ಬಿಜೆಪಿ ಟಿಕೆಟ್ ವಂಚನೆ ಆರೋಪ:  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ, ಸಹೋದರಿ ವಿರುದ್ಧದ ಎಫ್ ಐ ಆರ್

Spread the love

ಬಿಜೆಪಿ ಟಿಕೆಟ್ ವಂಚನೆ ಆರೋಪ:  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ, ಸಹೋದರಿ ವಿರುದ್ಧದ ಎಫ್ ಐ ಆರ್   

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮೀ ಜೋಶಿ ಸಹಿತ ಮೂವರ ವಿರುದ್ಧ ಸುನೀತಾ ಚವ್ಹಾಣ್ ಎಂಬುವರು ನೀಡಿದ ದೂರಿನನ್ವಯ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮಿ ಜೋಶಿ ಹಾಗೂ ಗೋಪಾಲ್ ಜೋಶಿ ಮಗ ಅಜಯ್ ಜೋಶಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ ಪಡೆದು ಟಿಕೆಟ್ ಕೊಡಿಸದೆ, ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ, ಹಣ ವಾಪಾಸ್ ಕೇಳಿದಾಗ ಗೂಂಡಾಗಳಿಂದ ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ದೇವಾನಂದ್ ಫುಲ್ ಸಿಂಗ್ ಅವರ ಪತ್ನಿ ಸುನೀತಾ ಚವ್ಹಾಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಎಫ್ ಐ ಆರ್ ನಲ್ಲೇನಿದೆ?

ಲಂಬಾಣಿ ಸಮುದಾಯಕ್ಕೆ ಸೇರಿರುವ ದೇವಾನಂದ್ ಪುಲ್ ಸಿಂಗ್ ಅವರು 2018ರಲ್ಲಿ ಬಿಜಾಪುರ ಜಿಲ್ಲೆಯ ನಾಗಠಾಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. 2023ರಲ್ಲಿ ಸೋತಿದ್ದರು.

ತಮಗೆ ಪರಿಚಯವಿದ್ದ ಅಥಣಿಯಲ್ಲಿ ಇಂಜಿಯನಿಯರ್ ಆಗಿರುವ ಶೇಖರ್ ನಾಯಕ್ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಸ್ಪರ್ಧಿಸುವುದರಿಂದ ಬಿಜಾಪುರ ಟಿಕೆಟ್ ಕೊಡಿಸುವುದಾಗಿ ಹೇಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಸಹೋದರ ಗೋಪಾಲ ಜೋಶಿಯವರನ್ನು ಪರಿಚಯಿಸಿದ್ದರು.

ಟಿಕೇಟಿಗಾಗಿ 5 ಕೋಟಿ ರೂ. ಹೊಂದಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ ಭೇಟಿಯಾಗಿ ಗೋಪಾಲ ಜೋಶಿ ಹೇಳಿದಾಗ ಸುನೀತಾ ಚವ್ಹಾಣ್ ಮತ್ತು ಅವರ ಪತಿ ದೇವಾನಂದ ಪುಲ್ ಸಿಂಗ್ ಚವ್ಹಾಣ್ ಅಷ್ಟು ಹಣ ತಮ್ಮಿಂದ ಹೊಂದಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ದೇವಾನಂದ ಪುಲ್ ಸಿಂಗ್ ಚವ್ಹಾಣ್ ಅವರಿಗೆ ಪ್ರಹ್ಲಾದ್ ಜೋಶಿ ಪ್ರಭಾವ ಬಳಸಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಗೋಪಾಲ ಜೋಶಿ ಭರವಸೆ ನೀಡಿದ್ದರು ಎಂದು ಸುನೀತಾ ಚವ್ಹಾಣ್ ಆರೋಪಿಸಿದ್ದಾರೆ.

ಬೆಂಬಿಡದೇ ಗೋಪಾಲ ಜೋಶಿ, ನಿರಂತರ ಕರೆ ಮಾಡಿ ಆರಂಭದಲ್ಲಿ 25 ಲಕ್ಷ ರೂ. ಕೊಟ್ಟು, ಉಳಿದ ಹಣಕ್ಕೆ ಭದ್ರತೆಯಾಗಿ ಚೆಕ್ ಕೊಡಿ ಎಂದು ಗೋಪಾಲ ಜೋಶಿ ಸುನೀತಾ ಚವ್ಹಾಣ್ ಅವರಿಗೆ ಹೇಳಿದ್ದರು. ಹಣವನ್ನು ಒಂದೇ ದಿನದಲ್ಲಿ ಬೆಂಗಳೂರಿನಲ್ಲಿರುವ ತನ್ನ ಸಹೋದರಿ ವಿಜಯಲಕ್ಷ್ಮೀ ಜೋಶಿಯವರ ಮನೆಗೆ ಮುಟ್ಟಿಸುವಂತೆ ಗೋಪಾಲ ಜೋಶಿ ತಿಳಿಸಿದ್ದರು. ಅದರಂತೆ ತುರ್ತಾಗಿ ಸಾಲ ಪಡೆದು 25 ಲಕ್ಷ ರೂ. ಹಣ ಹೊಂದಿಸಿದ ಸುನೀತಾ ಚವ್ಹಾಣ್ ಬೆಂಗಳೂರಿನಲ್ಲಿದ್ದ ವಿಜಯಲಕ್ಷ್ಮೀ ಜೋಶಿಯವರಿಗೆ ಹಣ ತಲುಪಿಸಿದ್ದರು.

