ಬಿಜೆಪಿ ಬೈಕ್ ಜಾಥಾಗೆ ಅನುಮತಿ ನಿರಾಕರಣೆ; ಜಿಲ್ಲಾ ಎಸ್ಪಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದ ಸಂಸದೆ ಶೋಭಾ
ಉಡುಪಿ: ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಏಜೆಂಟರಂತೆ ವರ್ತಿಸುತ್ತಿದ್ದು ಬಿಜೆಪಿ ನಾಯಕರು ಅವರಲ್ಲಿಗೆ ಹೋದರೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವ ಕನಿಷ್ಠ ಸೌಜನ್ಯ ಕೂಡ ತೋರಿಸುತ್ತಿಲ್ಲ. ಇವರ ಇಂತಹ ವರ್ತನೆಗೆ ತಕ್ಕ ಉತ್ತರ ಸದ್ಯವೇ ನೀಡಬೇಕಾದೀತು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ.
ಗುರುವಾರ ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯ ಬಸ್ ನಿಲ್ದಾಣದ ಬಳಿ ಶರತ್ ಮಡಿವಾಳ ಹತ್ಯೆ, ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಸದೆ ಜಿಲ್ಲಾ ಬಿಜೆಪಿಯ ವತಿಯಿಂದ ಆಯೋಜಿಸಿದ ಪ್ರತಿಭಟನಾ ಬೈಕ್ ಜಾಥಾಕ್ಕೆ ಪೋಲಿಸರು ಅನುಮತಿ ನೀಡಿಲ್ಲ. ರಾಜ್ಯದಲ್ಲಿ ಪ್ರತಿಭಟನೆ ಸಭೆ ನಡೆಸಲು ಬಿಜೆಪಿಗೆ ಒಂದು ನೀತಿ ಕಾಂಗ್ರೆಸಿಗೆ ಒಂದು ನೀತಿ ಅನುಸರಿಸಲಾಗುತ್ತಿದೆ.
ಉಡುಪಿಗೆ ಎಸ್ಪಿಯವರು ಬಂದು ಇಷ್ಟು ದಿನವಾದರೂ ಕೂಡ ಅವರ ಮುಖದರ್ಶನವಾಗುತ್ತಿಲ್ಲ. ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಸ್ಪಿಯಾಗಿದ್ದಾರೆ ಅನ್ನುವ ರೀತಿಯಲ್ಲಿ ಅವರು ವರ್ತಿಸುತ್ತಿದ್ದಾರೆ. ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಎಸ್ಪಿಯಾ ಅಥವಾ ಇಡೀ ಜಿಲ್ಲೆಗೆ ಎಸ್ಪಿಯಾಗಿದ್ದಾರೆ ಎನ್ನುವುದುನ್ನು ಪ್ರಶ್ನಿಸಿದ ಕರಂದ್ಲಾಜೆ ಅವರು ಇದು ಹೆಚ್ಚು ದಿನ ಮುಂದುವರೆಯುವುದಿಲ್ಲ ಇನ್ನೂ 8 ತಿಂಗಳಲ್ಲಿ ರಾಜ್ಯದಲ್ಲಿ ಚುನವಾಣೆ ನಡೆಯಲಿದ್ದು ಹೊಸ ಬಿಜೆಪಿ ಸರಕಾರ ಬರುವಾಗ ಇದಕ್ಕೆಲ್ಲಾ ತಕ್ಕ ಉತ್ತರ ಲಭಿಸಲಿದೆ ಎಂದು ಎಚ್ಚರಿಸಿದ್ದಾರೆ.