ಬಿಜೆಪಿಯಿಂದ ಜನಜಾಗೃತಿ ಸಮಾವೇಶ: ರಸ್ತೆ ಸಂಚಾರದಲ್ಲಿ ಬದಲಾವಣೆ
ಮಂಗಳೂರು: ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಜ.27ರಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾದ ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದು, ಸಾರ್ವಜನಿಕ ಸಂಚಾರದ ಹಿತದೃಷ್ಟಿಯಿಂದ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಾರ್ಗಸೂಚಿ ಹೊರಡಿಸಿದ್ದಾರೆ.
ಅಲ್ಲದೆ, ಸಮಾವೇಶದ ಆಯೋಜಕರು ಹಾಗೂ ಸಮಾವೇಶಕ್ಕೆ ಆಗಮಿಸುವವರ ವಾಹನಗಳ ನಿಲುಗಡೆಯ ಬಗ್ಗೆಯೂ ಪೊಲೀಸ್ ಆಯುಕ್ತರು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಉಡುಪಿ ಹಾಗೂ ಮಂಗಳೂರಿನಿಂದ ಸಮಾವೇಶಕ್ಕೆ ಆಗಮಿಸುವ ಎಲ್ಲ ವಾಹನಗಳು ನಿರ್ದಿಷ್ಟ ಪ್ರದೇಶದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಕೂಳೂರಿನಲ್ಲಿ ಬೃಹತ್ ಸಮಾವೇಶ ನಡೆಯುವುದರಿಂದ ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅಡೆತಡೆಯಾಗುವುದರಿಂದ ಜ.27ರಂದು ಬೆಳಗ್ಗೆ 9ರಿಂದ ರಾತ್ರಿ 9 ರವರೆಗೆ ರಸ್ತೆ ಸಂಚಾರದ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಸಲಹೆ ನೀಡಿದ್ದಾರೆ.
ಉಡುಪಿಯಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಪಡುಬಿದ್ರಿಯಿಂದ ಪರ್ಯಾಯ ಮಾರ್ಗವಾದ ಕಾರ್ಕಳ- ಧರ್ಮಸ್ಥಳ- ಶಿರಾಡಿ ಘಾಟ್ ಮೂಲಕ ಬೆಂಗಳೂರಿಗೆ ಸಂಚರಿಸಬಹುದು. ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್- ಬಿ.ಸಿ.ರೋಡ್- ಕೊಣಾಜೆ- ತೊಕ್ಕೊಟ್ಟು ಮೂಲಕ ಮಂಗಳೂರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಪೊಳಲಿ ಕೈಕಂಬ ಮಾರ್ಗದ ಮೂಲಕ ಬಿ.ಸಿ.ರೋಡ್ನಿಂದ ಮಂಗಳೂರಿಗೆ ಬರುವ ವಾಹನಗಳು ಬಿ.ಸಿ.ರೋಡ್ ಕೈಕಂಬ ಬಳಿ ಪರ್ಯಾಯ ಮಾರ್ಗವನ್ನು ಅನುಸರಿಸಬೇಕು. ಬಿ.ಸಿ.ರೋಡ್ ಮತ್ತು ಪಂಪ್ವೆಲ್ನಿಂದ ಸಂಚರಿಸುವ ವಾಹನಗಳು ನಂತೂರು- ಕೈಕಂಬ- ಮೂಡುಬಿದಿರೆಯಾಗಿ ಸಂಚರಿಸಬೇಕು.
ಕೊಟ್ಟಾರ ಚೌಕಿಯಿಂದ ಸಂಚರಿಸುವ ವಾಹನಗಳು ಕೊಟ್ಟಾರಚೌಕಿ- ಕೆಪಿಟಿ- ನಂತೂರು- ಮೂಡುಬಿದಿರೆಯಾಗಿ ಸಂಚರಿಸಬೇಕು. ಮಂಗಳೂರಿನಿಂದ ಸಂಚರಿಸುವ ವಾಹನಗಳು ಕೆಪಿಟಿ- ನಂತೂರು- ಮೂಡುಬಿದಿರೆಯಾಗಿ ಸಂಚರಿಸಲು ಮಾರ್ಗ ಬದಲಾಯಿಸಲಾಗಿದೆ. ಸಾರ್ವಜನಿಕರು ಸಹಕರಿಸಲು ಮಂಗಳೂರು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.