ಬಿಜೆಪಿಯ ಮಂಗಳೂರು ಚಲೋ ಬೈಕ್ ಜಾಥಾಗೆ ಅನುಮತಿ ನೀಡದಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹ

Spread the love

ಬಿಜೆಪಿಯ ಮಂಗಳೂರು ಚಲೋ ಬೈಕ್ ಜಾಥಾಗೆ ಅನುಮತಿ ನೀಡದಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹ

ಉಡುಪಿ: ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಪ್ಟೆಂಬರ್ 5 ರಿಂದ – 7 ರ ವರೆಗೆ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ಜಾಥಾ ಕಾರ್ಯಕ್ರಮಕ್ಕೆ ದಕ ಜಿಲ್ಲಾಡಳಿತ ಯಾವುದೇ ಕಾರಣಕ್ಕೆ ಅನುಮತಿ ನೀಡಬಾರದೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆಗ್ರಹಿಸಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು ಅವಿಭಜಿತ ದಕ ಜಿಲ್ಲೆಯ ಜನರು ಶಾಂತಿ ಸೌಹಾರ್ದತೆಯಿಂದ ಬದುಕುತಿದ್ದು ಇಂತಹ ಸಂದರ್ಭದಲ್ಲಿ ಜನರಲ್ಲಿ ಕೋಮು ದ್ವೇಷ ಹಾಗೂ ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನವನ್ನು ಬಿಜೆಪಿಯ ನಾಯಕರು ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಬೈಕ್ ಜಾಥಾಕ್ಕೆ ಅವಕಾಶ ನೀಡಬಾರದು. ಬಿಜೆಪಿ ಪಕ್ಷ ಈ ಮೊದಲು ಹಮ್ಮಿಕೊಂಡ ಇಂತಹ ಜಾಥಾಗಳಿಂದ ಕೋಮು ಘರ್ಷಣೆಗಳು ನಡೆದ ಉದಾಹರಣೆಯಿದ್ದು ಅಲ್ಲದೆ ದಕ ಜಿಲ್ಲೆ ಕೋಮು ಸೂಕ್ಷ ಪ್ರದೇಶವಾಗಿದ್ದು ಇಂತಹ ಕಾರ್ಯಕ್ರಮಗಳಿಂದ ಮತ್ತೊಮ್ಮೆ ಜಿಲ್ಲೆಯ ಶಾಂತಿ ಕದಡುವ ಸಾಧ್ಯತೆಗಳು ಇರುವುದರಿಂದ ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆಗೆ ಅವಕಾಶವಿದ್ದು ಬಿಜೆಪಿ ಯುವ ಮೋರ್ಚಾದವರ ಶಾಂತಿಯುತ ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ ಆದರೆ ಈ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಬೈಕಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಬರುವುದರಿಂದ ಪ್ರಚೋದನಕಾರಿ ಘೋಷಣೆಗಳನ್ನು ಹಾಗೂ ಹೇಳಿಕೆಗಳನ್ನು ನೀಡುವ ಸಾಧ್ಯತೆ ಇರುವುದರಿಂದ ಇಂತಹ ಬೈಕ್ ಜಾಥಾಗೆ ಅವಕಾಶ ಕೊಟ್ಟಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಬಿಜೆಪಿ ಯುವಮೋರ್ಚಾ ನೇರ ಹೊಣೆಯಾಗಲಿದೆ. ಉಡುಪಿ ಜಿಲ್ಲೆಯಲ್ಲೂ ಸಹ ಬೈಕ್ ಜಾಥಾ ಸಂಬಂಧ ಯಾವುದೇ ಕಾರ್ಯಕ್ರಮ ನಡೆದಲ್ಲಿ ಜಿಲ್ಲಾಡಳಿತ ಎಚ್ಚರಿಕೆ ವಹಿಸುವಂತೆ  ಆಗ್ರಹಿಸಿದ ಅವರು ಈ ಸಂಬಂಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.

ಅಲ್ಲದೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬೈಕ್ ಜಾಥಾ ಸಂಬಂಧಿಸಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದ್ದು, ಯಾವುದೇ ಅಪಪ್ರಚಾರ ಹಾಗೂ ಸುದ್ದಿಗೆ ಸಾರ್ವಜನಿಕರು ಕಿವಿಗೊಡದೆ ಶಾಂತಿ ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಕಾಪಾಡುವಂತೆ ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್, ರವಿಶಂಕರ್ ಶೇರಿಗಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ಇಮ್ರಾನ್, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿ’ಸೋಜಾ, ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love