ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಪಿಂಪ್ ಸೆರೆ
ಮಂಗಳೂರು: ನಗರದ ಮಠದಕಣಿ 1 ನೇ ಕ್ರಾಸ್ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಗ್ರಾಹಕರಿಗೆ ಒದಗಿಸುತ್ತಿದ್ದ ದಲ್ಲಾಳಿ(ಪಿಂಪ್) ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಬಂಧಿತನನ್ನು ಮಂಗಳೂರು ಕುಂಟಿಕಾನ, ದೆರೆಬೈಲ್ ದಡ್ಡಲಕಾಡು ನಿವಾಸಿ ಮೇಘರಾಜ್ (26) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಮಠದಕಣಿ 1 ನೇ ಅಡ್ಡ ರಸ್ತೆಯಲ್ಲಿರುವ ಸ್ಕೋಡಾ ಕಾರ್ ಸರ್ವಿಸ್ ಸೆಂಟರ್ ನ ಬಳಿಯ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ದಲ್ಲಾಳಿ (ಪಿಂಪ್) ಮೇಘರಾಜ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆತನ ವಶದಿಂದ 2 ಮೊಬೈಲ್ ಫೋನ್, ಲ್ಯಾಪ್ ಟಾಪ್, ನಗದು ಹಣ ರೂ. 6,000/-, 2 ಬೈಕ್, ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ರೂ. 1,71,000/- ಆಗಿರುತ್ತದೆ. ಈತನು ಈ ಬಾಡಿಗೆ ಮನೆಯಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದನು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯ ಜೊತೆ ಇತರರು ಭಾಗಿಯಾಗಿದ್ದು, ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ, ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಗಳು, ಬರ್ಕೆ ಠಾಣಾ ಪಿಎಸ್ಐ ಶೋಭಾ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.