ಬಾಲ್ಯ ವಿವಾಹದಿಂದ ಮಾನವ ಹಕ್ಕು ಉಲ್ಲಂಘನೆ : ಜಿಪಂ ಸಿಇಒ ಪ್ರೀತಿ ಗೆಹ್ಲೋಟ್
ಉಡುಪಿ: ಬಾಲ್ಯ ವಿವಾಹದಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಮಾನವ ಹಕ್ಕು ಉಲ್ಲಂಘನೆ ಸಹ ಆಗಲಿದ್ದು, ಈ ಕುರಿತಂತೆ ಸಮಾಜದಲ್ಲಿ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ.
ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಇದರಿಂದ ಮಕ್ಕಳ ಬಾಲ್ಯವನ್ನು ಕಸಿಯುವ ಮೂಲಕ, ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಾನವ ಹಕ್ಕು ಉಲ್ಲಂಘನೆ ಆಗಲಿದ್ದು, ಮಕ್ಕಳ ಭವಿಷ್ಯ ಕುಂಟಿತಗೊಳ್ಳಲಿದೆ, ಅನೇಕ ಸಾಮಾಜಿಕ, ಆರ್ಥಿಕ ಮತ್ತು ಮೂಡನಂಬಿಕೆಗಳಿಂದ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ಈ ಸಮಸ್ಯೆಯನ್ನು ಬೇರು ಮಟ್ಟದಲ್ಲೇ ನಿರ್ಮೂಲನೆಗೊಳಿಸಬೇಕು, ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು, ಬಾಲ್ಯ ವಿವಾಹ ತಡೆಗಟ್ಟುವಿಕೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಪ್ರೀತಿ ಗೆಹ್ಲೋಟ್ ಹೇಳಿದರು.
ಡಿವೈಎಸ್ಪಿ ಜೈಶಂಕರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಇಲ್ಲವಾಗಿದ್ದು, ಜಿಲ್ಲೆಗೆ ಬರುವ ವಲಸಿಗರಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಾಣಸಿಗುತ್ತಿದ್ದು, ಅವರಲ್ಲಿ ಬಾಲ್ಯ ವಿವಾಹದ ನಿಷೇಧದ ಬಗ್ಗೆ ಅರಿವು ಮೂಡಿಸಿ, ಬಾಲ್ಯ ವಿವಾಹವನ್ನು ಸಂಪೂರ್ಣ ತೊಡೆದು ಹಾಕಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡುತ್ತಾ, ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗು. ಇದನ್ನು ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು, ವಿವಾಹವಾಗಲು ಹೆಣ್ಣು ಹಾಗೂ ಗಂಡು ಶಾರೀರಿಕ ಹಾಗೂ ಮಾನಸಿಕ ಸದೃಢವಾಗಿರಬೇಕು ಎನ್ನುವ ಉದ್ಧೇಶದಿಂದ ಹೆಣ್ಣಿಗೆ ಕನಿಷ್ಠ 18 ವರ್ಷ ಹಾಗೂ ಗಂಡಿಗೆ ಕನಿಷ್ಠ 21 ವರ್ಷ ವಯೋಮಿತಿಯನ್ನು ನಿಗಧಿಸಲಾಗಿದೆ. ಆದರೆ ಸಾಮಾಜಿಕ, ಶೈಕ್ಷಣಿಕ, ಹಣಕಾಸು ಹಾಗೂ ಸಾಂಪ್ರದಾಯಿಕ ಭಾವನೆಗಳ ಒತ್ತಡದಿಂದಾಗಿ ಹೆಣ್ಣು ಮಕ್ಕಳ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿದೆ.
ಬಾಲ್ಯ ವಿವಾಹಗಳಂತಹ ಆಚರಣೆಗಳಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಬಾಲ್ಯ ವಿವಾಹದಿಂದಾಗಿ ಆಗುವ ತೊಂದರೆಗಳ ಬಗ್ಗೆ ಜನರಿಗೆ ತಿಳಿ ಹೇಳಬೇಕು. ಅದರಲ್ಲೂ ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯ. ಬಾಲ್ಯ ವಿವಾಹ ತಡೆಯುವ ವೇಳೆ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಅನೇಕ ತೊಂದರೆಗಳು ಎದುರಾಗುತ್ತಿದ್ದು, ಅಧಿಕಾರಿಗಳು ಜನರಿಗೆ ಸೂಕ್ತ ರೀತಿಯಲ್ಲಿ ಕೌನ್ಸಿಲಿಂಗ್ ಮಾಡಿ ಮನವರಿಕೆ ಮಾಡುವ ಸಾಮಥ್ರ್ಯ ಹೊಂದಬೇಕು. ಹಾಗೂ ಬಾಲ್ಯ ವಿವಾಹ ಕಂಡುಬಂದಲ್ಲಿ ಚೈಲ್ಡ್ ಹೆಲ್ಪ್ಲೈನ್ ಸಂಖ್ಯೆ 1098 ಮಾಹಿತಿ ನೀಡುವ ಮೂಲಕ ಇದನ್ನು ತಡೆಯಲು ಸಾಧ್ಯವಿದೆ ಎಂದರು.
ಬಾಲ್ಯವಿವಾಹ ತಡೆಯುವಲ್ಲಿ ಅಧಿಕಾರಿಗಳು ಮಾತ್ರವಲ್ಲದೇ ಸಾಮೂಹಿಕ ವಿವಾಹ ಆಯೋಜಕರು, ಕಲ್ಯಾಣ ಮಂಟಪಗಳ ಮಾಲೀಕರು, ವಿವಾಹ ಆಮಂತ್ರಣ ಪತ್ರಿಕೆ ಮುದ್ರಕರು, ದೇವಾಲಯಗಳ ಸಿಬ್ಬಂದಿ ಸಹ ಸೂಕ್ತ ಅರಿವು ಹೊಂದಿದ್ದು, ಸಮರ್ಪಕ ದಾಖಲಾತಿಗಳ ಪರಿಶೀಲನೆ ನಂತರವೇ ವಿವಾಹಕ್ಕೆ ಅನುಮತಿ ನೀಡಬೇಕು ಇಲ್ಲವಾದಲ್ಲಿ ಮಕ್ಕಳ ಪೋಷಕರು ಸೇರಿದಂತೆ ವಿವಾಹಕ್ಕೆ ಸಹಕರಿಸಿದ ಎಲ್ಲರೂ ಶಿಕ್ಷಾರ್ಹರಾಗುತ್ತಾರೆ ಎಂದು ನ್ಯಾ. ಕಾವೇರಿ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಸಂಕಪ್ಪ ಎ, ಡಾ.ಶಶಿ ಜಾಯ್ಸ್ ಸೋನ್ಸ್, ಲೀಲಾವತಿ ಬಾಲ್ಯ ವಿವಾಹ ಕಾಯ್ದೆ, ಬಾಲ್ಯ ವಿವಾಹದ ದುಷ್ಪರಿಣಾಮಗಳು, ಬಾಲ್ಯ ವಿವಾಹ ನಿರ್ಮೂಲನೆ ಕುರಿತಂತೆ ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸದಸ್ಯರು, ಕಲ್ಯಾಣ ಮಂಟಪಗಳ ಪ್ರತಿನಿಧಿಗಳು, ದೇವಾಲಯಗಳ ಅರ್ಚಕರು, ಮುದ್ರಣ ಸಂಸ್ಥೆಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ನಿರೂಪಿಸಿದರು.