ಬಿಜೆಪಿ ಭಿನ್ನಮತ ಪಕ್ಷದ ನಾಯಕರಿಗೆ ಬಿಟ್ಟದ್ದು, ಚುನಾವಣೆಗೆ ಕೊಡ್ಗಿ ಆಶೀರ್ವಾದ ಪಡೆದಿದ್ದೇನೆ – ಹಾಲಾಡಿ ಶ್ರೀನಿವಾಸ ಶೆಟ್ಟಿ
ಉಡುಪಿ: ಕುಂದಾಪುರದಲ್ಲಿ ಬಿಜೆಪಿಯಿಂದ ತನಗೆ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೇಟ್ ನೀಡಿರುವ ಕುರಿತು ಉಂಟಾಗಿರುವ ಭಿನ್ನಮತಕ್ಕೂ ನನಗೂ ಏನು ಸಂಬಂಧವಿಲ್ಲ ಅದನ್ನು ರಾಜ್ಯದ ಅಧ್ಯಕ್ಷರು ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕರು ಬಗೆಹರಿಸಲಿದ್ದಾರೆ. ಪಕ್ಷ ಈಗಾಗಲೇ ನನ್ನನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದು ಅತಿ ಹೆಚ್ಚು ಅಂತರ ಮತಗಳಿಂದ ಗೆಲ್ಲುವ ವಿಶ್ವಾಸ ತನಗಿದೆ ಎಂದು ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ದೇಶದಾದ್ಯಂತ ಬಿಜೆಪಿ ಸಂಸದರು ಕಾಂಗ್ರೆಸ್ ವಿರುದ್ದ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಪ್ರತಿಯೊಂದು ಪಕ್ಷದೊಳಗೂ ಭಿನ್ನಮತ ಬರುವುದು ಸಾಮಾನ್ಯ ಆದರೆ ಅವರ ಜೊತೆ ಕೂಡ ಮಾತನಾಡಿ ಚುನಾವಣೆಯ ಗೆಲುವಿಗೆ ಅವರ ಸಹಕಾರವನ್ನು ಕೂಡ ಯಾಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ. ಕಿಶೋರ್ ಕುಮಾರ್ ಮತ್ತು ಇತರ ಕೆಲವರು ಪಕ್ಷದ ಹುದ್ದೇಗಳಿಗೆ ರಾಜೀನಾಮೆ ನೀಡಿರುವುದು ತಿಳಿದು ಬಂದಿದೆ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವುದು ಅವರಿಗೆ ಬಿಟ್ಟ ವಿಚಾರ ಆದರೆ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಅಂದ ಮೇಲೆ ಅವರು ತನ್ನನ್ನು ಬೆಂಬಲಿಸುವ ವಿಶ್ವಾಸ ತನಗಿದೆ. ಒಮ್ಮೆ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಪಕ್ಷದ ಸಾಮಾನ್ಯ ಕಾರ್ಯಕರ್ತ ಕೂಡ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು ಎನ್ನುವುದು ಪಕ್ಷದ ಸಿದ್ದಾಂತವಾಗಿದೆ. ಅಲ್ಲದೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ ಎಂದರು.
ಕಿಶೋರ್ ಕುಮಾರ್ ಮತ್ತು ಅವರ ಬೆಂಬಲಿಗರು ನಮ್ಮ ಪರವಾಗಿ ಪ್ರಚಾರಕ್ಕೆ ಬರಬೇಕು ಎನ್ನುವುದು ನಮ್ಮ ಅಪೇಕ್ಷೆ ಒಂದು ವೇಳೆ ಬರದೆ ಹೋದರೂ ಕೂಡ ಸ್ವಲ್ಪ ಪರಿಣಾಮ ಬೀರುವುದು ಖಂಡಿತ. ಕಳೆದ ಚುನಾವಣೆಯಲ್ಲಿ ಕಿಶೋರ್ ಕುಮಾರ್ ಅವರು ನನ್ನ ವಿರುದ್ದ ಸ್ಪರ್ಧೆ ಮಾಡಿದ್ದರು ಆಗಲೂ ಸಹ ನಾನು ಗೆದ್ದಿದ್ದೇನೆ ಅದೇ ರೀತಿಯಲ್ಲಿ ಈ ಬಾರಿಯೂ ಕೂಡ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಸೇರಿಕೊಂಡು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ತನಗಿದೆ. ಚುನಾವಣೆಗೆ ಯಾರೂ ಸಹಕಾರ ನೀಡಿದರು ಅದು ನಮಗೆ ಶ್ರೀರಕ್ಷೆ ಎಂದರು.
ಹಿರಿಯ ನಾಯಕ ಎಜಿ ಕೋಡ್ಗಿಯವರು ಹಿರಿಯರು ಅವರು ನನ್ನಬಗ್ಗೆ ಏನು ಮಾತನಾಡಿದ್ದಾರೆ ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಆದರೆ ಇಂದು ನಾನು ಅವರನ್ನು ಭೇಟಿ ಮಾಡಿ ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ತಿಳಿಸಿದ್ದೇನೆ ಹಾಗೂ ಅವರ ಆಶೀರ್ವಾದವನ್ನೂ ಸಹ ಪಡೆದಿದ್ದೇನೆ. ಅವರ ಬಗ್ಗೆ ಹೆಚ್ಚು ಗೌರವ ಇಟ್ಟುಕೊಂಡಿದ್ದೇನೆ. ಕೆಲವೊಂದು ವಿಚಾರಗಳಲ್ಲಿ ಪರಸ್ಪರ ಸ್ವಲ್ಪ ಅಂತರ ಇರಬಹುದು ಅದು ನನಗೆ ಮಾತ್ರ ಸೀಮಿತವಲ್ಲ ಎಲ್ಲಾ ಪಕ್ಷಗಳಲ್ಲೂ ಅದು ಇದೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.
ನಾನು ಇದು ವರೆಗೆ ಸ್ಪರ್ಧಿಸಿದ ಚುನಾವಣೆಗಳಲ್ಲಿ ಎಂದೂ ಕೂಡ ಮತದಾರರ ಮನೆಗೆ ಹೋದ ಉದಾಹರಣೆಗಳಿಲ್ಲ ನಮ್ಮ ಪಕ್ಷದ ಕಾರ್ಯಕರ್ತರೆ ಪ್ರಚಾರಕ್ಕಾಗಿ ತೆರಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಅದನ್ನು ಬಿಟ್ಟರೆ ನಿರಂತರವಾಗಿ ಜನರ ಸಂಪರ್ಕದೊಂದಿಗೆ ಮನೆಯಲ್ಲಿ ಕುಳಿತು ಕೆಲಸ ಮಾಡುವುದು ನನ್ನ ಹವ್ಯಾಸವಾಗಿದೆ ಎಂದರು.