ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳು ‘ನಿರ್ದೋಷಿ’ ಎಂದ ಸಿಬಿಐ ಕೋರ್ಟ್
ಲಕ್ನೊ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ಮೂಲಕ 28 ವರ್ಷಗಳ ದೀರ್ಘ ಕಾಲದ ಕಾನೂನು ಹೋರಾಟಕ್ಕೆ ಇಂದು ತಾತ್ವಿಕ ಅಂತ್ಯ ಸಿಕ್ಕಿದೆ.
ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ 32 ಮಂದಿ ಆರೋಪಿಗಳು ದೋಷ ಮುಕ್ತರು, ನಿರ್ದೋಷಿಗಳು ಎಂದು ಲಕ್ನೊ ಸಿಬಿಆ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಈ ಮೂಲಕ 32 ಮಂದಿ ನಿಟ್ಟುಸಿರು ಬಿಡುವಂತಾಗಿದೆ. ಪೂರ್ವ ನಿಯೋಜಿತ ಕೃತ್ಯವಲ್ಲ ಎಂದು ಲಕ್ನೊ ವಿಶೇಷ ಸಿಬಿಐ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು ಪೂರ್ವ ನಿಯೋಜಿತ ಕೃತ್ಯವಲ್ಲ, ಆರೋಪಿಗಳ ವಿರುದ್ಧ ಪೂರ್ವ ಪ್ರಬಲ ಸಾಕ್ಷಿಗಳಿಲ್ಲ ಎಂದು ನ್ಯಾಯಮೂರ್ತಿ ಯಾದವ್ ತೀರ್ಪು ಪ್ರಕಟಿಸುತ್ತಿದ್ದಾರೆ.
2000 ಪುಟಗಳ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರು ಓದಿ ಹೇಳಿದರು. ಇನ್ನು ಘಟನೆ ನಡೆದಿದ್ದು ಪಿತೂರಿಯಿಂದ ಅಲ್ಲ ಬದಲಾಗಿ, ಏಕಾಏಕಿ ನಡೆದ ಘಟನೆ ಎಂದು ಅವರು ತೀರ್ಪು ಪ್ರಕಟಿಸುವ ವೇಳೆ ತಿಳಿಸಿದರು.