ಬಿಜೆಪಿಗರಿಗೆ ಸಚಿವ ಜಾರ್ಜ್ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ – ರಮಾನಾಥ ರೈ
ಮಂಗಳೂರು: ಕೇಂದ್ರದ ಬಿಜೆಪಿ ಸರಕಾರದಲ್ಲಿ ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಸಚಿವರನ್ನು ಇಟ್ಟುಕೊಂಡು ರಾಜ್ಯದ ಸಚಿವರಾದ ಕೆ ಜೆ ಜಾರ್ಜ್ ಅವರ ರಾಜೀನಾಮೆಯನ್ನು ಕೇಳುವ ಯಾವುದೇ ನೈತಿಕ ಹಕ್ಕು ಬಿಜೆಪಿಗೆ ಇಲ್ಲ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಅವರು ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ನೀಡಿತ್ತು ಆಗ ತನಿಖೆ ಮುಗಿಯುವ ವರೆಗೆ ಅವರನ್ನು ಸಚಿವ ಸ್ಥಾನದಿಂದ ಹೊರಗಿಡಲಾಗಿತ್ತು. ತನಿಖೆಯಲ್ಲಿ ಅವರ ಪಾತ್ರ ಏನೂ ಇಲ್ಲ ಎನ್ನುವುದು ತಿಳಿದು ಬಂದ ಬಳಿಕ ಮತ್ತೆ ಸಚಿವರಾಗಿ ಮುಖ್ಯಮಂತ್ರಿಗಳು ಜಾರ್ಜ್ ಅವರಿಗೆ ಅಧಿಕಾರ ನೀಡಿದ್ದಾರೆ. ಬಿಜೆಪಿಯವರು ಇಂದು ಕಾಂಗ್ರೆಸ್ ಮುಖಂಡರ ಮೇಲೆ ಐಟಿ ಧಾಳಿ, ಮತ್ತು ಅಧಿಕಾರದ ದುರುಪಯೋಗವನ್ನು ಮಾಡಿ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಿಬಿಐನನ್ನು ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಷಿಗೇಶನ್ ಎಂದು ಹೇಳುತ್ತಿದ್ದ ಬಿಜೆಪಿಗರು, ಆದರೆ ಇಂದು ನಾವು ಕಾಂಗ್ರೆಸಿಗರು ಏನು ಹೇಳಬೇಕು ಎನ್ನುವುದು ಮೂಲ ಪ್ರಶ್ನೆಯಾಗಿದೆ. ಕಾಂಗ್ರೆಸ್ ಇದ್ದರೆ ಒಂದು ನೀತಿ ಬಿಜೆಪಿ ಇದ್ದರೆ ಒಂದು ನೀತಿಯನ್ನು ಮಾಡಲು ಹೋಗಿರುವ ಮೋದಿ ಸರಕಾರದ ನಡೆ ಖಂಡನಿಯ ಎಂದರು. ಬಿಜೆಪಿಯವರ ಅಧಿಕಾರ ದುರುಪಯೋಗದ ಷ್ಯಡ್ಯಂತ್ರವನ್ನು ಮಾಡುತ್ತದೆ ಎಂದು ಆರೋಫಿಸಿದರು.
ಕಾಂಗ್ರೆಸ್ ಸದಾ ಸದಾ ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಯಬೇಕು ಎಂದು ಪ್ರತಿಪಾದಿಸಿಕೊಂಡು ಬಂದಿರುವ ಪಕ್ಷವಾಗಿದೆ. ಬಿಜೆಪಿ ಹಿಟ್ಲರ್ ಶಾಹಿ ಧೋರಣೆಯನ್ನು ಹೊಂದಿಕೊಂಡು ಕೇವಲ ವಾಮ ಮಾರ್ಗದಿಂದ ಅಧಿಕಾರ ಪಡೆಯಬೇಕು ಎನ್ನುವ ದುರುದ್ದೇಶದಿಂದ ಕೂಡಿರುವ ಪಕ್ಷವಾಗಿದೆ. ನೇರವಾಗಿ ಎದುರಿಸಲು ಸಾಧ್ಯವಾಗದೆ ಬಿಜೆಪಿಯವರು ವಾಮ ಮಾರ್ಗದಿಂದ ಫ್ಯಾಸಿಸ್ಟ್ ಧೋರಣೆಯನ್ನು ಪ್ರಚುರಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶವನ್ನು ಅವನತಿಗೆ ತೆಗೆದುಕೊಂಡು ಹೋಗುವ ಬಿಜೆಪಿಯ ಹುನ್ನಾರವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಇಡೀ ದೇಶದಲ್ಲಿ ನೋಟ್ ಅಮಾನ್ಯಿಕರಣ ಹಾಗೂ ಇನ್ನಿತರ ಜನವಿರೋಧಿ ನೀತಿಗಳ ಮೂಲಕ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯನ್ನು ಜಾರಿಗೆ ಗೊಳಿಸಿದೆ. ಜಿಎಸ್ ಟಿಯನ್ನು ತಾನು ಜಾರಿಗೆ ತಂದಿರುವುದಾಗಿ ಪ್ರಚಾರ ಮಾಡಿಕೊಂಡು ಬಂದ ಮೋದಿ ಸರಕಾರ ಅದರಲ್ಲಿ ಲೋಪದೋಷಗಳು ಉಂಟಾದಾಗ ಅದರಲ್ಲಿ ಕಾಂಗ್ರೆಸಿನ ಪಾತ್ರ ಇದೆ ಎಂದು ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಜಿ ಎಸ್ ಟಿಯನ್ನು ಜಾರಿಗೆ ತರುವಾಗ ಜನ ಹಿತವನ್ನು ಗಮನದಲ್ಲಿಟ್ಟುಕೊಂಡು ತರಲು ಉದ್ದೇಶಿಸಿತ್ತು ಆದರೆ ಬಿಜೆಪಿ ಸಂಪೂರ್ಣ ಜನಹಿತವನ್ನು ಮರೆತು ಜಿಎಸ್ ಟಿ ತನಗೆ ಬೇಕಾದಂತೆ ಜಾರಿಗೆ ತಂದಿದೆ. ಕಾಂಗ್ರೆಸ್ ಪಕ್ಷ 18% ಜಿಎಸ್ಟಿ ಪ್ರತಿಪಾದಿಸಿದರೆ ಬಿಜೆಪಿ ಅದನ್ನು 28% ಕ್ಕೆ ಏರಿಸಿತು. ಭ್ರಷ್ಟರಿಗೆ ಸದಾ ಬೆಂಬಲ ನೀಡುವ ಬಿಜೆಪಿ ಜನಾರ್ದನ ರೆಡ್ಡಿಯವರಿಗೆ ಗಣಿ ಹಗರಣದಲ್ಲಿ ಈಗಲೂ ಕೂಡ ಸಹಕಾರ ನೀಡಿಕೊಂಡು ಬಂದಿದೆ ಹಾಗಿದ್ದರೂ ಕೂಡ ನಿನ್ನೆ ಧರ್ಮಸ್ಥಳಕ್ಕೆ ಬಂದ ಪ್ರಧಾನಿ ಮೋದಿಯವರು ತಾನು ಭ್ರಷ್ಟರಿಗೆ ಬೆಂಬಲಿಸುವುದಿಲ್ಲ ಎಂದು ಹೇಳಿರುವುದು ಹಾಸ್ಯಸ್ಪದ ಎಂದರು.
ಮೋದಿಯವರ ಕಾರ್ಯಕ್ರಮಕ್ಕೆ ಪಾಸುಗಳನ್ನು ವಿತರಿಸುವಾಗ ವಿನಾಯಕ ಬಾಳಿಕ ಕೊಲೆ ಆರೋಪಿಗೆ ವಿಐಪಿ ಪಾಸು ವಿತರಿಸಿದ್ದು ಇದರ ಬಗ್ಗೆ ಆಡಳಿತ ವರ್ಗ ಎಚ್ಚರಿಕೆ ವಹಿಸಬೇಕಾಗಿತ್ತು ಎಂದರು.
ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾರಿಗೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿಲು ಮನಸ್ಸಿಲ್ಲ ಅಂತಹವರು ಅದರಲ್ಲಿ ಭಾಗವಹಿಸುವುದು ಬೇಡ. ಬಿಜೆಪಿಗರು ಟಿಪ್ಪು ಜಯಂತಿಯ ಹೆಸರಿನಲ್ಲಿ ಕೋಮು ಸಂಘರ್ಷವನ್ನು ಹುಟ್ಟುಹಾಕಲು ಹಾಗೂ ಅಮಾಯಕರ ಸಾವನ್ನು ಕಾಣಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಬಾರಿ ಹರೀಶ್ ಪೂಜಾರಿ ಕೊಲೆಯಾಗಿದ್ದು ಅಂತಹ ಘಟನೆಗಳು ಮರುಕಳಿಸಬೇಕು ಎನ್ನುವುದು ಬಿಜೆಪಿಗರ ಆಸೆಯಾಗಿದೆ. ಬಿಜೆಪಿಯವರು ಜಿಲ್ಲೆಯಲ್ಲಿ ಕೋಮು ಸಂಬಂಧಿತ ಹಿಂಸಾಚಾರಗಳಲ್ಲಿ ಸತ್ತವರ ಪಟ್ಟಿ ಮಾಡುವಾಗ ಹರೀಶ್ ಪೂಜಾರಿ ಮತ್ತು ವಿನಾಯಕ ಬಾಳಿಗರ ಹೆಸರನ್ನು ಮರೆತಿದ್ದಾರೆ ಕಾರಣ ಅವರಿಬ್ಬರು ಕೂಡ ಅವರದೇ ಕಾರ್ಯಕರ್ತರಿಂದ ಕೊಲೆಯಾಗಿದ್ದವರು ಎಂದು ಸಚಿವರು ಬಿಜೆಪಿಗರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.