ಬಿಜೆಪಿ ತ್ಯಜಿಸುವುದು ಕನಸಿನ ಮಾತು; ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿ; ರಘುಪತಿ ಭಟ್

Spread the love

ಬಿಜೆಪಿ ತ್ಯಜಿಸುವುದು ಕನಸಿನ ಮಾತು; ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿ; ರಘುಪತಿ ಭಟ್

ಉಡುಪಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಅದರೊಂದಿಗೆ ಪಕ್ಷಾಂತರ ಪ್ರಕ್ರಿಯೆ ಕೂಡ ಚುರುಕಾಗಿದೆ. ಈ ನಡುವೆ ಕೆಲವು ಗಾಳಿ ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಕೆಲವು ನಾಯಕರಿಗೆ ಇರಿಸು ಮುರಿಸು ಸಂಭವಿಸಲು ಕಾರಣವಾಗುತ್ತಿದೆ.

ಕೆಲವು ಸಮಯದ ಹಿಂದೆ ರಾಜ್ಯದ ಯುವಜನ ಸೇವೆ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸುದ್ದಿ ಹಬ್ಬಿತ್ತು. ಅವುಗಳಿಗೆ ಹಲವಾರು ಬಾರಿ ಅವರು ಸ್ಪಷ್ಟನೆ ಕೂಡ ನೀಡಿದ್ದರು. ಈಗ ಪ್ರಮೋದ್ ಮಧ್ವರಾಜ್ ಅವರ ಬದ್ದ ರಾಜಕೀಯ ವಿರೋಧಿ ಬಿಜೆಪಿಯ ಪ್ರಬಾವಿ ನಾಯಕ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಭಾರಿ ಸುದ್ದಿಯಾಗಿದೆ.

ಇದಕ್ಕೆ ತನ್ನ ಫೇಸ್ಬುಕ್ ವಾಲ್ ಹಾಗೂ ಮ್ಯಾಂಗಲೋರಿಯನ್ ಪ್ರತಿನಿಧಿಗೆ ಸ್ಪಷ್ಟನೆ ನೀಡಿರುವ ರಘುಪತಿ ಭಟ್ ಅವರು ತಾನು ಬಿಜೆಪಿ ಪಕ್ಷ ತ್ಯಜಿಸುವುದು ಕನಸಿನ ಮಾತು ಇದು ಕಾಂಗ್ರೆಸಿಗರು ಹಾಗೂ ಇತರ ಪಕ್ಷಗಳು ಹರಡಿರುವ ಗಾಳಿ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದು ನಾನು ಓದಿದ “ಜೋಕ್ ಆಫ್ ದ ಇಯರ್”: ಮಾಜಿ ಶಾಸಕರಾದ ರಘುಪತಿ ಭಟ್ ರವರು ಬೇರೆ ರಾಜಕೀಯ ಪಕ್ಷವನ್ನು ಸೇರಲಿದ್ದಾರೆ ಎನ್ನುವ ಸುಳ್ಳು ಸುದ್ದಿ. ಈ ಹುರುಳಿಲ್ಲದ ಅರ್ಥಹೀನ ಗಾಳಿ ಸುದ್ದಿಯು ಬೇರೆ ರಾಜಕೀಯ ಪಕ್ಷದವರ ಹತಾಶ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ನಾನು ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಪರಿವರ್ತನಾ ಯಾತ್ರೆ ಯಶಸ್ವಿಯ ನಿಟ್ಟಿನಲ್ಲಿ ವಿವಿಧ ಸಭೆಗಳಲ್ಲಿ ತೊಡಗಿಸಿಕೊಂಡಿದ್ದು, ತನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ನೀಡದೆ ಇದ್ದಾಗಲೂ ಕೂಡ ನಾನು ನನ್ನ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆ. ನಾನು ಎಂದಿಗೂ ಕೂಡ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಬದಲಾಗಿ ರಾಜ್ಯ ಮತ್ತು ಉಡುಪಿ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.


Spread the love