ಸುನೀತಾ ಚವ್ಹಾಣ್ ಅವರಿಂದ ಮೊದಲು 25 ಲಕ್ಷ ರೂ. ಪಡೆದಿದ್ದ ಗೋಪಾಲ್ ಜೋಶಿ “”ಆ ಹಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರ ಸೆಕ್ರೆಟರಿಗೆ ನೀಡಿದ್ದು ನನ್ನ ತಮ್ಮ ಪ್ರಹ್ಲಾದ್ ಜೋಶಿಯ ವರ್ಚಸ್ಸು ಚೆನ್ನಾಗಿದೆ, ಅವನ ಮಾತನ್ನು ನರೇಂದ್ರ ಮೋದಿ ಮತ್ತು ಅಮಿತ್ ಷಾ ಇಬ್ಬರೂ ಕೇಳುತ್ತಾರೆ, ಟಿಕೆಟ್ ಗ್ಯಾರಂಟಿ” ಎಂದು ಭರವಸೆ ನೀಡಿದ್ದರು ಎಂದು ಸುನೀತಾ ಆರೋಪಿಸಿದ್ದಾರೆ.

ಟಿಕೆಟ್ ಸಿಗದೆ ಇದ್ದಾಗ ನೀಡಿದ್ದ ಹಣ ವಾಪಸ್ ಕೇಳಲು ಹೋದಾಗ, “ನನಗೆ 200 ಕೋಟಿ ರೂಪಾಯಿಗಳ ಪ್ರಾಜೆಕ್ಟ್ ಬಿಲ್ ಬರಲಿದೆ, ಎಂದು ಸದ್ಯಕ್ಕೆ 1ಕೋಟಿ 75 ಲಕ್ಷ ರೂ. ಕೊಡಿ ನಂತರ ಎಲ್ಲ ಹಣವನ್ನು ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ ಎಂದು ನಂಬಿಸಿ ಒಟ್ಟು ಎರಡು ಕೋಟಿ ರೂಪಾಯಿ ಪಡೆದಿದ್ದಾರೆ. ಮುಂದೆ ಚುನಾವಣೆಗೆ ನಿಂತರೆ ಖರ್ಚಿಗೆ 5 ಕೋಟಿ ನೀಡುವುದಾಗಿ ಭರವಸೆ ನೀಡಿದ್ದರು”, ಎಂದು ಸುನೀತಾ ಚವ್ಹಾಣ್ ತಿಳಿಸಿದ್ದಾರೆ.

ಹಣ ವಾಪಾಸ್ ಕೇಳಲು ಹೋದಾಗ ಗೋಪಾಲ ಜೋಶಿಯವರು ಚೆಕ್ ವಾಪಾಸ್ ನೀಡಿದರು. ಬಳಿಕ ಕರೆಗೂ ಸಿಗದೇ ಇದ್ದಾಗ, ಅವರ ಮಗ ಅಜಯ್ ಜೋಶಿ ಹಣಕ್ಕೆ ನಾನೇ ಜಾಮೀನು ಎಂದು ಪ್ರತೀ ಬಾರಿಯೂ ಭರವಸೆ ನೀಡಿ ಕಳುಹಿಸುತ್ತಿದ್ದರು. ಗೋಪಾಲ ಜೋಶಿ ಕರೆ ಸ್ವೀಕರಿಸದಿದ್ದಾಗ ಅಜಯ್ ಜೋಶಿಯೇ ವಾಪಾಸ್ ಕರೆ ಮಾಡಿ ಹಣವನ್ನು ನಾನೇ ನೀಡುತ್ತೇನೆ ಎಂದು ಭರವಸೆ ನೀಡುತ್ತಿದ್ದರು ಎಂದು ಸುನೀತಾ ತಿಳಿಸಿದ್ದಾರೆ.

ನಂತರ ಹಣ ವಾಪಸ್ ಕೇಳಲು ವಿಜಯಲಕ್ಷ್ಮಿಯವರ ಮನೆಗೆ ಹೋದಾಗ, ವಿಜಯ ಲಕ್ಷ್ಮಿ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಲ್ಲದೆ ಜಾತಿ ನಿಂದನೆ ಕೂಡಾ ಮಾಡಿದ್ದಾರೆ ಎಂದು ಸುನೀತಾ ಚವ್ಹಾಣ್ ದೂರಿನಲ್ಲಿ ಆರೋಪಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments