‘ಬಿಎಸ್ಎನ್ಎಲ್ಗೆ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಿಸಿ’ – ಮೀನಾಕ್ಷಿ ಶಾಂತಿಗೋಡು
ಮಂಗಳೂರು: ಪಂಚಾಯಿತಿಗಳಲ್ಲಿ ಆನ್ಲೈನ್ ವ್ಯವಸ್ಥೆಗೆ ಲೋಪ ಬಾರದಂತೆ, ತಾಂತ್ರಿಕ ಅಡಚಣೆಗಳು ಸಂಭವಿಸಿದಾಗ 24 ಗಂಟೆಗಳೊಳಗಾಗಿ ಸರಿಪಡಿಸಲು ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಎಂಬ ಸಿಇಒ ಸೂಚನೆಯನ್ನು ಪಾಲಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಜಿಲ್ಲಾ ಪಂಚಾಯತ್ನ 14ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಪಂಚಾಯಿತಿ ಮಟ್ಟದಲ್ಲಿ ಹಲವು ಜನಪರ ಸೇವೆಗಳನ್ನು ಆನ್ಲೈನ್ ಮುಖಾಂತರವೇ ದಾಖಲಿಸಲಾಗುತ್ತಿದ್ದು ಬಿಎಸ್ಎನ್ಎಲ್ ಸೇವಾ ವ್ಯತ್ಯಯದಿಂದ ಜನರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಜಿಲ್ಲಾ ಪಂಚಾಯತ್ ಗಮನಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಸೇವೆ ಹಾಗೂ ನಿರ್ವಹಣೆಗೆ ಆದ್ಯತೆ ನೀಡಬೇಕೆಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಸೂಚನೆ ನೀಡಿದರು.
2015ರಲ್ಲಿ ಆರಂಭಿಸಲಾದ ನೂತನ ಗ್ರಾಮ ಪಂಚಾಯತಿಗಳಿಗೆ ಇನ್ನೂ ಮೂಲಸೌಕರ್ಯ ನೀಡದ ಬಗ್ಗೆ ಸ್ವಂತ ಕಟ್ಟಡ ರಚನೆಗೆ ನಿವೇಶನ ನೀಡದ ಬಗ್ಗೆ ಸದಸ್ಯ ಷಾಹುಲ್ ಹಮೀದ್ ಅವರು ಸಭೆಯ ಗಮನಸೆಳೆದರು. ನಾಲ್ಕು ವರ್ಷ ಕಳೆದರೂ ಮೂಲಸೌಕರ್ಯ ಬೆಳ್ತಂಗಡಿ ತಾಲೂಕಿನ ತೆಕ್ಕಾರಿಗೆ ಲಭ್ಯವಾಗದ ಬಗ್ಗೆ ವಿವರಿಸಿದರು. ಇರುವೈಲ್ ಗೆ ಕಟ್ಟಡದ ಅಗತ್ಯವಿದೆ ಎಂದು ಸದಸ್ಯರಾದ ಸುಚರಿತ ಶೆಟ್ಟಿ ಹೇಳಿದರು.
ಕೆಆರ್ಐಡಿಎಲ್ ಸಂಸ್ಥೆ ಆರಂಭಿಸಿದ ಆರ್ಒ ಪ್ಲಾಂಟ್ನ ಬಗ್ಗೆ ಸಭೆಯಲ್ಲಿ ವಿಸ್ತøತ ಚರ್ಚೆ ನಡೆದು ಇನ್ನೂ ಆರಂಭವಾಗದ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸದೆ ಕುಡಿಯುವ ನೀರಿಗೆ ಸಂಬಂಧಿಸಿ ಅನುದಾನದ ಸದ್ಬಳಕೆಯ ಜೊತೆಗೆ ಕೆಆರ್ಐಡಿಎಲ್ಗೆ ಹೊಸದಾಗಿ ಆರ್ಒ ಘಟಕ ಆರಂಭಿಸಲು ಅನುಮತಿ ನೀಡದಂತೆ ಸದನದ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು. ಸ್ವಚ್ಛಭಾರತ್ ಮಿಷನ್ ವಿಷಯ ಚರ್ಚೆಯಲ್ಲಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ 2000 ಕ್ಕೂ ಹೆಚ್ಚಿದ್ದು ಈ ವಿಷಯವಾಗಿ ಚರ್ಚಿಸಲು ವಿಶೇಷ ಸಭೆ ಕರೆಯುವುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೇಳಿದರು.
ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಲು ಎಲ್ಲ ಗ್ರಾಮಪಂಚಾಯತುಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸಿಇಒ ಡಾ ಸೆಲ್ವಮಣಿ ಆರ್ ಹೇಳಿದರಲ್ಲದೆ, ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಇಂದು ಚರ್ಚಿಸಲಾದ ಕಂದಾಯ ಇಲಾಖೆ ಸಮಸ್ಯೆಗಳಿಗೆ ನೋಡಲ್ ಅಧಿಕಾರಿ ಮಾಣಿಕ್ಯಂ ಅವರು ಉತ್ತರ ನೀಡಿದರು. ಸರ್ವೇಯರ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಪನಿರ್ದೇಶಕರು ಭೂದಾಖಲೆ ಕುಸುಮಾಧರ ಇವರು ಉತ್ತರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಜನಾರ್ಧನಗೌಡ, ಯು ಪಿ ಇಬ್ರಾಹಿಂ ಮತ್ತು ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.