Home Mangalorean News Kannada News ಬಿಜೆಪಿಗರೇ ಉದ್ಯಮಿಗಳ ಕೋಟಿ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ – ಜೆಪಿ ಹೆಗ್ಡೆ

ಬಿಜೆಪಿಗರೇ ಉದ್ಯಮಿಗಳ ಕೋಟಿ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ – ಜೆಪಿ ಹೆಗ್ಡೆ

Spread the love

ಬಿಜೆಪಿಗರೇ ಉದ್ಯಮಿಗಳ ಕೋಟಿ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ – ಜೆಪಿ ಹೆಗ್ಡೆ

ಚಿಕ್ಕಮಗಳೂರು: ಬಡಜನರ ಬದುಕು ಗಟ್ಟಿಗೊಳಿಸಲು ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಬಿಜೆಪಿ ನಾಯಕರು ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಜೊತೆಗೆ ರಾಜ್ಯ ದಿವಾಳಿಯಾಗುತ್ತದೆ ಎನ್ನುತ್ತಾರೆ ಆದರೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದಾಗ ಇದೆ ನಾಯಕರು ಚರ್ಚೆ ಮಾಡಲ್ಲ. ಹೀಗೆ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು.

ನಗರದ ಒಕ್ಕಲಿಗರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ತಮ್ಮ ಕೈಯನ್ನು ತಾವು ಬಲಪಡಿಸಿಕೊಂಡತ್ತಾಗುತ್ತದೆ. ನಾನು ಜನರ ಧ್ವನಿಯಾಗಿ ಕೆಲಸ ಮಾಡುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಏನೇನು ಬೇಕು ಆ ಕೆಲಸ ಮಾಡುತ್ತೇನೆ. ಜನರ ಮಧ್ಯೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನನ್ನದು. ಇದರೊಂದಿಗೆ ಅಭಿವೃದ್ಧಿಗೂ ಒತ್ತು ನೀಡುತ್ತೇನೆ ಎಂದರು.

ಜನರಿಂದ ಅಧಿಕಾರಕ್ಕೆ ಬಂದ ಮೇಲೆ ಕೆಲಸ ಮಾಡದೆ ಬೆಂಗಳೂರಿನಲ್ಲಿ ಕೂರಬಾರದು. ಹೀಗೆ ಮಾಡಿದರೆ ಅದು ಜನರಿಗೆ ಮೋಸ ಮಾಡಿದಂತೆ. ನಾಣು 2 ವರ್ಷ ಸಂಸದನಾಗಿದ್ದಾಗ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಪ್ರತಿ ಗ್ರಾಪಂ ಮಟ್ಟದಲ್ಲೂ ಕೆಲಸ ಮಾಡಿದ್ದೇನೆ. ಈ ಬಾರಿ ಜನ ನನ್ನನ್ನು ಆಶೀರ್ವದಿಸುವ ವಿಶ್ವಾಸವಿದೆ ಎಂದರು. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಾರೆ ಎಂಬುದನ್ನು ಜನ ನಿರ್ಧಾರ ಮಾಡಬೇಕು. ಬಿಜೆಪಿಗರಿಗೆ ನನ್ನ ಮೇಲೆ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ ಹೀಗಾಗಿ ನನ್ನ ಹೇಳಿಕೆ ತಿರುಚಿ ಆರೋಪ ಮಾಡುತ್ತಿದ್ದಾರೆ ಇದು ಫಲ ನೀಡಲ್ಲ ಎಂದರು.

ಸಭೆಯಲ್ಲಿ ಮಾತನಾಡಿದ ರಾಜ್ಯ ಇಂಧನ ಸಚಿವ ಕೆ ಜೆ ಜಾರ್ಜ್, ಶೋಭಾ ಕರಂದ್ಲಾಜೆಯವರು ಬೆಂಗಳೂರಿನಲ್ಲಿ ಸೋತ ಬಳಿಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸತತ 2 ಬಾರಿ ಸಂಸದರಾಗಿ ಏನು ಕೆಲಸ ಮಾಡದ ಕಾರಣ ಬಿಜೆಪಿ ಕಾರ್ಯಕರ್ತರೇ ಅವರನ್ನು ಇಲ್ಲಿಂದ ಓಡಿಸಿದ್ದಾರೆ. ಹೀಗಾಗಿ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿ ಸಿಕ್ಕಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು 2 ವರ್ಷ ಸಂಸದರಾಗಿದ್ದಾಗ ಹೇಗೆ ಕೆಲಸ ಮಾಡಿದ್ದರು ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ಜಯಪ್ರಕಾಶ್ ಹೆಗ್ಡೆ ಅವರನ್ನೇ ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಎಲ್ಲರಿಗೂ ದೇವರ ಮೇಲೆ ಭಯಭಕ್ತಿ ಇರುತ್ತದೆ ಒಂದೊಂದು ಧರ್ಮದವರು ಒಂದೊಂದು ರೀತಿ ದೇವರನ್ನು ಕಂಡುಕೊಂಡಿದ್ದಾರೆ. ಎಲ್ಲಾ ದೇವರು ಹೇಳುವುದು ಒಳ್ಳೆಯದನ್ನೇ ಹೀಗಿರುವಾಗ ಜಾತಿ ಧರ್ಮದ ಹೆಸರಿನಲ್ಲಿ ಒಡೆದಾಡುವುದು ಸರಿಯಲ್ಲ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ವಹಿಸಿದ್ದರು. ಶಾಸಕರಾದ ರಾಜೇಗೌಡ, ಜಿ ಎಚ್ ಶ್ರೀನಿವಾಸ್, ತಮ್ಮಯ್ಯ, ನಯನಾ ಮೋಟಮ್ಮ, ಮಾಜಿ ಸಚಿವರಾದ ಮೋಟಮ್ಮ, ಬಿಬಿ ನಿಂಗಯ್ಯ, ಡಾ. ಬಿ ಎಲ್ ಶಂಕರ್, ವಿಪ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಎಐಸಿಸಿ ಕಾರ್ಯದರ್ಶಿ ಬಿಎಂ ಸಂದೀಪ್, ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ, ಬಿಪಿ ಹರೀಶ್, ಡಾ, ಡಿ ಎಲ್ ವಿಜಯಕುಮಾರ್ ಮಂಜೇಗೌಡ, ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.


Spread the love

Exit mobile version