ಬಾರ್ಕೂರು ಮಹಾ ಸಂಸ್ಥಾನಂ ಲೋಕಾರ್ಪಣೆಗೆ ಸಜ್ಜುಗೊಂಡ ಐತಿಹಾಸಿಕ ದೇವಾಲಯದ ನಗರಿ

Spread the love

ಬಾರ್ಕೂರು ಮಹಾ ಸಂಸ್ಥಾನಂ ಲೋಕಾರ್ಪಣೆಗೆ ಸಜ್ಜುಗೊಂಡ ಐತಿಹಾಸಿಕ ದೇವಾಲಯದ ನಗರಿ

ಉಡುಪಿ: ಐತಿಹಾಸಿಕ ದೇವಾಲಯದ ನಗರಿ ಮತ್ತೋಮ್ಮೆ ಮದುವಣಗಿತ್ತಿಯಂತೆ ಸಜ್ಜಾಗುತ್ತಿದೆ. ಏಪ್ರಿಲ್ 19ರಿಂದ ಏಪ್ರಿಲ್ 21ರ ವರೆಗೆ ಶ್ರೀ ಬಾರ್ಕೂರು ಮಹಾ ಸಂಸ್ಥಾನಂ ಭಾರ್ಗವ ಬೀಡು ಬಾರ್ಕೂರು ಇದರ ಲೋಕಾರ್ಪಣೆ ಹಾಗೂ ಶ್ರೀ ನಾಗದೇವರ ಮತ್ತು ಮೂಲ ದೈವಗಳ ಪುನರ್ ಪ್ರತಿ ಷ್ಠಾಪನೆ ಮತ್ತು ಪರಮ ಪವಿತ್ರ ಮಹಾನಾಗಮಂಡಲೋತ್ಸವ ಆಯೋಜಿಸಲಾಗಿರುವ ಹಿನ್ನಲೆಯಲ್ಲಿ ಸುಮಾರು 40 ಸಾವಿರ ಭಕ್ತಾಭಿಮಾನಿಗಳು ಬಾರ್ಕೂರಿಗೆ ಭೇಟಿ ನೀಡುವ ನಿರೀಕ್ಷೆಯಲ್ಲಿ ಬಾರ್ಕೂರು ಸರ್ವ ಸಿದ್ಧವಾಗುತ್ತಿದೆ. ಬಾರ್ಕೂರಿನ ಭಾರ್ಗವ ಬೀಡು, ಬಾರ್ಕೂರು ಮಹಾ ಸಂಸ್ಥಾನದ ವಿದ್ಯಾ ವಾಚಸ್ಪತಿ ಶ್ರೀ ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಹಿಂದೆ ತುಳುನಾಡಿನ ರಾಜಧಾನಿಯಾಗಿ ಮೆರೆದಿದ್ದ ನಗರ ಬಾರ್ಕೂರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದ ಬಾರ್ಕೂರು ಆಗಿನ ಕಾಲದ ವಾಣಿಜ್ಯ ಕೇಂದ್ರವೂ ಆಗಿತ್ತು. ಸುಮಾರು 360 ದೇವಸ್ಥಾನಗಳು ಮತ್ತು ಜೈನ ಬಸದಿಯನ್ನು ಹೊಂದಿದ್ದ ಈ ನಗರದಲ್ಲಿ ನಿತ್ಯೋತ್ಸವ ಇತ್ತು ಎಂಬುದು ಐತಿಹ್ಯ. ತುಳು ಭಾಷೆಯೂ ರಾಜ ಭಾಷೆಯಾಗಿದ್ದು ತೌಳವ ಸಂಸ್ಕ್ರತಿಯ ಬಂಟ ಸಮುದಾಯ ಈ ನೆಲದಿಂದಲೇ ಪ್ರಾರಂಭವಾಯಿತು ಎಂಬ ಮಾತೂ ಇದೆ. ಸೀತಾನದಿ ದಡದಲ್ಲಿ ಉಜ್ಜಯನಿಯ ರಾಜ ವಿಕ್ರಮಾದಿತ್ಯನ ಸಿಂಹಾಸನವನ್ನು ಬೇತಾಳ ಮತ್ತಿತರ ಶೈವ ಗಣಗಳ ಸಮೇತವಾಗಿ ಬಾರ್ಕೂರಿನಲ್ಲಿ ಪ್ರತಿಷ್ಠಾಪಿಸಿದ ಕುಂಡೋದರ ಎಂಬ ಶಿವನ ಪ್ರಮಥಿ ಗಣವು ರಾಜ ಜಯವರ್ಮನನ್ನು ಭೂತಾಳ ಪಾಂಡ್ಯ ಎಂಬ ಹೆಸರಿನಿಂದ ಕರೆದು ಅಂದಿನಿಂದ ಅಳಿಯಕಟ್ಟು ಪರಂಪರೆ ನಾಂದಿ ಹಾಡಿತು ಎಂಬ ಸ್ಥಳ ಐತಹ್ಯವೂ ಪ್ರಚಲಿತದಲ್ಲಿದೆ. ಕರಾವಳಿಯ ಮೂಲ ನೆಲೆಯಿಂದ ಪ್ರಕಟಗೊಂಡ ಈ ಬಂಟ ಸಮುದಾಯಯವೂ ವಿಶ್ವದಾದ್ಯಂತ ಪಸರಿಸಿ ತನ್ನನ್ನು ತೊಡಗಿಸಿಕೊಂಡ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆಯ ಯಶ್ವಸಿಯನ್ನು ಕಂಡುಕೊಂಡಿದೆ. ಅಳಿಯಕಟ್ಟು ಪರಂಪರೆಯ ಬಹುತೇಕ ಸಮುದಾಯಗಳ ಸಂಘಟನೆ ಹಾಗೂ ಸಮೃದ್ಧಿಗಳ ಅಭಿವೃದ್ಧಿಗಾಗಿ ಜ್ಞಾನವಂತರು, ವೇದಾಂತಿಗಳು, ಇತಿಹಾಸ, ಸಂಸ್ಕ್ರತಿ ವಿಜ್ಞಾನದ ವಿದ್ಯಾಸಂಪನ್ನರನ್ನು ಗುರುಗಳಾನ್ನಾಗಿ ಸ್ವೀಕರಿಸಿ ಮಹಾಸಂಸ್ಥಾನಗಳನ್ನು ಸ್ಥಾಪಿಸಿ ಭೂತಾರಾಧನೆಯ ಮೂಲ ನೆಲೆ ಬಾರ್ಕೂರಿನಲ್ಲಿ ದೈವ ದೇಗುಲಗಳ ಮತ್ತು ಅಳಿಯಕಟ್ಟು ಪರಂಪರೆಯ ಮಹಾಸಂಸ್ಥಾನವನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿ, ಕನ್ನಡನಾಡು ಕಂಡ ಹೆಮ್ಮೆಯ ಆಧ್ಯಾತ್ಮಕ ಗುರುಗಳು ಅಭಿನವ ಧನ್ವಂತರಿ, ಅಭಿನವ ಭಾರ್ಗವ, ಆಧ್ಯಾತ್ಮ ಭಾಸ್ಕರ ಮತ್ತು ವಿದ್ಯಾಭೂಷಣ ಎಂಬ ಬಿರುದಾಂಕಿತ ಹರಿಹರಾತ್ಮಜ ಪೀಠಾಧಿಪತಿಗಳಾದ ಕುಟೀಚಕ ಪರಂಪರೆಯ ಋಷಿ ಸಿಂಹಾಸನದ ಪರಿವ್ರಾಜಾಕಾಚಾರ್ಯವರ್ಯ ಶ್ರೀ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಬಿನ್ನಯಿಸಿಕೊಂಡು ಸುಮಾರು 5 ಸಾವಿರ ಬಂಟ ಸಮುದಾಯದ ನೇತಾರರ ಸಮ್ಮುಖದಲ್ಲಿ ಭೂಮಿ ಪೂಜೆ ಮಾಡುವುದರ ಮುಖಾಂತರ ಶ್ರೀ ಸಂಸ್ಥಾನವನ್ನು ಸ್ಥಾಪಿಸಲಾಯಿತು.

