ಬಿಜೆಪಿಗೆ ಡೈವೋರ್ಸ್ ನೀಡಿ ಕೆಜೆಪಿ ಸೇರಿದ್ದ ಶೋಭಾ ಕರಂದ್ಲಾಜೆ ಅವರಿಂದ ರಾಜಕೀಯ ಕಲಿಯಬೇಕಿಲ್ಲ – ಪ್ರಮೋದ್ ಮಧ್ವರಾಜ್
ಉಡುಪಿ: ‘ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ರಾಜಕೀಯ ಕಲಿಯಬೇಕಿಲ್ಲ’ ಎಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು , ‘ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಶೋಭಾ ಕರಂದ್ಲಾಜೆ ಕೂಡಾ ಬಿಜೆಪಿಗೆ ಡೈವೋರ್ಸ್ ನೀಡಿದ್ದರು. ನಂತರ ಕೆಜೆಪಿಯಿಂದ ರಾಜಾಜಿನಗರದಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡರು. ಜನರು ಇದನ್ನು ಮರೆತಿಲ್ಲ. ದುರ್ಬಲರನ್ನು ಬಲಾಢ್ಯರನ್ನಾಗಿಸುವ, ಬಲಾಢ್ಯರನ್ನು ದುರ್ಬಲರನ್ನಾಗಿಸುವ ಶಕ್ತಿ ಜನರಿಗಿದೆ’ ಎಂದು ಕುಟುಕಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆಯು ಶೇ40ರಷ್ಟು ರಾಜ್ಯದ ಅನುದಾನ ಹಾಗೂ ಶೇ 60ರಷ್ಟು ಕೇಂದ್ರದ ಅನುದಾನದೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡಿದೆ. ಒಂದು ಕುಟುಂಬಕ್ಕೆ ₹ 5 ಲಕ್ಷವರೆಗಿನ ವೈದ್ಯಕೀಯ ವೆಚ್ಚ ಭರಿಸುವ ಈ ಯೋಜನೆಯಡಿ ಕೋಟ್ಯಂತರ ಜನರು ಫಲಾನುಭವಿಗಳಾಗಿದ್ದಾರೆ. 2011ರಲ್ಲಿ ಸ್ವಾಸ್ಥ್ಯ ಬಿಮಾ ಯೋಜನೆಯ ಅನುಸಾರ ಯಾರ ಹೆಸರು ನೋಂದಣಿಯಾಗಿದೆಯೋ ಅವರು ಮಾತ್ರ ಫಲಾನುಭವಿಗಳಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಆಯುಷ್ಮಾನ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿದ ಕುಟಂಬದವರಿಗೆ ₹ 5 ಲಕ್ಷದವರೆಗಿನ ವೈದ್ಯಕೀಯ ವೆಚ್ಚಗಳು ಉಚಿತವಾಗಿ ಸಿಗುತ್ತದೆ. ಉಡುಪಿ ಶಾಸಕನಾಗಿದ್ದಾಗ ಸುಮಾರು 21000 ಕುಟಂಬಗಳಿಗೆ ಬಿಪಿಎಲ್ ಕಾರ್ಡ್ ಸಿಗುವಂತೆ ಮಾಡಿದ್ದೇನೆ. ಅವರೆಲ್ಲರೂ ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
‘ಕರ್ನಾಟಕದಲ್ಲಿ ಮಾತ್ರ ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ 30ರಷ್ಟು ಆರೋಗ್ಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ದೇಶದ ಅಭಿವೃದ್ಧಿಗಾಗಿ ಹಾಗೂ ಭದ್ರತೆಗಾಗಿ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಕೇವಲ 5 ವರ್ಷಗಳ ಆಡಳಿತದಿಂದ ಮರೆಮಾಚಲು ಅಸಾಧ್ಯ’ ಎಂದು ಪ್ರಮೋದ್ ಹೇಳಿಕೆಯಲ್ಲಿ ಟೀಕಿಸಿದ್ದಾರೆ.