Home Mangalorean News Kannada News ಬಿಜೆಪಿಗರು ಬಾಯಲ್ಲಿ ಜೈಶ್ರೀರಾಮ್ ಎಂದು ಮಾಡಬಾರದ ಕೆಲಸ ಮಾಡುತ್ತಾರೆ: ದಿನೇಶ್ ಗುಂಡೂರಾವ್

ಬಿಜೆಪಿಗರು ಬಾಯಲ್ಲಿ ಜೈಶ್ರೀರಾಮ್ ಎಂದು ಮಾಡಬಾರದ ಕೆಲಸ ಮಾಡುತ್ತಾರೆ: ದಿನೇಶ್ ಗುಂಡೂರಾವ್

Spread the love

ಬಿಜೆಪಿಗರು ಬಾಯಲ್ಲಿ ಜೈಶ್ರೀರಾಮ್ ಎಂದು ಮಾಡಬಾರದ ಕೆಲಸ ಮಾಡುತ್ತಾರೆ: ದಿನೇಶ್ ಗುಂಡೂರಾವ್

ಮಂಗಳೂರು: ‘ಬಿಜೆಪಿಯವರು ಹೇಳುವುದೇ ಬೇರೆ, ಮಾಡುವುದೇ ಬೇರೆ. ಚುನಾವಣಾ ಬಾಂಡ್ ಮೂಲಕ ಕಾನೂನುಬದ್ಧವಾಗಿ ಲೂಟಿ ಮಾಡಿದ, ಧರ್ಮವನ್ನು ಬಳಸಿ ಅಧರ್ಮ ನಡೆಸಿದ ಪಕ್ಷ ಬಿಜೆಪಿ. ಬಾಯಲ್ಲಿ ಜೈಶ್ರೀರಾಮ್ ಎಂದು ಹೇಳಿ ಅವರು ಮಾಡಬಾರದ ಕೆಲಸ ಮಾಡುತ್ತಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ ) ಮುಖ್ಯ ಉದ್ದೇಶವಿದ್ದುದು ದೇಶದ ಆರ್ಥಿಕತೆ ದುರ್ಬಲಗೊಳಿಸುವ ಡ್ರಗ್ಸ್ ಜಾಲವನ್ನು ಮಟ್ಟಹಾಕುವುದು. ಈ ಕಠಿಣ ಕಾನೂನಿನ ಪ್ರಕಾರ ವ್ಯಕ್ತಿಯು ನಿರಪರಾಧಿ ಎಂದು ಸಾಬೀತುಪಡಿಸುವವರೆಗೆ ಆತನನ್ನು ತಪ್ಪಿತಸ್ಥ ಎಂದೇ ಪರಿಗಣಿಸಲಾಗುತ್ತದೆ. ಆರೋಪಿ ನಿರಪರಾಧಿ ಎಂಬುದು ನ್ಯಾಯಾಧೀಶರಿಗೆ ಮನವರಿಕೆ ಆಗುವರೆಗೆ ಜಾಮೀನು ಸಿಗದು. ಈಗ ಪಿಎಂಎಲ್ಎ ಅಡಿ ಯಾರ ಮೇಲೂ ಪ್ರಕರಣ ದಾಖಲಿಸಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಕಠಿಣ ಕಾನೂನನ್ನು ರಾಜಕಾರಣಿಗಳು, ಉದ್ದಿಮೆದಾರರ ಮೇಲೆ ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಶೂನ್ಯ ಲಾಭ ಹೊಂದಿದ ಅಥವಾ ನಷ್ಟದಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿಗೆ ರೂ434.2 ಕೋಟಿ ದೇಣಿಗೆ ನೀಡಿವೆ. ಇವೆಲ್ಲವೂ ವಂಚಕ ಷೆಲ್ ಕಂಪನಿಗಳು ಎಂಬುದು ಸ್ಪಷ್ಟ. ಕೆಲವು ಕಂಪನಿಗಳು ಸ್ವಲ್ಪ ತಮ್ಮ ಲಾಭದ ಮೊತ್ತಕ್ಕಿಂತಲೂ ಹೆಚ್ಚು ಹಣವನ್ನು ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡಿದ್ದು, ಈ ಮೊತ್ತ ರೂ601 ಕೋಟಿಯಷ್ಟಿದೆ. ಲಾಭವನ್ನೇ ಗಳಿಸದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನಿಡುವುದಾದರೂ ಹೇಗೆ. ಇದು ಹಣ ಅಕ್ರಮವ ವರ್ಗಾವಣೆ ಯಲ್ಲವೇ. ಜಾರಿ ನಿರ್ದೇಶನಾಲಯವು ಬಿಜೆಪಿ ವಿರುದ್ಧವೂ ಪಿಎಂಎಲ್ಎ ಅಡಿ ಕ್ರಮ ಕೈಗೊಳ್ಳಬೇಕಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಬಿಜೆಪಿಯು ಕಾನೂನಿನ ಹಾಗೂ ಧರ್ಮದ ಕವಚವನ್ನು ಬಳಸಿ ಅತ್ಯಂತ ಭ್ರಷ್ಟ ಹಾಗೂ ಪಾಪದ ಕೆಲಸ ಮಾಡಿದೆ. ಈ ಪ್ರಕಾರದ ಕಪಟ ಹಾಗೂ ಮೋಸವನ್ನು ದೇಶದ ಬೇರಾವುದೇ ಪಕ್ಷ ಮಾಡಿದೆಯೇ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರವು ತೆರಿಗೆ ಪಾಲು ಹಂಚಿಕೆಯಲ್ಲಿ, ಹಾಗೂ ಬರ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಿದ ಅವರು, ಅದಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡಿದರು.