ಸುಮಾರು 1 ಸಾವಿರ ವರ್ಷಗಳ ಹಿಂದೆ ಅವನತಿಗೊಂಡಿದ್ದ ಬಾರ್ಕೂರು ರಾಜಸಂಸ್ಥಾನವು ಆಧ್ಯಾತ್ಮ ಸಂಸ್ಥಾನವಾಗಿ ಪುನರುತ್ಥಾನಗೊಂಡು ಸುಮಾರು 2 ಎಕರೆ ಮೂಲ ಜಾಗವನ್ನು ಗುರುತಿಸಿ ಶ್ರೀ ಸಂಸ್ಥಾನದ ಟ್ರಸ್ಟಿನ ಹೆಸರಲ್ಲಿ ಕ್ರಯಮಾಡಿ ಸರ್ಕಾರದ ನೊಂದಣಿಯಲ್ಲಿ 2015 ರಲ್ಲಿ ದಾಖಲಿಸಿಕೊಂಡಿತು. ಈ ಮೂಲ ಸ್ಥಳದಲ್ಲಿ ಅಳಿಯಕಟ್ಟು ಸಮುದಾಯದ ಎಲ್ಲ ದೈವಗಳನ್ನು ನಂಬಿ ಸ್ಥಾಪಿವುಸುದರ ಮುಖಾಂತರ ಪರ ಊರಿನಲ್ಲೂ ಮತ್ತು ಕರಾವಳಿಯಲ್ಲೂ ವಾಸಿಸುವ ಬಹುತೇಕರಿಗೆ ದೈವದ ನೆಲೆ, ಮಣೆ, ಮಂಚ, ಮಾಗಣೆ, ಹಾಡಿ, ಗುಡಿ, ಆದಿಸ್ಥಳ ಹೊಂದಿಲ್ಲದವರೂ ನೇರವಾಗಿ ಈ ಮೂಲ ನಲೆಯಲ್ಲಿ ಬಂದು ಅವರವರ ದೈವಕ್ಕೆ ಪೂಜೆ, ಜಕಣಿ ಬಳಸುವಿಕೆ ಮತ್ತು ಕೋಲಗಳನ್ನು ಮಾಡಿಸಿಕೊಳ್ಳುವುದರ ಮುಖೇನ ತಾವು ಪರದೇಶಿಗಳಲ್ಲ ಎಂಬ ಅಂಬುಗೆಯೊಂದಿಗೆ ನಂಬುಗೆಯ ಶ್ರದ್ಧಾ ಕೇಂದ್ರವಾಗಿ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಲಾಗುವುದು ಅಲ್ಲದೇ ಕಡು ಬಡವನಿಗೂ ತನ್ನ ಕುಟುಂಬದ ಭೂತಾರಾಧನೆ ಹಾಗೂ ನಾಗಾರಾಧನೆಯನ್ನು ಸರಳತೆಯಲ್ಲಿ ಮೂಢನಂಬಿಕೆ ರಹಿತವಾಗಿ ಮೂಲನಂಬಿಕೆಯ ಅಡಿಯಲ್ಲಿ ಕೈಗೆಟುಕುವ ರೀತಿಯಲ್ಲಿ ಆಯಾ ಸಮುದಾಯದ ಪರಂಪರೆಯಂತೆ ಆರಾಧಿಸಿಕೊಳ್ಳಲೂ ಅನುವುಮಾಡಿಕೊಡುವುದು. ಆಡಳಿತ ಬಂಟ ಸಮುದಾಯದದ್ದಾಗಿದ್ದರೂ ಸೇವಾ ಅನುಕೂಲ ಸರ್ವರಿಗೂ ಒದಗಿಸಲಾಗುವುದು ಸುಮಾರು 250 ಕ್ಕೂ ಹೆಚ್ಚು ದೈವಗಳನ್ನು ಮತ್ತು ನಾಗನ ಸಾನಿಧ್ಯವನ್ನು ಕಲ್ಪಿಸಿಕೊಳ್ಳುವ ಈ ಕ್ಷೇತ್ರವೂ ಪ್ರಪಂಚದಲ್ಲೇ ಭೂತಾರಾಧನೆಯ ಕೇಂದ್ರ ಸ್ಥಾನವಾಗಲಿದೆ.

