ಬಾಲ್ಯ ವಿವಾಹ: ಕ್ರಿಮಿನಲ್ ಕೇಸ್ ದಾಖಲಿಸಲು ಡಿ.ಸಿ ಸೂಚನೆ
ಸಾಮಾನ್ಯವಾಗಿ ಬಾಲ್ಯ ವಿವಾಹ ನಡೆಯುವ ಮಾಹಿತಿ ಸಿಕ್ಕರೆ ಆ ಸಮುದಾಯದ ಜನರಿಗೆ ತಿಳುವಳಿಕೆ ನೀಡಬೇಕು. ಮಾತಿಗೆ ಒಲಿಯದಿದ್ದಲ್ಲಿ ಅಂತವರ ವಿರುದ್ಧ ಕ್ರೀಮಿನಲ್ ಕೇಸ್ ದಾಖಲಿಸಲು ಎಂದು ದ.ಕ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.a
ಅವರು ಜಿಲ್ಲಾಧಿಕಾರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ಅಧಿಕಾರಿಗಳು ಬಾಲ್ಯ ವಿವಾಹ ತಡೆಯುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಅನುಮಾನ ಬಂದಲ್ಲಿ ದಾಖಲೆಗಳನ್ನು ಪರಿಶೀಲಿಸಬೇಕು, ವೈದ್ಯರ ಅಭಿಪ್ರಾಯವನ್ನು ಪಡೆಯಬೇಕು. ಬಾಲ್ಯ ವಿವಾಹ ತಡೆಯುವ ಕಾರ್ಯಚರಣೆಯಲ್ಲಿ ಅಧಿಕಾರಿಗಳ ಸಹಕಾರ ಸಿಗದಿದ್ದಲ್ಲಿ ಉನ್ನತ ಅಧಿಕಾರಿಗಳ ಗಮನಕ್ಕೆ ತನ್ನಿ. ಮಾಹಿತಿ ಸಿಕ್ಕಿದಾಗ ಸಂಪೂರ್ಣ ತಯಾರಿ ಮತ್ತು ಸರಿಯಾದ ತಂಡದ ಜೊತೆ ಸ್ಥಳಕ್ಕೆ ಭೇಟಿ ನೀಡಲು ಅವರು ತಿಳಿಸಿದರು.
ಕೌಟುಂಬಿಕ ಹಿಂಸೆ ತಡೆ ಕಾಯ್ದೆ ಜಿಲ್ಲಾ ಮಟ್ಟದ ಸಮಿತಿ ಸಭೆ: ಮಹಿಳೆಯೊಬ್ಬಳು ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದರೆ ಅದರಲ್ಲಿ ಯಾವದೇ ರೀತಿಯ ಮುಲಾಜು ಬೇಡ. ಹಿಂಸೆ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವುದು, ಕೆಲಸದ ಕಛೇರಿಗೆ ಹೋಗಿ ಕಿರಿಕುಳ ನೀಡುವುದು, ಮಕ್ಕಳಿಗೆ ಶಾಲೆಯ ಹತ್ತಿರ ಹೋಗಿ ಹಿಂಸೆ ನೀಡುವಂತಹ ದೌರ್ಜನ್ಯ ನಡೆಯುವುದು ತಪ್ಪು. ಯಾರಿಗೂ ಯಾರನ್ನು ಹಿಂಸಿಸುವ ಅಧಿಕಾರವಿಲ್ಲ. ಮಹಿಳೆಯರ ಸಂರಕ್ಷಣಾ ಕಾಯ್ದೆನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅವರು ಸೂಚಿಸಿದರು.