’15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಬೇರೆ ಬೇರೆ ಯೋಜನೆಯಗಳಡಿ ರೂ 16,990 ಕೋಟಿ ಹೆಚ್ಚುವರಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ಆದರೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ನ್, ‘ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುವಂತೆ ಹಣಕಾಸು ಆಯೋಗ ಆದೇಶ ಮಾಡಿರಲಿಲ್ಲ’ ಎಂದು ಸುಳ್ಳು ಹೇಳಿದ್ದಾರೆ’ ಎಂದರು.

‘ಬರ ಪರಿಹಾರಕ್ಕೆ ಕರ್ನಾಟಕ ತಡವಾಗಿ ಕೋರಿಕೆ ಸಲ್ಲಿಸಿದೆ. ಸರಿಯಾಗಿ ವರದಿ ಕೊಡಲಿಲ್ಲ. ಈಗ ನಾವು ಬರ ಪರಿಹಾರ ನೀಡಲು ಚುನಾವಣಾ ಆಯೋಗ ಅನುಮತಿ ನೀಡುತ್ತಿಲ್ಲ’ ಎಂದು ಕೇಂಗ್ರ ಗೃಹ ಸಚಿವ ಅಮಿತ್ ಶಾ ಚನ್ನಪಟ್ಟಣದಲ್ಲಿ ಆರೋಪ ಮಾಡಿದ್ದಾರೆ. ಇದಕ್ಕಿಂತ ಮಹಾ ಸುಳ್ಳು ಬೇರಾವುದೂ ಇಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬರ ಪರಿಹಾರ ಘೋಷಣೆಗೆ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಬೇರೆ ರಾಜ್ಯಗಳಿಗೆ ಪತ್ರ ಬರೆದಿದೆ. ನಮ್ಮ ಸರ್ಕಾರ ಬರ ಪರಿಹಾರಕ್ಕೆ 2023ರ ಅಕ್ಟೋಬರ್ನಲ್ಲೇ ಕೋರಿಕೆ ಸಲ್ಲಿಸಿತ್ತು. ಪದೇ ಪದೇ ಮನವಿ ಸಲ್ಲಿಸಿದರೂ ಕೇಂದ್ರ ಗೃಹ ಸಚಿವರು ಭೇಟಿಗೆ ಸಮಯಾವಕಾಶ ನೀಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿದ ಬಳಿಕ, ಈ ಸಭೆ ಕರೆದು ತೀರ್ಮಾನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಬರ ಪರಿಹಾರ ನೀಡಲೇ ಇಲ್ಲ. ಬರ ಪರಿಹಾರಕ್ಕೆ ಸಂಬಂಧಿಸಿ ರಾಜ್ಯದ ಮಾದರಿಗೆ ತಮ್ಮ ಅಧೀನದ ಇಲಾಖೆ ಮೆಚ್ಚುಗೆ ನೀಡಿದ್ದೇ ಅಮಿತ್ ಶಾ ಅವರಿಗೆ ತಿಳಿದಿಲ್ಲ. ಹಣಕಾಸು ಸಚಿವರು ಮತ್ತು ಗೃಹಸಚಿವರೇ ಹೀಗೆ ಸುಳ್ಳು ಹೇಳುವಾಗ ಬಿಜೆಪಿಯನ್ನು ಸುಳ್ಳುಗಾರರ ಪಕ್ಷದ ಎನ್ನಬಾರದೇ’ ಎಂದು ಪ್ರಶ್ನಿಸಿದರು.