ಸ್ವಾಮೀಜಿಯವರ ಕನಸಿನಂತೆ ಸದ್ಯ ಬಾರ್ಕೂರಿನಲ್ಲಿ 1.5 ಎಕರೆ ಜಾಗದಲ್ಲಿ 171 ಅಡಿ ಅಗಲ 171 ಅಡಿ ಉದ್ದದ ವೃತ್ತಾಕಾರದ ಭವ್ಯವಾದ ಕ್ಷೇತ್ರ ನಿರ್ಮಾಣವಾಗಿದೆ. ನಾಲ್ಕು ದಿಕ್ಕಿನಲ್ಲೂ ಬಾಗಿಲುಗಳಿರುವ ಈ ಕ್ಷೇತ್ರದಲ್ಲಿ ಒಟ್ಟು 1008 ಕಂಬಗಳಿದ್ದು, ಸುಮಾರು 5000 ಮಂದಿ ಭಕ್ತಾದಿಗಳು ಕುಳಿತು ಏಕ ಕಾಲದಲ್ಲಿ ದೈವದ ಕಾರ್ಯಕ್ರಮ ವಿಕ್ಷೀಸುವ ವ್ಯವಸ್ಥೆ ಶ್ರೀ ಸಂಸ್ಥಾನದಲ್ಲಿ ಮಾಡಲಾಗಿದೆ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ಸಂಸ್ಥಾನವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ದೈವ ದೇಗುಲವಾಗಿದೆ. ದೇವಾಲಯದ ಒಳಗೆ ಎರಡು ಗುಡಿಗಳು ಇರಲಿದ್ದು ಒಂದರಲ್ಲಿ ಕುಂಡೋಧರ ಮತ್ತು ಪರಿವಾರ ದೈವಗಳ ಮರದ ವಿಗ್ರಹಗಳು ಹಾಗೂ ಇನ್ನೊಂದರಲ್ಲಿ ಕಂಚಿನ ತೆಂಕಿನ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ. ಶ್ರೀ ಸಂಸ್ಥಾನಕ್ಕಾ ಪಾಯ ತೆಗೆಯುವಾಗ ಸಿಕ್ಕ 36 ನಾಗನ ಕಲ್ಲು ಮತ್ತು ಹೊಸದಾಗಿ 9 ನಾಗ ಕಲ್ಲುಗಳನ್ನು ನಾಗ ಸಾನಿಧ್ಯದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ವಿಶೇಷವಾಗಿ ದೈವ ದೇಗುಲದ ಮೇಲ್ಬಾಗದಲ್ಲಿ ಬೃಹತ್ದಾಕರದ ಛತ್ರಿ ಮಳೆ ಬಿಸಿಲಿನಿಂದ ರಕ್ಷಣೆ ನೀಡಲಿದ್ದು, ಕ್ಷೇತ್ರದ ಮುಖ್ಯ ಆಕರ್ಷಣೆಗಳಲ್ಲಿ ಇಂದು ಒಂದಾಗಲಿದೆ.

