Home Mangalorean News Kannada News ಬಾಲ್ಯವಿವಾಹಕ್ಕೆ ಕಾದಿದೆ ಕಠಿಣ ಶಿಕ್ಷೆ : ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ

ಬಾಲ್ಯವಿವಾಹಕ್ಕೆ ಕಾದಿದೆ ಕಠಿಣ ಶಿಕ್ಷೆ : ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ

Spread the love

ಬಾಲ್ಯವಿವಾಹಕ್ಕೆ ಕಾದಿದೆ ಕಠಿಣ ಶಿಕ್ಷೆ : ಜಿಲ್ಲಾಧಿಕಾರಿ  ಡಾ. ಕೆ.ಜಿ. ಜಗದೀಶ

ಮ0ಗಳೂರು : ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಮಾಜದಲ್ಲಿನ ಸರ್ವರ ಸಹಕಾರ ಅತ್ಯಗತ್ಯವಾಗಿದೆ. ಬಾಲ್ಯವಿವಾಹ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದ್ದರೂ ಕೂಡ ಇನ್ನೂ ಕೂಡ ಬೆರಳಿಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿರುವುದು ತೀರ ವಿಷಾಧನೀಯ. ಈ ಕಾಯಿದೆಯಲ್ಲಿರುವ ತೀವ್ರ ಮತ್ತು  ಕಠಿಣ ಸ್ವರೂಪವಾದ  ದಂಡನೆ ಇದ್ದರೂ ಸಹ ಇದರ ಅರಿವು ಕೆಲವರಿಗೆ ತಿಳಿಯದ ಹಿನ್ನೆಲೆಯಲ್ಲಿ ಈ ರೀತಿ ಮರುಕಳಿಸುತ್ತಿದೆ ಎಂದು ಭಾವಿಸಲಾಗಿದೆ. ಈ ಕಾಯಿದೆಯಂತೆ ಬಾಲ್ಯವಿವಾಹ ಪ್ರಕರಣಗಳು ಸಾಬೀತಾದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ 2 ವರ್ಷದವರೆಗೆ ವಿಸ್ತರಿಸಬಹುದಾದ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ. ಹಾಗೂ 1 ಲಕ್ಷ ದಂಡವನ್ನು ವಿಧಿಸಲು ಸಾಧ್ಯವಿರುತ್ತದೆ. ಅಲ್ಲದೆ ಸ್ವಯಂ ಪ್ರೇರಿತವಾಗಿ  ದೂರು  ದಾಖಲಿಸಲು ಅವಕಾಶ ಇರುತ್ತದೆ.

        ಬಾಲ್ಯವಿವಾಹ ನಿಷೇಧದ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಶಿಬಿರಗಳನ್ನು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2011-12 ನೇ ಸಾಲಿನಿಂದ ಇದುವರೆಗೆ ಒಟ್ಟು 85 ಬಾಲ್ಯವಿವಾಹಗಳನ್ನು  ತಡೆಹಿಡಿಯಲಾಗಿದೆ. 2016-17ನೇ ಸಾಲಿನಲ್ಲಿ 2 ಹಾಗೂ 2017-18 ನೇ ಸಾಲಿನಲ್ಲಿ 3 ಬಾಲ್ಯವಿವಾಹಗಳು ನಡೆದಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ಪ್ರವೀಣ್ ಇವರ ಮೇಲೆ, ಮೂಡಬಿದ್ರೆ ಪೋಲಿಸ್ ಠಾಣೆಯಲ್ಲಿ ಲಕ್ಷ್ಮಿ, ಸಂದೀಪ್ ಮೊಗೆರಾಯ, ಭಾಸ್ಕರ್, ಪ್ರೇಮಲತಾ, ಲಕ್ಷ್ಮೀ ನಾರಾಯಣ ಇವರ ಮೇಲೆ, ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ರಾಮ್ ಅವ್‍ತಾರ್ ಇವರ ಮೇಲೆ, ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಶಾಂತ್, ಮಲ್ಲಿಕಪ್ಪ, ಜಯಮ್ಮ, ಪ್ರಭಾಕರ್ ರಾವ್, ಮೀನಾಕ್ಷಿ ಹಾಗೂ ಕೃಷ್ಣ ಮೂರ್ತಿ ಇವರ ಮೇಲೆ ಹಾಗೂ ಸುಳ್ಯ ಪೋಲಿಸ್ ಠಾಣೆಯಲ್ಲಿ ಅಂಗಾರ ಮತ್ತು ಸಂದೇಶ ಇವರ ಮೇಲೆ ಎಫ್.ಐ.ಆರ್‍ಗಳನ್ನು ಈಗಾಗಲೇ ದಾಖಲಿಸಲಾಗಿದೆ. ಈ ಪ್ರಕರಣಗಳು ತನಿಖೆಯಲ್ಲಿದೆ.

  ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧ ಸಮಿತಿಯು ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿದ್ದು ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ ನಿಯಂತ್ರಿಸುವ ಹೊಣೆಗಾರಿಕೆ ಈ ಸಮಿತಿಯದ್ದಾಗಿರುತ್ತದೆ.

    ಆದ್ದರಿಂದ ಬಾಲ್ಯವಿವಾಹವನ್ನು ತಡೆಗಟ್ಟಲು ಎಲ್ಲರೂ ಸನ್ನದ್ಧರಾಗಲು ವಿನಂತಿಸಿದೆ. ಮತ್ತು ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗುವ ಎಲ್ಲರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ  ಡಾ. ಕೆ.ಜಿ. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Spread the love

Exit mobile version