ಬಿಜೆಪಿ ಸರಕಾರದಿಂದ ಕೊರೋನಾ ಉಪಕರಣಗಳ ಹೆಸರಲ್ಲಿ ಹಣ ಲೂಟಿ; ನ್ಯಾಯಾಂಗ ತನಿಖೆಗೆ ದಿನೇಶ್ ಗುಂಡೂರಾವ್ ಆಗ್ರಹ
ಉಡುಪಿ: ಕೋವಿಡ್ ನಿರ್ವಹಣೆಗಾಗಿ ವೈದ್ಯಕೀಯ ಮತ್ತು ಸುರಕ್ಷಾ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರಕಾರ ದೊಡ್ಡ ಪ್ರಮಾಣದ ಭ್ರಷ್ಟಾಚಾರ, ಅವ್ಯವಹಾರ ನಡೆಸಿದ್ದು ಸತ್ಯಾಸತ್ಯತೆ ಬಹಿರಂಗಕ್ಕೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ್ಯ ದಿನೇಶ್ ಗುಂಡೂರಾವ್ ಆಗ್ರಹಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸ್ಪೀಕ್ ಆಫ್ ಕರ್ನಾಟಕ’ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದುಪ್ಪಟ್ಟು ಹಣ ಕೊಟ್ಟು ಆರೋಗ್ಯ ಉಪಕರಣಗಳನ್ನು ಖರೀದಿಸಲಾಗಿದೆ. ಇದರ ಬಗ್ಗೆ ಧ್ವನಿ ಎತ್ತಿದ ಬಳಿಕ ಸಚಿವರುಗಳು ದ್ವಂದ್ವ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್ ಮತ್ತಿತರ ವೈದ್ಯಕೀಯ ಮತ್ತು ಸುರಕ್ಷಾ ಉಪಕರಣಗಳ ಖರೀದಿಯಲ್ಲಿ ರೂ 2 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದ್ದು ಇದಕ್ಕೆ ಸೂಕ್ತ ಪುರಾವೆಗಳಿವೆ. ಸರ್ಕಾರದ ಮೇಲೆ ಜನತೆಗೆ ಅಪ ನಂಬಿಕೆಗಳು ಬರಬಾರದು. ಸತ್ಯ-ಅಸತ್ಯತೆಗಳು ರಾಜ್ಯದ ಜನತೆಗೆ ಗೊತ್ತಾಗಬೇಕು. ಒಂದು ವೇಳೆ ತನಿಖೆಗೆ ವಹಿಸದಿದ್ದರೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆದ್ದರಿಂದ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಆಯೋಗ ರಚನೆಯಾಗಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ತಡೆಗಟ್ಟುವಲ್ಲಿ ಹಾಗೂ ರೋಗದಿಂದ ಬಳಲುತ್ತಿರುವ ಜನರಿಗೆ ಉಪಚಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೋವಿಡ್ನಿಂದ ರಾಜ್ಯದಲ್ಲಿ ಸಂಕಷ್ಟದ ಸನ್ನಿವೇಶ ಎದುರಾಗಿದೆ. ಈ ಸಂದರ್ಭದಲ್ಲಿ ಮಾನವೀಯತೆ, ಅನುಕಂಪದಿಂದ ಜನರ ಸೇವೆ ಮಾಡಬೇಕಾಗಿದ್ದ ರಾಜ್ಯ ಸರ್ಕಾರವೇ ಆರೋಗ್ಯ ಮತ್ತು ಸುರಕ್ಷ ಉಪಕರಣಗಳ ಖರೀದಿಯಲ್ಲಿ ₹ 2 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದರು.
ಆರೇಳು ವರ್ಷಗಳಷ್ಟು ಹಳೆಯದಾದ ನೂರಾರು ವೆಂಟಿಲೇಟರ್ ಗಳನ್ನು ಖರೀದಿಸಲಾಗಿದ್ದು, ಈ ಬಗ್ಗೆ ಬಿಜೆಪಿಯ ಮಾಜಿ ಶಾಸಕರುಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.
ಆರೋಗ್ಯ ಇಲಾಖೆಯಿಂದ ರೂ 700 ಕೋಟಿ, ಬಿಬಿಎಂಸಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ರೂ 200 ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆ ರೂ 815 ಕೋಟಿ, ಜಿಲ್ಲಾಡಳಿತಗಳಿಗೆ ನೀಡಿರುವ ಎಸ್ಡಿಆರ್ಎಫ್ ಹಣ ₹ 742 ಕೋಟಿ, ಕಾರ್ಮಿಕ ಇಲಾಖೆ ರೂ 1 ಸಾವಿರ ಕೋಟಿ, ಸಮಾಜ ಕಲ್ಯಾಣ, ಆಹಾರ, ಶಿಕ್ಷಣ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಳಗೊಂಡಂತೆ ಇತರೆ ಇಲಾಖೆಗಳು ರೂ 500 ಕೋಟಿ, ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು ಖರೀದಿಗೆ ರೂ 160 ಕೋಟಿ ಹಾಗೂ ಕೇಂದ್ರ ಸರ್ಕಾರ ಖರೀದಿಸಿ ಪೂರೈಕೆ ಮಾಡಿರುವ ಉಪಕರಣ ಮೌಲ್ಯ ರೂ 50 ಕೋಟಿ ಸೇರಿದಂತೆ ಒಟ್ಟು ರೂ 4,167 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಸಚಿವರು, ಅಧಿಕಾರಿಗಳು ಲೂಟಿ ಮಾಡಿದ್ದಾರೆ. ಆದರೆ, ಸಚಿವರು ಕೇವಲ ರೂ 324 ಕೋಟಿ ಮಾತ್ರ ಇದುವರೆಗೆ ಖರ್ಚು ಮಾಡಿದ್ದೇವೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಡಾ|ಜಯಮಾಲಾ, ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ನಾಯಕರಾದ ಜಿ ಎ ಬಾವಾ, ವಿನಯ್ ರಾಜ್, ಹರೀಶ್ ಕಿಣಿ, ವೆರೋನಿಕಾ ಕರ್ನೆಲಿಯೊ, ರೋಶನಿ ಒಲಿವರ್, ಗೀತಾ ವಾಗ್ಳಿ, ಮುರಳಿ ಶೆಟ್ಟಿ, ದಿನೇಶ್ ಪುತ್ರನ್, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತತರು ಉಪಸ್ಥಿತರಿದ್ದರು.