ಬಿಡಬ್ಲ್ಯುಎಫ್ನಿಂದ 11 ಜೋಡಿಗಳ ಸಾಮೂಹಿಕ ವಿವಾಹ ಮತ್ತು ಸಾಧಕರಿಗೆ ಸನ್ಮಾನ
ಅನಿವಾಸಿ ಭಾರತೀಯರು ಕೂಡ ನಾನಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕನ್ನಡಿಗರ ಅಹವಾಲು ಆಲಿಸಿ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಅನಿವಾಸಿ ಕನ್ನಡಿಗ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸ ಲಾಗುವುದು. ಅದಲ್ಲದೆ ‘ನಮ್ಮ ಊರು-ನಮ್ಮ ನಾಡು’ ಎಂಬ ವಿಶಿಷ್ಟ ಪರಿಕಲ್ಪನೆಯ ಯೋಜನೆ ರೂಪಿಸುವ ಉದ್ದೇಶವಿದ್ದು, ಅನಿವಾಸಿಗಳ ಸಮಸ್ಯೆ ಪರಿಹಾರ-ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದರು.
ಅವರು ಮಂಗಳೂರು ನಗರ ಹೊರವಲಯದ ಗಂಜಿಮಠದಲ್ಲಿರುವ ಝಾರಾ ಕನ್ವೆಂಶನ್ ಸೆಂಟರ್ನಲ್ಲಿ ಇಂದು ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ಹಮ್ಮಿಕೊಂಡಿದ್ದ11 ಜೋಡಿಗಳ ಸರಳ ಸಾಮೂಹಿಕ ವಿವಾಹ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಿಡಬ್ಲ್ಯುಎಫ್ ಸಂಘಟಿಸಿದ ಎಂಟನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯೆನೆಪೊಯ ವಿವಿಯ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲ ಕುಂಞಿ ಉದ್ಘಾಟಿಸಿದರು. ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ನ ನೇತೃತ್ವ ವಹಿಸಿದ್ದರು. ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಮತ್ತು ಆಶೀರ್ವಚನ ನೀಡಿದರು. ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮಾದುಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರ್ಥಿಕ ಸಂಕಷ್ಟದಿಂದಾಗಿ ವಿವಾಹ ಕಾರ್ಯಕ್ರಮಗಳನ್ನು ಉದ್ದೇಶಿತ ರೀತಿಯಲ್ಲಿ ನಡೆಸಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಿಡಬ್ಲುಎಫ್ ಮಾಡಿರುವ ಈ ಸೇವೆಯು ಶ್ಲಾಘನೀಯ ಎಂದರು.
ಸಾಧಕರಿಗೆ ಸನ್ಮಾನ:
ಮಂಗಳೂರಿನ ಭಾರತ್ ಇನ್ಫ್ರಾಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ಮುಸ್ತಫಾ ಎಸ್.ಎಂ. ಮತ್ತು ಸೌದಿ ಅರೇಬಿಯಾದ ಅಲ್ ಜುಬೈಲ್ನಲ್ಲಿರುವ ಅಲ್ ಮುಝೈನ್ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಝಕರಿಯಾ ಜೋಕಟ್ಟೆ ಅವರಿಗೆ ಜೀವಮಾನ ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು. ರಾಜ್ಯ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ ಮತ್ತು ಮೀಫ್ (ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ)ದ ಪರವಾಗಿ ಒಕ್ಕೂಟದ ಉಪಾಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ ಅವರನ್ನು ಗೌರವಿಸಲಾಯಿತು. ಕೆಎಸ್ ಅಬೂಬಕರ್ ಕಿರಾಅತ್ ಪಠಿಸಿದರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಬಶೀರ್ ಬಜ್ಪೆ ಧನ್ಯವಾದವಿತ್ತರು.
ಕೃಷ್ಣಾಪುರ ಖಾಝಿ ಇ.ಕೆ. ಇಬ್ರಾಹಿಂ ಮುಸ್ಲಿಯಾರ್, ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ನಂಡೆ ಪೆಂಙಲ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್, ಅಲ್ ವಫಾ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ದ.ಕ. ಮತ್ತು ಉಡುಪಿ ಜಿಲ್ಲಾ ಜಂಇಯ್ಯುತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಸಲೀಂ, ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಬಿಸಿಸಿಐ ಆಡಳಿತ ಸಮಿತಿಯ ಸದಸ್ಯ ಆಸಿಫ್ ಸೂಫಿಖಾನ, ಸಮಾಜ ಸೇವಕ ಅಬ್ಬಾಸ್ ಉಚ್ಚಿಲ್, ಕೆಕೆಎಂಎ ಕರ್ನಾಟಕ ಅಧ್ಯಕ್ಷ ಎಸ್.ಎಂ. ಫಾರೂಕ್, ಬಿಡಬ್ಲುಎಫ್ ಸಂಯೋಜಕ ಮುಹಮ್ಮದ್ ರಫೀಕ್ ಕೃಷ್ಣಾಪುರ, ಕಾರ್ಯಕಾರಿ ಸಮಿತಿ ಸದಸ್ಯ ನಝೀರ್ ಉಬಾರ್, ಸದಸ್ಯ ಮುಹಮ್ಮದ್ ಸಿದ್ದೀಕ್ ಕಾಪು ಭಾಗವಹಿಸಿದ್ದರು.