‘ಕೇಂದ್ರದ ತಾರತಮ್ಯ ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಅಮಿತ್ ಶಾ ಅವರು ಏನು ಹೇಳೀಕೆ ನೀಡಿದ್ದಾರೋ ಅದನ್ನು ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ರೂಪದಲ್ಲಿ ಸಲ್ಲಿಸಲಿ’ ಎಂದು ಅವರು ಸವಾಲು ಹಾಕಿದರು.

‘ಇವೆಲ್ಲ ತಮಾಷೆಯ ಅಥವಾ ರಾಜಕೀಯ ವಿಚಾರಗಳಲ್ಲ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿವು. ಬರ ಪರಿಹಾರಕ್ಕೆ ಸಬಂಧಿಸಿ ನಮ್ಮಷ್ಟು ಪೂರ್ವತಯಾರಿ ಮಾಡಿ ಕೊಟ್ಟ ಇನ್ನೊಂದು ರಾಜ್ಯ ದೇಶದಲ್ಲಿಲ್ಲ’ ಎಂದರು.

‘ಎನ್ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ್ಕೆ ರೂ 4 ಲಕ್ಷ ಕೋಟಿ ತೆರಿಗೆ ಪಾಲು ಕೊಟ್ಟಿದ್ದೇವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ತೆರಿಗೆ ಪಾಲು ಬಂದಿದೆ’ ಎಂದೂ ಅಮಿತ್ ಶಾ ಪ್ರಶ್ನಿಸಿದ್ದಾರೆ. ರಾಜ್ಯಕ್ಕೆ ಭಿಕ್ಷೆ ಕೊಟ್ಟಂತೆ ಅವರು ಮಾತನಾಡಿದ್ದಾರೆ. ಯಾವ ಪ್ರಮಾಣದಲ್ಲಿ ಕೊಡಬೇಕಾಗಿತ್ತೋ ಅಷ್ಟು ತೆರಿಗೆ ಪಾಲು ಕೊಟ್ಟಿದ್ದೀರಾ ಎಂಬುದು ನಮ್ಮ ಪ್ರಶ್ನೆ. 2015ರಿಂದ 2024ರವರೆಗೆ ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ರೂ 12 ಲಕ್ಷ ಕೋಟಿ ಸಂದಾಯವಾಗಿದೆ. ವಾಪಾಸ್ ಬಂದಿದ್ದು, ರೂ 2.95 ಲಕ್ಷ ಕೋಟಿ ಮಾತ್ರ. ರಾಜ್ಯದ ಪ್ರತಿ ವ್ಯಕ್ತಿ ವರ್ಷಕ್ಕೆ ಸರಾಸರಿ ರೂ 13,428 ಜಿಎಸ್ಟಿ ಪಾವತಿಸುತ್ತಾನೆ. ಉತ್ತರ ಪ್ರದೇಶ ತಲಾ ಜಿಎಸ್ಟಿ ಸಂಗ್ರಹ ರೂ 2,793. ಮಧ್ಯ ಪ್ರದೇಶದ್ದು ರೂ 3 075 ಕೋಟಿ ಮಾತ್ರ’ ಎಂದರು.

