ಬಿಜೆಪಿ, ಸಂಘಪರಿವಾರದ ಕುಮಟಾ ಪ್ರತಿಭಟನೆ, ಗಲಭೆಗಳು ಪೂರ್ವ ನಿಯೋಜಿತ; ಪಿಎಫ್ ಐ ದಕ ಜಿಲ್ಲಾಧ್ಯಕ್ಷ ನವಾಝ್
ಮಂಗಳೂರು: ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಪಕ್ಷವು ಸಾವಿನಮನೆಯಲ್ಲಿ ರಾಜಕೀಯ ನಡೆಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಮೊದಲೇ ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ಶಂಕರ್ ಎಂ ಜಕ್ಕನ್ನವರ ರವರು ಹೊನ್ನಾವರ ಪೊಲೀಸರಿಗೆ ನೀಡಿರುವ ಮರಣೋತ್ತರ ವರದಿಯ ಪ್ರಕಾರ ಆಯುಧದಿಂದ ಹಲ್ಲೆ ನಡೆಸಿದ ಗುರುತಾಗಲಿ ಅಥವಾ ಉಸಿರುಗಟ್ಟಿಸಿ ಸಾಯಿಸಿರುವ ಲಕ್ಷಣಗಳಾಗಲಿ ಪರೇಶ್ ಮೇಸ್ತ ಮೃತದೇಹದಲ್ಲಿ ಕಂಡುಬಂದಿಲ್ಲ ಮತ್ತು ಇದೊಂದು ಸಹಜ ಸಾವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಾವಿನ ಬಗ್ಗೆ ಹೆಚ್ಚಿನ ತನಿಖೆ ಇನ್ನಷ್ಟೇ ಪ್ರಗತಿಯಲ್ಲಿರುವಾಗ, ಒಬ್ಬ ಜನಪರವಾಗಿ ಜನಪ್ರತಿನಿಧಿಯಾಗಿ ಎಲ್ಲರ ಮನಸ್ಸನ್ನು ಗೆಲ್ಲಬೇಕಾಗಿದ್ದವರು ಸಾವಿನ ಹೆಸರಿನಲ್ಲಿ ಸಮಾಜಕ್ಕೆ ಬೆಂಕಿ ಹೊತ್ತಿಸಿ, ಆದರಿಂದ ತನ್ನ ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ಬಿಜೆಪಿಯ ನಡೆ ನಿಜವಾಗಿಯೂ ಖಂಡನಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರ ಕುಮಟಾದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಮತ್ತು ನಂತರ ನಡೆದ ಗಲಭೆ ರ್ವನಿಯೋಜಿತವಾಗಿತ್ತು ಎಂದು ಅವರು ಆರೋಪಿಸಿದರು. ಈ ಗಲಭೆಯಿಂದ ಐ.ಜಿ.ಪಿ ಹೇಮಂತ ನಿಂಬಾಳ್ಕರ್ ಕಾರಿನಿಂದ ಇಳಿದ ನಂತರ ಚಾಲಕ ಒಳಗಿದ್ದಾಗಲೇ ಕಾರಿಗೆ ಬೆಂಕಿ ಹಚ್ಚಿದ್ದು, ಗಂಭೀರ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಪಿಎಸ್’ಐ ಇ.ಸಿ ಸಂಪತ್,ದಾಂಡೇಲಿ ಮಹಿಳಾ ಎಸ್.ಐ ಸೇರಿದಂತೆ ಸುಮಾರು ಹತ್ತು ಜನ ಪೋಲಿಸರು ಗಾಯಗೊಂಡಿದ್ದಾರೆ.ಹಲವು ಮನೆಗಳ ಮೇಲೆ ಅಂಗಡಿಗಳ ಮೇಲೆ ಮತ್ತು ಮಾಧ್ಯಮದವರ ಮೇಲೆಯೂ ಕಲ್ಲು ತೂರಲಾಗಿದೆ. ಇದು ನಿಜಕ್ಕೂ ಖಂಡನಾರ್ಹ.
ಈ ಘಟನೆಗೆ ಸರಕಾರದ ನಿರ್ಲಕ್ಷ್ಯವೇ ಕಾರಣವಾಗಿದ್ದು, ಹೊನ್ನಾವರ ಮತ್ತು ಆಸುಪಾಸಿನ ಜನರು ಶಾಂತಿಯನ್ನು ಕಾಪಾಡಬೇಕು. ಹೊನ್ನಾವರ ಸಹಜ ಸ್ಥಿತಿಗೆ ಮರಳಲು ಸರಕಾರ ಎಲ್ಲಾ ಪ್ರಯತ್ನಗಳನ್ನು ಕೂಡಲೇ ಮಾಡಬೇಕು. ಮತ್ತು ಗಲಭೆಗೆ ಪ್ರಚೋಧನೆ ನೀಡಿದ ಹಾಗೂ ಗಲಭೆ ನಡೆಸಿದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಿ.ಫ್.ಐ ಜಿಲ್ಲಾದ್ಯಕ್ಷ ನವಾಝ್ ಉಳ್ಳಾಲ ಸರಕಾರಕ್ಕೆ ಒತ್ತಾಯಿಸಿದ್ದಾರೆ.