ಏಪ್ರಿಲ್ 19ರಂದು ಬೇರೆ ಬೇರೆ ಕಡೆಯ ಹೊರೆ ಕಾಣಿಕೆಗಳು ಒಟ್ಟುಗೂಡಿಸಿ ಬ್ರಹ್ಮಾವರದ ಗಾಂಧಿ ಮೈದಾನದಿಂದ ಹೊರಟು ಮೆರವಣಿಗೆಯ ಮೂಲಕ ಸಂಸ್ಥಾನಕ್ಕೆ ಕರೆ ತರಲಾಗುವುದು. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್, ಸಚಿವ ಪ್ರಮೋದ್ ಮಧ್ವರಾಜ್, ಶ್ರೀ ಕುಕ್ಕೆ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಅತಿಥಿಗಳು ಉಪಸ್ಥಿತರಿರಲಿದ್ದಾರೆ. ಏಪ್ರಿಲ್ 20ರಂದು ತುಳುನಾಡಿನ ಪ್ರಾಚೀನ ಪದ್ಧತಿ ಪರಂಪರೆಯಲ್ಲಿ ಪಾಡ್ದನ ಮತ್ತು ನುಡಿ ಮಂತ್ರಗಳ ಸಹಿತ ದೈವ ದೇವರುಗಳ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೋಡಿಮಠದ ಶ್ರೀ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಕೇಂದ್ರ ಸಚಿವ ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು ಮತ್ತು ಅನೇಕ ಗಣ್ಯರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಏಪ್ರಿಲ್ 21ರಂದು ಮಹಾ ನಾಗಮಂಡಲೋತ್ಸವ ನಡೆಯಲಿದ್ದು, ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುತ್ತೂರು ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶಿರೂರು ಮಠದ ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಮೂರು ಸಾವಿರ ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಗುರುಸಿದ್ಧರಾಜ ಯೋಗಿಂದ್ರ ಮಹಾಸ್ವಾಮಿಗಳು, ಸಿದ್ಧಗಂಗ ಮಠದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಶಬರಿಮಲೆ ಪಂದಳ ರಾಜ ವಂಶಸ್ಥರಾದ ರಾಜ ಕೇರಳ ವರ್ಮ ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಸ್ಥಾನ ಲೋಕಾರ್ಪಣೆ ಮಾಡಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಧ್ಯಕ್ಷತೆವಹಿಸಲಿದ್ದಾರೆ.


Spread the love