‘2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ 24.51 ಲಕ್ಷ ಕೋಟಿ ಇತ್ತು. ಅಗ ಕರ್ನಾಟಕಕ್ಕೆ ರೂ 46 ಸಾವಿರ ಕೋಟಿ ಅನುದಾನ ಕೇಂದ್ರದಿಂದ ಹಂಚಿಕೆಯಾಗಿದೆ. 2024-25ರಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ 47.65 ಲಕ್ಷ ಕೋಟಿಗೇ ಹೆಚ್ಚಿದೆ. ಆದರೆ ಅದರಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದು ರೂ 50 ಸಾವಿರ ಕೋಟಿ. ಉತ್ತರ ಪ್ರದೇಶಕ್ಕೆ ₹ 2.18 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ದಕ್ಷಿಣ ಭಾರತದ ಅಷ್ಟೂ ರಾಜ್ಯಗಳಿಗೆ ಸಿಕ್ಕಿದ್ದು ರೂ1.92 ಲಕ್ಷ ಕೋಟಿ. ಇದು ತಾರತಮ್ಯ ಅಲ್ಲವೇ’ ಎಂದು ಪ್ರಶ್ನಿಸಿದರು.

‘ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಾದ ರೂ 16,990 ಕೋಟಿ ವಿಶೇಷ ಅನುದಾನವನ್ನು ಕೇಂದ್ರ ಕೊಡಲೇ ಇಲ್ಲ. ಆದರೆ ಆಯೋಗದ ಯಾವುದೇ ಶಿಫಾರಸು ಇಲ್ಲದೆಯೇ ಉತ್ತರ ಪ್ರದೇಶಕ್ಕೆ ರೂ 2,117 ಕೋಟಿ ಹಾಗೂ ಗುಜರಾತ್ಗೆ ರೂ 431 ಕೋಟಿ ನೀಡಿದ್ದಾರೆ. ರಾಜ್ಯಕ್ಕೆ ಆಗಿರುವ ಈ ಅನ್ಯಾಯ ಸರಿಪಡಿಸಲು ನಾಲ್ಕು ವರ್ಷಗಳಿಂದ ಹೇಳುತ್ತಲೇ ಇದ್ದೇವೆ. ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂಬುದನ್ನೇ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ರಾಜ್ಯದ ಬಿಜೆಪಿ ಮುಖಂಡರಿಗೆ ಬಾಯಿ ತೆರೆಯುವುದಕ್ಕೂ ಆಗುತ್ತಿಲ್ಲ. ನಾವು ಜನರಿಗೆ ನ್ಯಾಯ ಕೊಡುವುದು ಹೇಗೆ’ ಎಂದರು.

‘ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರೂ ದೊಡ್ಡ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಾರು, ಶಿವಮೊಗ್ಗದಲ್ಲಿ ಬಿಜೆಪಿ ಯಾರಿಗೆ ಟಿಕೆಟ್ ಕೊಟ್ಟಿದೆ. ಕುಟುಂಬ ರಾಜಕಾರಣವನ್ನು ಬಿಜೆಪಿ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಾರೆ’ ಎಂದರು.

‘ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದಾಗ ಆಗಿರುವ ಮೋಸವನ್ನು ಸರಿಪಡಿಸಲು ಹೋರಾಟ ಮಾಡುತ್ತಿದ್ದೇವೆ. ಇದು ರಾಜ್ಯದ ಜನರಿಗೆ ಅರ್ಥವಾಗಿದೆ. ಈಸಲ ನಮ್ಮ ಪರವಾದ ದೊಡ್ಡ ಅಲೆ ಇದೆ. ವಿಧಾನಸಭೆಯಲ್ಲಿ ಗಳಿಸಿದ್ದಕ್ಕಿಂತಲೂ ದೊಡ್ಡ ಗೆಲುವನ್ನು ಲೋಕಸಭೆ ಚುನಾವಣೆಯಲ್ಲಿ ಸಾಧಿಸುತ್ತೇವೆ’ ಎಂದರು.


Spread the love

Exit mobile version