ಬಾಲಭವನದಿಂದ ಮಕ್ಕಳ ಸರ್ವಾಂಗಿಣ ಬೆಳವಣಿಗೆ- ಗ್ರೇಸಿ ಗೋನ್ಸಾಲ್ವಿಸ್

Spread the love

ಬಾಲಭವನದಿಂದ ಮಕ್ಕಳ ಸರ್ವಾಂಗಿಣ ಬೆಳವಣಿಗೆ- ಗ್ರೇಸಿ ಗೋನ್ಸಾಲ್ವಿಸ್

ಉಡುಪಿ: ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಏರ್ಪಡಿಸುವ ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಹೇಳಿದ್ದಾರೆ.

ಅವರು ಬುಧವಾರ ಉಡುಪಿ ಬಾಲಭವನದಲ್ಲಿ, ಬಾಲಭವನ ಸೊಸೈಟಿ ಬೆಂಗಳೂರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾ ಬಾಲ ಭವನ ಸಮಿತಿ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ದಿ ಯೋಜನೆ ಉಡುಪಿ, ತಾಲೂಕು ಬಾಲಭವನ ಸಮಿತಿ ಉಡುಪಿ ತಾಲೂಕು, ಲಯನ್ಸ್ ಕ್ಲಬ್ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವಾರಾಂತ್ಯದಲ್ಲಿ 2 ದಿನ ಅಗತ್ಯ ತರಬೇತಿಯನ್ನು ಬಾಲ ಭವನದಲ್ಲಿ ನೀಡಲಾಗುತ್ತಿದೆ, ಮಕ್ಕಳಲ್ಲಿ ಶಿಸ್ತು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ ಅಲ್ಲದೇ ಮಕ್ಕಳ ಸಾಧನೆಯನ್ನು ಗುರುತಿಸಿ ಅಸಾಧಾರಣ ಪ್ರಶಸ್ತಿಯನ್ನು ಇಲಾಖೆಯು ನೀಡುತ್ತಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳುತ್ತಿದ್ದು, ಪೋಷಕರು ಈ ಎಲ್ಲಾ ಕಾರ್ಯಕ್ರಮಗಳ ಪ್ರಯೋಜನವನ್ನು ತಮ್ಮ ಮಕ್ಕಳಿಗೆ ತಲುಪಿಸಬೇಕು ಎಂದು ಗ್ರೇಸಿ ಗೋನ್ಸಾಲ್ವಿಸ್ ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಸಾಧಾರಣ ಸಾಧನೆ ತೋರಿದ, ಸ್ವರೂಪ್ ಕುಮಾರ್, ಶ್ರೇಯಾ, ಧರಿತ್ರಿರಾವ್, ಸುಶಾಂತ್ ರವರಿಗೆ ಜಿಲ್ಲಾ ಮಟ್ಟದ ಅಸಾಧಾರಣ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು

ಅತಿಥಿಯಾಗಿ ಭಾಗವಹಿಸಿದ್ದ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ ನಾರಾಯಣ ಮಾತನಾಡಿ, ಮಕ್ಕಳು ಕಲಿಕೆಯ ರಾಯಭಾರಿಗಳಾಗಬೇಕು, ತಾವು ಕಲಿತದ್ದನ್ನು ಮತ್ತೊಬ್ಬರಿಗೂ ತಿಳಿಸಬೇಕು, ಪುಸ್ತಕಗಳನ್ನು ಓದಿ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಹೇಳಿದರು.

ಧಾರವಾಡ ಬಾಲ ವಿಕಾಸ ಅಕಾಡೆಮಿ ಸದಸ್ಯ ತಿಮ್ಮಪ್ಪ ಶೆಟ್ಟಿ ಮಾತನಾಡಿ, ರಜೆ ಎನ್ನುವುದು ಮಕ್ಕಳಿಗೆ ಸಜೆ ಆಗದೆ ಮಜೆ ಆಗಬೇಕು, ಮಕ್ಕಳಲ್ಲಿ ಸುಪ್ತವಾಗಿರುವ, ಸೃಜನಶೀಲತೆ, ಕಲಾತ್ಮಕತೆ ಈ ರೀತಿಯ ಬೇಸಿಗೆ ಶಿಬಿರಗಳಿಂದ ಹೊರ ಹೊಮ್ಮಬೇಕು, ಮಕ್ಕಳ ಆತ್ಮಸ್ಥೈರ್ಯ ಹೆಚ್ಚಸಲು ಈ ಶಿಬಿರಗಳಿಂದ ಸಹಾಯಕವಾಗಲಿದೆ ಎಂದರು.
10 ದಿನಗಳ ಕಾಲ ಈ ಬೇಸಿಗೆ ಶಿಬಿರದಲ್ಲಿ 150 ಮಕ್ಕಳು ಭಾಗವಹಿಸಿದ್ದು, ಮಕ್ಕಳಿಗೆ ಚಿತ್ರಕಲೆ, ನೃತ್ಯ, ಸಂಗೀತ, ಕ್ರಾಪ್ಟ್, ಸಮೂಹ ಗಾಯನ, ಯೋಗ ಮತ್ತು ಕರಾಟೆ ತರಬೇತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಿಕ್ಷಕರಾದ, ಪ್ರವೀಣ್, ಹೇಮಲತಾ ರಾವ್, ಪ್ರಜ್ಞಾ ಮತ್ತು ಬಾಲ ಭವನದ ಮೇಲ್ವಿಚಾರಕ ಸರ್ವೇಶ್ವರ್ ಉಪಸ್ಥಿತರಿದ್ದರು.
ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಸ್ವಾಗತಿಸಿದರು.


Spread the love