Home Mangalorean News Kannada News ಬಿಜೆಪಿ ಸೋಲಿಸಲು ಕಾರ್ಯತಂತ್ರ ರೂಪಿಸಲು ಸಮಾನ ಮನಸ್ಕ ರಾಜಕೀಯ ಪಕ್ಷ, ಸಂಘಟನೆಗಳ ಸಮಾಲೋಚನಾ ಸಭೆ 

ಬಿಜೆಪಿ ಸೋಲಿಸಲು ಕಾರ್ಯತಂತ್ರ ರೂಪಿಸಲು ಸಮಾನ ಮನಸ್ಕ ರಾಜಕೀಯ ಪಕ್ಷ, ಸಂಘಟನೆಗಳ ಸಮಾಲೋಚನಾ ಸಭೆ 

Spread the love

ಬಿಜೆಪಿ ಸೋಲಿಸಲು ಕಾರ್ಯತಂತ್ರ ರೂಪಿಸಲು ಸಮಾನ ಮನಸ್ಕ ರಾಜಕೀಯ ಪಕ್ಷ, ಸಂಘಟನೆಗಳ ಸಮಾಲೋಚನಾ ಸಭೆ 

  • ಎಪ್ರಿಲ್ 15 ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲು ತೀರ್ಮಾನ

ಮಂಗಳೂರು: ಅಘೋಷಿತ ತುರ್ತು ಪರಿಸ್ಥಿತಿಯ ಭೀತಿಯ ನಡುವೆ ನಡೆಯುತ್ತಿರುವ ನಿರ್ಣಾಯಕ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾರ್ಯತಂತ್ರ ರೂಪಿಸುವ ಉದ್ದೇಶದೊಂದಿಗೆ “ಇಂಡಿಯಾ” ಕೂಟದ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಹಾಗೂ ಸಮಾನ ಮನಸ್ಕ ರೈತ, ದಲಿತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ, ಯುವಜನ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಪ್ರಮುಖರ ಸಮಾಲೋಚನಾ ಸಭೆ ಮಂಗಳೂರಿನಲ್ಲಿ ಇಂದು ನಡೆಯಿತು.

ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಿದರೆ ದೇಶದ ಸಾಂವಿಧಾನ, ಜನಸಾಮಾನ್ಯರು, ದುರ್ಬಲ ವಿಭಾಗಗಳು, ದುಡಿಯುವ ವರ್ಗಗಳು ಎದುರಿಸಬೇಕಾಗುವ ಅಪಾಯಗಳ ಕುರಿತು ಸಭೆ ವಿಸ್ತಾರವಾಗಿ ಚರ್ಚಿಸಿತು. ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮಹಿಂಸೆಯ ಪ್ರಯೋಗಶಾಲೆಯನ್ನಾಗಿಸಿ ಬಿಜೆಪಿ 33 ವರ್ಷಗಳಿಂದ ಸತತ ಗೆಲುವು ಸಾಧಿಸುತ್ತಿರುವುದು, ಈ ಗೆಲುವಿನಿಂದ ಜಿಲ್ಲೆಯ ಜನ ಜೀವನದ ಮೇಲಾಗಿರುವ ನಕಾರಾತ್ಮಕ ಪರಿಣಾಮಗಳು ಕುರಿತೂ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಈ ಹಿನ್ನಲೆಯಲ್ಲಿ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಒಂದಾಗಿ ದುಡಿಯಲು, ಜನರ ನಡುವೆ ಪರಿಣಾಮಕಾರಿಯಾಗಿ ಹಂತ ಹಂತದ ಚುನಾವಣಾ ಪ್ರಚಾರ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ಮತ್ತಷ್ಟು ಸಮಾನ ಮನಸ್ಕ, ನಾಗರಿಕ ಸಂಘಟನೆಗಳನ್ನು ಜೊತೆಗೂಡಿಸಿ ತಾಲೂಕು, ಹೋಬಳಿ ಮಟ್ಟಗಳಲ್ಲಿ ಚುನಾವಣಾ ಪ್ರಚಾರ, ಜಾಗೃತಿ ಅಭಿಯಾನಗಳನ್ನು ನಡೆಸಲು ಯೋಜನೆ ಸಿದ್ದಪಡಿಸಲಾಯಿತು. ಅದರ ಭಾಗವಾಗಿ ಎಪ್ರಿಲ್ 15 ರಂದು ಮಂಗಳೂರು ನಗರದಲ್ಲಿ ಸಮಾನ ಮನಸ್ಕ ಸಂಘಟನೆಗಳು, ನಾಗರಿಕ ವೇದಿಕೆಗಳು, ಎಡ ಪಕ್ಷಗಳು ಸೇರಿದಂತೆ ಬಿಜೆಪಿ ವಿರೋಧಿ ಜಾತ್ಯಾತೀತ ಶಕ್ತಿಗಳ ಪಾಲ್ಗೊಳ್ಳುವಿಕೆಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು .

ಸಿಪಿಐ ಹಿರಿಯ ನಾಯಕ, ಕಾರ್ಮಿಕ ಮುಂದಾಳು ವಿ ಕುಕ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಬಜಾಲ್ ಸಭೆಯನ್ನು ನಿರ್ವಹಿಸಿದರು.

ಸಭೆಯಲ್ಲಿ ವಕ್ಫ್ ಬೋರ್ಡ್ ನ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಾಜಿ ಮೇಯರ್ ಕೆ.ಅಶ್ರಫ್,ರೈತ ನಾಯಕರಾದ ಕೆ.ಯಾದವ ಶೆಟ್ಟಿ,ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್, ಕ್ರಷ್ಣಪ್ಪ ಸಾಲ್ಯಾನ್,ಕಾರ್ಮಿಕ ಮುಖಂಡರಾದ ಜೆ ಬಾಲಕ್ರಷ್ಣ ಶೆಟ್ಟಿ, ಬಿ ಶೇಖರ್,ಸುರೇಶ್ ಕುಮಾರ್,ಸುಕುಮಾರ್, ಪದ್ಮಾವತಿ ಶೆಟ್ಟಿ, ಮಹಿಳಾ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ,ಅಸುಂತ ಡಿಸೋಜ, ಯೋಗಿತಾ ಉಳ್ಳಾಲ,ಯುವಜನ ನಾಯಕರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಪುಷ್ಪರಾಜ್ ಬೋಳೂರು, ವಕೀಲರಾದ ದಿನೇಶ್ ಹೆಗ್ಡೆ ಉಳಿಪಾಡಿ,ಯಶವಂತ ಮರೋಳಿ,ಮನೋಜ್ ವಾಮಂಜೂರು,ಹನೀಫ್,ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಡೋಲ್ಫಿ ಡಿಸೋಜ, ಫ್ಲೇವಿ ಕ್ರಾಸ್ತಾ,ಫೆಲಿಕ್ಸ್ ಮೊಂತೆರೋ,ಕೆಥೋಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷರಾದ ಸ್ಟಾನಿ ಲೋಬೋ,ದಲಿತ ಮುಖಂಡರಾದ ಎಂ.ದೇವದಾಸ್,ರಘು ಎಕ್ಕಾರು,ಶೇಖರ್ ಚಿಲಿಂಬಿ, ಕ್ರಷ್ಣಪ್ಪ ಕೋಣಾಜೆ,ಕ್ರಷ್ಣ ತಣ್ಣೀರುಬಾವಿ,ಆದಿವಾಸಿ ನಾಯಕರಾದ ಕರಿಯ ಕೆ, ಶೇಖರ್ ವಾಮಂಜೂರು,ಕ್ರಷ್ಣ ಇನ್ನಾ,ರಶ್ಮಿ ವಾಮಂಜೂರು, ಪ್ರಗತಿಪರ ಚಿಂತಕರಾದ, ಡಾ.ಕ್ರಷ್ಣಪ್ಪ ಕೊಂಚಾಡಿ,ಬಿ.ಎನ್ ದೇವಾಡಿಗ,ಯಾಸಿನ್ ಕುದ್ರೋಳಿ,ಮುಸ್ಲಿಂ ಸಂಘಟನೆಗಳ ಮುಖಂಡರಾದ ಅಶ್ರಪ್ ಬದ್ರಿಯಾ,ಅದ್ದು ಕ್ರಷ್ಣಾಪುರ ಮುಂತಾದವರು ಹಾಜರಿದ್ದರು.


Spread the love

Exit mobile version