ಬಿಜೆಪಿಯ ರೆಸಾರ್ಟ್ ರಾಜಕೀಯ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Spread the love

ಬಿಜೆಪಿಯ ರೆಸಾರ್ಟ್ ರಾಜಕೀಯ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಬಿಜೆಪಿ ಆರಂಭಿಸಿರುವ ರೆಸಾರ್ಟ್ ರಾಜಕೀಯವನ್ನು ಖಂಡಿಸಿ ಗುರುವಾರ ನಗರದ ಹುತಾತ್ಮ ಸ್ಮಾರಕದ ಬಳಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಜನತೆಯ ಆಶೋತ್ತರಗಳನ್ನು ಈಡೇರಿಸಲು ಅತ್ಯುತ್ತಮ ಯೋಜನೆಗಳ ಮೂಲಕ ಆಡಳಿತ ನಡೆಸುತ್ತಿವೆ. ಇದನ್ನು ಸಹಿಸದ ಬಿಜೆಪಿ ಅಧಿಕಾರದ ಲಾಲಾಸೆಗಾಗಿ ಶಾಸಕರನ್ನು ರೆಸಾರ್ಟ್ಗಳಲ್ಲಿ ಕೂಡಿಟ್ಟು ಸರಕಾರ ಉರುಳಿಸಲು ಪ್ರಯತ್ನಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಅವರು ಆಪರೇಶನ್ ಕಮಲ ಮೂಲಕ ಖ್ಯಾತಿಯಾದವರು ಬಳಿಕ ಜೈಲಿಗೆ ಹೋಗಿ ಬಂದರೂ ಕೂಡ ಇನ್ನೂ ಕೂಡ ಬುದ್ದಿ ಬಂದಿಲ್ಲ ಎಂದರು.

ಗೋವಾ, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯ ಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆದ್ದಿದ್ದರೂ ಕೂಡ ಬಿಜೆಪಿ, ಕುದುರೆ ವ್ಯಾಪಾರ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರರು ನೀಡಿದ ತೀರ್ಮಾನಕ್ಕೆ ತದ್ವಿರುದ್ಧವಾಗಿ ಅಧಿಕಾರಕ್ಕೇರಿತು. ಇದೀಗ ರಾಜ್ಯದಲ್ಲೂ ಸರಕಾರವನ್ನು ಶಿಥಿಲ ಗೊಳಿಸಲು ಕುದುರೆ ವ್ಯಾಪಾರದಲ್ಲಿ ತೊಡಗಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕವಾಗುತ್ತಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿ ಪಕ್ಷದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಗುರುವಾರ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಜನರಿಂದ ಆಯ್ಕೆಯಾದ ಶಾಸಕರನ್ನು ಕೋಟ್ಯಂತ ರೂ. ಹಣದ ಆಮಿಷವೊಡ್ಡಿ ಖರೀದಿಸುವ ವಸ್ತು ಎಂಬಂತೆ ಪಕ್ಷಾಂತರ ಮಾಡುವ ಕೆಲಸಕ್ಕೆ ಬಿಜೆಪಿ ಮುಂದಾಗಿರುವುದು ನಾಚಿಕೆಗೇಡು. ಸಂವಿಧಾನದ ಮೇಲೆ ವಿಶ್ವಾಸ ಇಲ್ಲದ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಇದರ ಹಿಂದೆ ಮೋದಿ ಹಾಗೂ ಅಮಿತ್ ಶಾ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಎಮ್ ಎ ಗಫೂರ್, ವೆರೋನಿಕಾ ಕರ್ನೇಲಿಯೊ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಕಾರ್ಯದರ್ಶಿ ವಿಘ್ನೇಶ್ ಕಿಣಿ, ಕಾಂಗ್ರೆಸ್ ನಾಯಕರಾದ ಹರೀಶ್ ಕಿಣಿ, ಕಿರಣ್ ಕುಮಾರ್ ಉದ್ಯಾವರ, ಅಮೃತ್ ಶೆಣೈ, ಮೆಲ್ವಿನ್ ಡಿಸೋಜಾ, ವಿಲ್ಸನ್ ರೊಡ್ರಿಗಸ್, ಗೀತಾ ವಾಗ್ಳೆ, ರೋಶನಿ ಒಲಿವೇರಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love