ಜಿಲ್ಲಾ ಐಸಿಡಿಎಸ್ ಮೇಲ್ವಿಚಾರಣಾ ಮತ್ತು ಉಸ್ತುವಾರಿ ಸಮಿತಿ ಸಭೆ: ಮಾತೃಪೂರ್ಣ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚಿಸಿರುವಂತೆ ವಾರದಲ್ಲಿ ಒಂದು ದಿನ ಎಲ್ಲಾ ಮಹಿಳೆಯರನ್ನು ಸೇರಿಸಿ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಹಂಚಿ ತಿನ್ನುವ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಜಿಲ್ಲಾಧಿಕಾರಿ ಹರ್ಷ ವ್ಯಕ್ತಪಡಿಸಿದರು. ಗರ್ಭಿಣಿ ಬಾಣಂತಿಯವರಿಗೆ ಮಧ್ಯಾಹ್ನದ ಬಿಸಿಯೂಟ ಸ್ವೀಕರಿಸಲು ಅಂಗನವಾಡಿ ಸೆಳೆಯಲು ವಾರದಲ್ಲಿ ಒಂದು ದಿನ ಎಲ್ಲಾ ಮಹಿಳೆಯರನ್ನು ಸೇರಿಸಿ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಹಂಚಿ ತಿನ್ನುವ ಕಾರ್ಯಕ್ರಮ ಪ್ರಾರಂಭವಾಗಿದರಿಂದ ಮಹಿಳೆಯರ ನಡುವೆ ಉತ್ತಮ ರೀತಿಯಲ್ಲಿ ಸಮುದಾಯ ಭಾವನೆ ಮೂಡುತ್ತದೆ. ಒಂದು ದಿನ ಒಬ್ಬ ಮಹಿಳೆಗೆ, ಮನೆಯಲ್ಲಿ ತಯಾರಿಸಿದ ಅಡುಗೆ, ತಿಂಡಿ ತಿನಸುಗಳನ್ನು ಅಂಗನವಾಡಿಗೆ ತಂದು ಹಂಚಿ ತಿನ್ನಲು ಅವಕಾಶ ಮಾಡಿಕೊಡುವಂತೆ ಸೂಚಿಸಿದರು. ಈ ಯೋಜನೆಗೆ “ಸ್ನೇಹ ಸಿಂಚನ” ಎಂಬ ಹೆಸರನ್ನು ಇಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಡಿಮೆ ತೂಕದ ಮಕ್ಕಳನ್ನು ಹೆತ್ತವರು ಎನ್.ಆರ್.ಸಿ ಸೆಂಟರ್ ಗೆ ಕರೆತರುವಂತೆ ಹೆತ್ತವರನ್ನು ಮನವೊಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯ ಮಾತನ್ನು ಕಡೆಗಣಿಸುವ ಸಾಧ್ಯತೆ ಹೆಚ್ಚು. ಆದರಿಂದ ಆರೋಗ್ಯ ಇಲಾಖೆಗೆ ಸಂಬಂದಿಸಿದ ಉನ್ನತ ಅಧಿಕಾರಿ ಈ ಕುರಿತು ಹೆತ್ತವರ ಮನವರಿಕೆ ಮಾಡಬೇಕು. ಈ ಕಾರ್ಯವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಕನಿಷ್ಠ ಮನೆಯಲ್ಲಿಯಾದರೂ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವಂತೆ ಹೆತ್ತವರಿಗೆ ಅರಿವು ಮೂಡಿಸುವಂತೆ,ಹೆತ್ತವರ ಮೇಲೆ ಒತ್ತಡ ಹೇರುವಂತೆ ಡಾ. ಸಸಿಕಾಂತ್ ಸೆಂಥಿಲ್ ಸೂಚಿಸಿದರು.
ಅಂಗನವಾಡಿ ಕೇಂದ್ರದ ಅಸುಪಾಸು ಸ್ಥಳವಾಕಾಶವಿದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮತ್ತು ಕಿಚನ್ ಗಾರ್ಡನ್‍ಗೆ ಪ್ರೋತ್ಸಹ ನೀಡುವಂತೆ ಸೂಚಿಸಿದರು.
ಸಿಡಿ ಬಿಡುಗಡೆ: ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಇವರು ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸಲು ರಚಿಸಿದ “ಕಮರದಿರಲಿ ಬಾಲ್ಯ” ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ರಚಿಸಿದ “ಹೊಸಬೆಳಕು” ಎಂಬ 2 ವಿಡಿಯೋ ಸಿಡಿಗಳನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಎ. ಮತ್ತಿತರರು ಉಪಸ್ಥಿತರಿದ್ದರು.