶಶಿಕಲಾ, ಸುಚಿತ್ರ ಶೆಟ್ಟಿ, ಸಿಐಟಿಯು ಉಡುಪಿ ಮುಖಂಡರಾದ ಶಶಿಧರ್ ಗೊಲ್ಲ, ಮೋಹನ್, ರೀತೇಶ್, ಉಡುಪಿ ಬೀಡಿ ಸಂಘದ ಮುಖಂಡರಾದ ಗಿರಿಜಾ, ವಸಂತಿ, ಜ್ಯೋತಿ, ರತ್ನ, ಲಲಿತ, ವಾರಜ, ಜಾನಕಿ ಉಪಸ್ಥಿತರಿದ್ದರು.