ಬಾಲೆನ್ಸ್ ಕಳೆದುಕೊಂಡಿರುವ ಬಾಲೆನ್ಸ್ ಶೀಟ್; ಸಿದ್ದರಾಮಯ್ಯ ಬಜೆಟ್ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ: ಸಂಸದ ಕ್ಯಾ. ಚೌಟ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಬಾಲೆನ್ಸ್ ಕಳೆದುಕೊಂಡಿರುವ ಬರೀ ಬಾಲೆನ್ಸ್ ಶೀಟ್ ಆಗಿದ್ದು, ಒಂದು ವರ್ಗದವರ ಓಲೈಕೆಗಾಗಿಯೇ ಭರಪೂರ ಕೊಡುಗೆಗಳನ್ನು ನೀಡಿರುವ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಟೀಕಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಗ್ಯಾರಂಟಿಗಳಿಗೆ ನೀಡಿದ ಭರವಸೆಯಂತೆ, ನಿರುದ್ಯೋಗಿ ಭತ್ಯೆ, ಗೃಹಲಕ್ಷ್ಮಿ ಹಣವನ್ನೇ ಬಿಡುಗಡೆ ಮಾಡಲು ಪರದಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ 4 ಲಕ್ಷ ಕೋಟಿ ರೂ.ಗಳ ಅತಿದೊಡ್ಡ ಬಜೆಟ್ ಮಂಡಿಸಿ,1,16,000 ಕೋಟಿ ಸಾಲದ ಹೊರೆಯನ್ನು ಜನಸಾಮಾನ್ಯರ ಮೇಲೆ ಹೊರಿಸಿದ್ದಾರೆ. ಮತ್ತೊಂದೆಡೆ ಅಲ್ಪ ಸಂ,ಖ್ಯಾತರ ಹೆಸರಿನಲ್ಲಿ ವಕ್ಫ್ ಆಸ್ತಿಗಳ ರಕ್ಷಣೆಗೆ 150 ಕೋಟಿ ರೂ., ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಕೇಂದ್ರ ಸ್ಥಾಪನೆ, 100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ರೂ. ಅನುದಾನ, ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 1,000 ಕೋಟಿ ರೂ. ಅನುದಾನ, ಮುಸ್ಲಿಮರ ಮದುವೆಗೆ ಸಹಾಯಧನ, ವಕ್ಫ್, ಖಬರಸ್ಥಾನಗಳ ಮೂಲಸೌಕರ್ಯ 150 ಕೋಟಿ ರೂ. ಸರ್ಕಾರಿ ಗುತ್ತಿಗೆ, ಖರೀದಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿರುವುದು ನೋಡಿದರೆ ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಎತ್ತ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.
ಬಜೆಟ್ ಆರಂಭಕ್ಕೂ ಮುನ್ನ ಸಮ ಸಮಾಜದ ಆಶಯ ಒಳಗೊಂಡ ಎಲ್ಲಾ ವರ್ಗದ ಸರ್ವಾಂಗೀಣ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಬಜೆಟ್ ಎಂದು ಹೇಳಿರುವ ಸಿದ್ದರಾಮಯ್ಯನವರು ಅತ್ಯಂತ ಶೋಷಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳನ್ನೇ ಸಂಪೂರ್ಣ ಕಡೆಗಣಿಸಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹೆಣಗಾಡುವ ಈ ಸರ್ಕಾರ ಬರೀ ಮುಸ್ಲಿಮರಿಗೆ ಮಾತ್ರ ಸಾವಿರಾರು ಕೋಟಿ ಅನುದಾನ ಘೋಷಿಸಿರುವುದು ಮುಸ್ಲಿಂ ತುಷ್ಟೀಕರಣವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕರಾವಳಿಯಲ್ಲಿ ಹೈಕೋರ್ಟ್ ಪೀಠದ ಬೇಡಿಕೆ ಅತ್ಯಂತ ಪ್ರಮುಖವಾಗಿದ್ದು, ಅದರ ಪ್ರಸ್ತಾಪವೇ ಇಲ್ಲ. ಹಿಂದುಳಿದ, ಶೋಷಿತ ವರ್ಗಗಳ ಕಡೆಗಣನೆ ಮಾಡಲಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ್ಸ್ ನಿಗಮಕ್ಕೆ ಈ ಬಾರಿಯೂ ಪುಡಿಗಾಸು ನೀಡಿಲ್ಲ. ಮಂಗಳೂರು ಏರ್ಪೋರ್ಟ್ ರನ್ವೇ ವಿಸ್ತರಣೆ ಬಗ್ಗೆಯೂ ಯಾವುದೇ ಭರವಸೆ ನೀಡಿಲ್ಲ. ಕರಾವಳಿಗೆ ಸಂಬಂಧಿಸಿದಂತೆ ಹಲವಾರು ಹಳೇ ಪ್ರಸ್ತಾಪಗಳನ್ನೇ ಚರ್ವಿತಚರವಣ ಮಾಡುವ ಮೂಲಕ ಇಲ್ಲಿನ ಜನರ ಪಾಲಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಳೆದ 15 ಬಜೆಟ್ಗಳನ್ನು ಮಂಡಿಸಿ ಆರ್ಥಿಕ ಅನುಭವ ಹೊಂದಿರುವ ಸಿದ್ದರಾಮಯ್ಯನವರು ಈ ಬಾರಿ ಬಹಳ ದೂರದೃಷ್ಟಿಯ, ಆರ್ಥಿಕ ಸಂಪನ್ಮೂಲ ಕ್ರೋಢ್ರೀಕರಣಕ್ಕೆ ಪೂರಕವಾಗಿ ಸಮತೋಲಿನ ಬಜೆಟ್ ಮಂಡಿಸುತ್ತಾರೆ ಎನ್ನುವ ನಿರೀಕ್ಷೆ ಜನರಿಗೆ ಇತ್ತು. ಆದರೆ, ಕೃಷಿ, ಮೂಲಸೌಕರ್ಯ, ಗ್ರಾಮೀಣಭಿವೃದ್ಧಿ, ನೀರಾವರಿ ಸೇರಿದಂತೆ ಆದ್ಯತಾ ವಲಯಗಳಿಗೆ ಹೊಸ ಯೋಜನೆಗಳನ್ನು ಹೊಂದಿರುವ ಆಶಾದಾಯಕ ಬಜೆಟ್ ಮಂಡಿಸುವಲ್ಲಿ ಸಿದ್ದರಾಮಯ್ಯನವರು ಜನರ ನಿರೀಕ್ಷೆಗಳನ್ನೆಲ್ಲ ಹುಸಿಗೊಳಿಸಿದ್ದಾರೆ. ಹೀಗಾಗಿ, ಇದೊಂದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಬದಲಿಗೆ ಒಂದು ಸಮುದಾಯದವರನ್ನು ಪೋಷಿಸುವ ಕೋಮು ಪ್ರೇರಿತ ಬಜೆಟ್ ಅಂದರೂ ಅತಿಶೋಯುಕ್ತಿಯಲ್ಲ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
ಬಾಕ್ಸ್:
ಬಜೆಟ್ನಲ್ಲಿ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ ಯೋಜನೆಯಡಿ 1000ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಲಾಗಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರವು ಜಾತ್ಯತೀತ ದೇಶದಲ್ಲಿ ಒಂದು ಜಾತಿಯನ್ನು ಪ್ರತ್ಯೇಕಿಸಿ ಕೋಮು ದ್ವೇಷದ ಭಾವನೆ ಪ್ರಚೋದಿಸುವ ಕಾರ್ಯಕ್ರಮ ಜಾರಿಗೊಳಿಸುವುದಕ್ಕೆ ಹೊರಟಿದೆ. ಈ ಹಿಂದೆ ಮತೀಯ ಶಕ್ತಿಗಳು ಬೆಂಗಳೂರು ಗಲಭೆ ನಡೆಸಿ ಕಾನೂನನ್ನು ಕೈಗೆತ್ತಿಕೊಂಡು ಹೇಗೆ ಠಾಣೆಗಳ ಮೇಲೆಯೇ ದಾಳಿ ನಡೆಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಿರುವಾಗ, ಸಿದ್ದರಾಮಯ್ಯನವರ ಈ ರೀತಿಯ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಕರ್ನಾಟಕದ ಶಾಂತಿ, ಪ್ರಗತಿ, ಸಮೃದ್ಧಿಗೆ ದೊಡ್ಡ ಆತಂಕ ಸೃಷ್ಟಿಸಲಿದೆ ಎಂದು ಕ್ಯಾ. ಚೌಟ ಎಚ್ಚರಿಸಿದ್ದಾರೆ.