ಬಾರ್ಕೂರು ಮಹಾಸಂಸ್ಥಾನದಲ್ಲಿ ಧರ್ಮ ಸಂಸತ್ತು
ಬ್ರಹ್ಮಾವರ : ಮಹಿಳೆ ಮತ್ತು ಧರ್ಮದ ಮೇಲೆ ಆಗುತ್ತಿರುವ ಅನ್ಯಾಯ ಮತ್ತು ಇಂದಿನ ಹಾಳಾದ ರಾಜಕೀಯ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಿಂದೂ ಸಂಘಟನೆಗಳೊಂದಿಗೆ ಮಠಾಧಿಪತಿಗಳು ಕೈಜೋಡಿಸುತ್ತಿರುವುದು ನಮ್ಮ ಸಂಪ್ರದಾಯ, ಸಂಸ್ಕೃತಿಯಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಬಾರ್ಕೂರು ಮಹಾ ಸಂಸ್ಥಾನದಲ್ಲಿ ಶುಕ್ರವಾರ ನಡೆದ ಧರ್ಮ ಸಂಸತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜವನ್ನು ತಿದ್ದಿ ತೀಡುವ ಮತ್ತು ರಾಷ್ಟ್ರ ಧರ್ಮವನ್ನು ಉಳಿಸಲು ಮಾರ್ಗದರ್ಶನ ಮಾಡುವವರು ಮಠಾಧಿಪತಿಗಳು ಎಂದು ಹೇಳಿದರು.
ಬೆಳಗಾವಿ ಕುಂದರಗಿ ಅಡವಿ ಸಿದ್ಧೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಹೆತ್ತವರು ಸುಸಂಸ್ಕೃತರಾಗಿ ಪ್ರತಿ ಮನೆಯೂ ಪಾಠಶಾಲೆಯಾಗಬೇಕು. ಹೆತ್ತವರು ತಮ್ಮ ಮಕ್ಕಳನ್ನು ನನ್ನ ಹಾಗೆ ಆಗು ಎನ್ನುವ ಹೊತ್ತಿಗೆ ನಮ್ಮ ಭಾರತದ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಕಮತಗಿ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಮಹಾಸ್ವಾಮಿ, ಶ್ರೀರಂಗಪಟ್ಟಣ ಚಂದ್ರಾವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಬೆಳಗಾಂ ಹಿರೇಮಠ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಗಂಗಾವತಿಯ ಡಾ.ಕೊಟ್ಟೂರು ಮಹಾಸ್ವಾಮಿ, ಅಮೀನಗಢ ಹುನಗುಂದದ ಶಂಕರ ರಾಜೇಂದ್ರ ಮಹಾಸ್ವಾಮೀಜಿ, ಆಲಮಟ್ಟಿಯ ರುದ್ರಮುನಿ ವರು, ರಾಯಚೂರು ರುದ್ರ ಮುನೇಶ್ವರ ಮಠದ ರುದ್ರಮುನಿ ಮಹಾಸ್ವಾಮಿ, ಗುಲ್ಬರ್ಗ ಹಿಪ್ರಗಿಯ ಶಿವಲಿಂಗೇಶ್ವರ ವಿರಕ್ತಮಠದಅಭಿನವ ಶಿವಲಿಂಗ ಮಹಾಸ್ವಾಮಿ ನೂತನ ಸಂಸ್ಥಾನದ ಬಗ್ಗೆ ಆಶೀರ್ವಚನ ನೀಡಿದರು.
ಪ್ರಮುಖರಾದ ವಿಠಲ್ ಹೆಗ್ಡೆ, ಗುರ್ಮೆ ಸುರೇಶ್ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ಅರುಣ್ ಕುಮಾರ್ ಶೆಟ್ಟಿ, ಭಾಸ್ಕರ್ ಎ ಶೆಟ್ಟಿ, ಶಾಂತರಾಮ, ರತ್ನಾಕರ ಶೆಟ್ಟಿ, ಪ್ರಮೋದ್ ರೈ, ಎಸ್.ವಿ.ಶೆಟ್ಟಿ, ಸೋಮಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಹಾಸಂಸ್ಥಾನದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.