ಬಾವಿಗೆ ಬಿದ್ದ ನಾಗರಹಾವು, ಹೆಬ್ಬಾವನ್ನು ಮೇಲಕ್ಕೆ ಎತ್ತಿದ ಐಟಿ ಉದ್ಯೋಗಿಗಳು!
ಉಡುಪಿ: ಮೂರು ದಿನಗಳಿಂದ ನೀರು ತುಂಬಿದ ಬಾವಿಗಳಲ್ಲಿ ಬಿದ್ದು ಒದ್ದಾಡುತ್ತಿದ್ದ ಹೆಬ್ಬಾವನ್ನು ಹಾಗೂ ನಾಗರಹಾವನ್ನು ಯುವಕರ ತಂಡವೊಂದು ರಕ್ಷಣೆ ಮಾಡಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಕೊರಂಗ್ರಪಾಡಿ ಮನೆಯೊಂದರ ಬಾವಿಗೆ ಹೆಬ್ಬಾವು ಬಿದ್ದು ಮೇಲೆ ಬರಲು ಒದ್ದಾಡುತ್ತಿರುವುದರ ಕುರಿತು ಮಾಹಿತಿ ಪಡೆದ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಅಕ್ಷಯ್ ಶೇಟ್ ತನ್ನ ಸಂಗಡಿಗರಾದ ವೃಂದಾ, ದೇವಿಕಾ, ಅರುಂದತಿ ಹಾಗೂ ಇತರರೊಂದಿಗೆ ತೆರಳಿ ಬಲೆಯನ್ನು ಹಾಕುವುದರ ಮೂಲಕ ಮೆಲಕ್ಕೆ ಎತ್ತಿದರು ಬಳಿಕ ಪಶು ವೈದ್ಯರಿಗೆ ಸಂಪರ್ಕಿಸಿ ಹೆಬ್ಬಾವು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಕಾಡಿಗೆ ಬಿಡಲಾಯಿತು.
ಅಂತೆಯೇ ಅಲೆವೂರು ಸಮೀಪದ ಮನೆಯೊಂದರ ಬಾವಿಯಲ್ಲಿ ಬಿದ್ದ ನಾಗರಹಾವನ್ನು ಕೂಡ ಇದೇ ತಂಡ ತೆರಳಿ ಮೆಲಕ್ಕೆ ಎತ್ತಿದ್ದು ಇವರ ಸೇವೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.