Home Mangalorean News Kannada News ಬಿಜೆಪಿ ವಿರುದ್ದ ಮತ ಚಲಾಯಿಸಲು ಕಟ್ಟಡ ಕಾರ್ಮಿಕರಿಗೆ ಕರೆ

ಬಿಜೆಪಿ ವಿರುದ್ದ ಮತ ಚಲಾಯಿಸಲು ಕಟ್ಟಡ ಕಾರ್ಮಿಕರಿಗೆ ಕರೆ

Spread the love

ಬಿಜೆಪಿ ವಿರುದ್ದ ಮತ ಚಲಾಯಿಸಲು ಕಟ್ಟಡ ಕಾರ್ಮಿಕರಿಗೆ ಕರೆ

ನೋಟು ಅಮಾನ್ಯೀಕರಣ ಹಾಗೂ ಜಿಎಸ್ ಟಿ ನೀತಿಗಳನ್ನು ಜಾರಿ ಮಾಡಿ ಕೋಟ್ಯಾಂತರ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತೆ ಅಧಿಕಾರಕ್ಕೇರದಂತೆ ತಡೆಯಬೇಕು ಹಾಗೂ BJP ಪಕ್ಷದ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಬೇಕೆಂದು CITU ಸಂಯೋಜಿತಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (CWFI) ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಕರೆ ನೀಡಿದೆ.

2014 ರಲ್ಲಿ ಸಬ್ ಕಾ ಸಾಥ್ -ಸಬ್ ಕಾ ವಿಕಾಸ್ ಎನ್ನುವ ಘೋಷಣೆಯೊಂದಿಗೆ ಅತಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಹಾಗೂ ಎನ್ ಡಿ ಎ ಮಿತ್ರ ಪಕ್ಷಗಳು ಪಡೆದಿದ್ದವು. ಆದರೆ ತಾನು ಅಂಗೀಕರಿಸಿದ ಘೋಷಣೆಗೆ ವಿರುದ್ದವಾಗಿ ಹೆಜ್ಜೆ ಹಾಕಿದ ನರೇಂದ್ರ ಮೋದಿ ಸರಕಾರವು ದೇಶದ ಕಾರ್ಮಿಕ ವರ್ಗ ಸ್ವಾತಂತ್ರ್ಯ ಪೂರ್ವದಿಂದ ಹೋರಾಡಿ ತ್ಯಾಗ ಬಲಿದಾನದಿಂದ ಗಳಿಸಿದ್ದ 44 ಕಾರ್ಮಿಕರ ಕಾನೂನುಗಳನ್ನು ಮಾಲಿಕರ ಪರವಾಗಿ ತಿದ್ದುಪಡಿ ಮಾಡಲು ಮುಂದಾಗಿರುವುದು ಖಂಡನೀಯವಾಗಿದೆ.

ಕಟ್ಟಡ ಕಾರ್ಮಿಕರ ಬದುಕಿಗೆ ಸಂಚಕಾರ ನರೇಂದ್ರ ಮೋದಿ ಸರಕಾರ ಹೀಗೆ ರದ್ದು ಮಾಡಲು ಹೊರಟಿರುವ ಪ್ರಮುಖ ಕಾನೂನುಗಳಲ್ಲಿ, ದೇಶದ ಕೋಟ್ಯಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ನೊಂದಣಿಯಾಗಿರುವ ಹಾಗೂ ಸೌಲಭ್ಯ ಪಡೆಯುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾನೂನು 1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸೆಸ್ ಕಾನೂನು 1996 ಗಳು ಸೇರಿವೆ. ಉದ್ದೇಶಿತ ವೃತ್ತಿ ಆಧಾರಿತ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತ ಸಂಹಿತೆ ಒಳಗೆ ನಮ್ಮ ಕಟ್ಟಡ ಕಾರ್ಮಿಕ ಕಾನೂನುಗಳು ಸೇರಿ ರದ್ದಾಗಲಿವೆ ಎಂಬ ಆತಂಕದ ಸಂಗತಿ ಎದುರಾಗಿತ್ತು. ಆದರೆ ದೇಶಾದ್ಯಂತ ಕಟ್ಟಡ ನಿರ್ಮಣ ವಲಯದ ಕಾರ್ಮಿಕರು ತಮ್ಮ ಪಕ್ಷಭೇಧ ಮರೆದು ಸರಕಾರದ ಈ ಕ್ರಮವನ್ನು ಪ್ರತಿಭಟಿಸಿದರು. ಅಂತಿಮವಾಗಿ ಲೋಕಸಭೆಯ ವಿಸರ್ಜನೆಯೊಂದಿಗೆ ಉದ್ದೇಶಿತ ಮಸೂದೆ ಅಂಗೀಕಾರವಾಗಲಿಲ್ಲ.ಆದರೆ ಭವಿಷ್ಯದಲ್ಲಿ ಮೋದಿಯವರೆ ಅಧಿಕಾರಕ್ಕೆ ಬಂದರೆ ಈಗ ರೂಪಿಸಿರುವ ಕರುಡು ಮಸೂದೆ ಜಾರಿಗೊಳಿಸುವ ಅಪಾಯವಿದೆ.

ಮೋದಿ ಸರಕಾರ ರೂಪಿಸಿದ್ದ ಮಸೂದೆ ಮುಂದೆ ಕಾಯ್ದೆಯಾಗಿ ಜಾರಿಯಾದರೆ ಆಗುವ ಪರಿಣಾಮಗಳು ಹೀಗಿವೆ……
1996 ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕರ ಕಾನೂನು ಹಾಗೂ ಸೆಸ್ ಕಾನೂನುಗಳೆರಡು ರದ್ದಾಗುತ್ತವೆ. ಈಗಾಗಲೇ ನೊಂದಣೆಯಾಗಿರುವ ಗುರುತಿನ ಚೀಟಿಗಳು ರದ್ದಾಗುತ್ತದೆ. ಹೊಸದಾಗಿ ಕೇಂದ್ರದಲ್ಲಿ ‘ಪ್ರಧಾನ ಮಂತ್ರಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆ ಹಾಗೂ ‘ಕಾರ್ಮಿಕ ಸಚಿವರು ಉಪಾಧ್ಯಕ್ಷರಾಗಿರುವ ‘ಸಲಹಾ ಮಂಡಳಿ’ಗಳು ರಚನೆಯಾಗುತ್ತವೆ ಮತ್ತು ಅವುಗಳು ಹಿಂದಿನಂತೆ ತೀರ್ಮಾನ ಕೈಗೊಳ್ಳುವ ಮಂಡಳಿಗಳಾಗಿರುವುದಿಲ್ಲ ಬದಲಾಗಿ ಸಲಹಾ ಮಂಡಳಿಗಳಾಗಿರುತ್ತವೆ.

ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಬ್ಬರೂ ಹೊಸ ರಾಜ್ಯ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರು ಹೆಸರು ನೊಂದಾಯಿಸಿ ಕೊಳ್ಳಬೇಕು. ಆದರೆ ಈ ನೊಂದಣಿ ಕಡ್ಡಾಯವಿಲ್ಲ. ಅಸಂಘಟಿತ ವಲಯದ ಕಾರ್ಮಿಕರು 14ನೇ ವಯಸ್ಸಿನಿಂದ ನೊಂದಣಿ ಮಾಡಬಹುದು. ಇದರಿಂದ ಬಾಲ ಕಾರ್ಮಿಕ ಪದ್ದತಿಗೆ ಉತ್ತೇಜನ ನೀಡುತ್ತದೆ. ರಚನೆಯಾಗುವ ಮಂಡಳಿಗಳಲ್ಲಿ . ಮಾಲೀಕರು, ಸ್ವಯಂ ಸೇವಾ ಸಂಘಗಳು ಮತ್ತು ವಕೀಲರು ನೊಂದಣಿಗೆ ಸಹಾಯ ಮಾಡಬಹುದು. ಕಾರ್ಮಿಕ ಸಂಘಟನೆಗಳ ಪಾತ್ರವಿರುವುದಿಲ್ಲ. ರಾಜ್ಯ ಕಲ್ಯಾಣ ಮಂಡಳಿ ಬರೀ ಸಲಹಾ ಮಂಡಳಿಯಾಗಿರುತ್ತದೆ. ಮಾಲೀಕರು ನೊಂದಣಿ ಮಾಡಬೇಕಾದುದಿಲ್ಲ. ಕಾರ್ಮಿಕರ ಕೆಲಸ ಮತ್ತು ವೇತನ ನಿಯಂತ್ರಣ ಇರುವುದಿಲ್ಲ. ದೇಶದ ಕೋಟ್ಯಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಹಲವು ವರ್ಷಗಳ ಕಾಲ ಹೋರಾಟ ನಡೆಸಿ ಗಳಿಸಿದ ಕಾನೂನುಗಳನ್ನು ಮತ್ತು ಅದರಡಿ ದೊರಕುತ್ತಿದ್ದ ಸೌಲಭ್ಯಗಳನ್ನು ಇಲ್ಲದಂತೆ ಮಾಡುವ ಹುನ್ನಾರದ ವಿರುದ್ದ ಕಟ್ಟಡ ಕಾರ್ಮಿಕ ಕಾನೂನು-1996 ಉಳಿಸಿ-ಕಟ್ಟಡ ಕಾರ್ಮಿಕಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಿ ಎನ್ನುವ ವಿಶಾಲ ಆಂದೋಲನವನ್ನು ಹಾಗೂ ರಾಜ್ಯದ ಲೋಕಸಭಾ ಸದಸ್ಯರ ಮನೆಗಳ ಎದುರು ಹಾಗೂ ಕೇಂದ್ರ ಸಚಿವರ ಮನೆ ಮುಂದೆ ಕಟ್ಟಡ ನಿರ್ಮಾಣ ವಲಯದಲ್ಲಿರುವ ಕಾರ್ಮಿಕ ಸಂಘಟನೆಗಳು ಒಂದಾಗಿ ಪ್ರತಿಭಟನೆ ನಡೆಸಿವೆ.

ಈ ಹೋರಾಟದ ಮುಂದುವರೆದ ಭಾಗವಾಗಿಯೇ ಏಪ್ರಿಲ್ 18ರಂದು ನಡೆಯಲಿರುವ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿ ಪ್ರಬಲ ಜಾತ್ಯಾತೀತ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಹಾಗೂ ಕುಟುಂಬದ ಸದಸ್ಯರು ಶ್ರಮಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನ ಮೊಗರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version