Home Mangalorean News Kannada News ಬಿಸಿಗಾಳಿ: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಉಡುಪಿ ಜಿಲ್ಲಾಡಳಿತದಿಂದ ಸಲಹೆ, ಸೂಚನೆ

ಬಿಸಿಗಾಳಿ: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಉಡುಪಿ ಜಿಲ್ಲಾಡಳಿತದಿಂದ ಸಲಹೆ, ಸೂಚನೆ

Spread the love

ಬಿಸಿಗಾಳಿ: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಉಡುಪಿ ಜಿಲ್ಲಾಡಳಿತದಿಂದ ಸಲಹೆ, ಸೂಚನೆ

ಉಡುಪಿ: ಅತಿಯಾದ ಉಷ್ಣತೆ ಮತ್ತು ಬಿಸಿಗಾಳಿಯಿಂದ ರಕ್ಷಣೆ ಪಡೆಯಲು, ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಡೆಂಗ್ಯೂ ಜ್ವರದ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾಡಳಿತವು ಈ ಕೆಳಗಿನಂತೆ ಸಲಹೆ ಸೂಚನೆಗಳನ್ನು ನೀಡಿರುತ್ತದೆ.

ಬಾಯಾರಿಕೆ ಇಲ್ಲದಿದ್ದರೂ ಸಹಾ ಹೆಚ್ಚು ನೀರನ್ನು ಆಗಾಗ್ಗೆ ಕುಡಿಯಬೇಕು. ಮೌಖಿಕ ಪುನರ್ಜಲೀಕರಣ ದ್ರಾವಣ (ಓ.ಆರ್.ಎಸ್), ಎಳನೀರು ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಶರಬತ್ತು, ಹಣ್ಣಿನ ರಸಗಳು, ಮಜ್ಜಿಗೆ/ಲಸ್ಸಿಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ ಸೇವಿಸಬೇಕು ಮತ್ತು ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಸೂಕ್ತ.

ತಿಳಿಬಣ್ಣದ ಸಡಿಲವಾದ ಹತ್ತಿ ಬಟ್ಟೆಗಳನ್ನು ಹಾಗೂ ಗಾಳಿಯಾಡುವ ಪಾದರಕ್ಷೆಗಳನ್ನು ಧರಿಸುವುದು ಈ ಸಂದರ್ಭದಲ್ಲಿ ಉತ್ತಮ. ಬಿಸಿಲಿನಲ್ಲಿ ಹೊರಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್, ತಂಪು ಕನ್ನಡಕಗಳನ್ನು ಬಳಸಬೇಕು.

ಸಾಧ್ಯವಾದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರಕ್ಕೆ ಸೀಮಿತವಿರುವಂತೆ ಹೊರಾಂಗಣ ಚಟುವಟಿಕೆಗಳನ್ನು ಯೋಜಿಸಿಕೊಳ್ಳುವುದು ಸೂಕ್ತವಾಗಿದ್ದು, ಮಧ್ಯಾಹ್ನ 12 ಗಂಟೆಯಿAದ 4 ಗಂಟೆಯವರೆಗೆ ಬಿಸಿಲಿನಲ್ಲಿ ಓಡಾಡುವುದು ಆದಷ್ಟು ತಪ್ಪಿಸಬೇಕು. ಸಾಧ್ಯವಾದಷ್ಟು ಗಾಳಿ ಬೀಸುವ, ತಣ್ಣಗಿರುವ ಹಾಗೂ ನೆರಳಿನ ಪ್ರದೇಶದಲ್ಲಿರಬೇಕು. ಮನೆಯಲ್ಲಿ ಕಿಟಕಿ ಪರದೆಗಳು, ಫ್ಯಾನ್, ಕೂಲರ್ ಹಾಗೂ ಎ.ಸಿ.ಯನ್ನು ಬಳಸಬೇಕು.

ಅತಿಯಾದ ಉಷ್ಣತೆಯಿಂದ ನವಜಾತ ಶಿಶುಗಳು ಮತ್ತು ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು, ಹೃದ್ರೋಗ ಹಾಗೂ ರಕ್ತದ ಒತ್ತಡಗಳಂತಹ ಧೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿರುವವರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಅಪಾಯವಿರುವ ಹಿನ್ನಲೆ, ಇವರ ಬಗ್ಗೆ ಹೆಚ್ಚಿನ ಗಮನಹರಿಸಬೇಕು.

ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಈ ಅವಧಿಯಲ್ಲಿ ಚಿಕ್ಕಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಬಾರದು. ಹಗಲಿನಲ್ಲಿ 11 ಗಂಟೆಯಿAದ 4 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಬೇಕು. ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು. ಮದ್ಯಪಾನ, ಕಾಫಿ, ಟೀ, ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಬೇಕು. ಮಧ್ಯಾಹ್ನದ ಸಂದರ್ಭದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು.

ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಬೇಕು. ಬಾಯಿ ಒಣಗುವುದು, ವಿಪರೀತ ಸುಸ್ತು, ತಲೆ ಸುತ್ತು ಬರುವುದು, ಪ್ರಜ್ಞೆ ತಪ್ಪುವುದು, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತ, ವಾಕರಿಕೆ ಅಥವಾ ವಾಂತಿಯಾಗುವುದು ಇತ್ಯಾದಿ ಲಕ್ಷಣಗಳಿದ್ದಲ್ಲಿ ಕೂಡಲೇ ಹತ್ತಿರದ ಸರಕಾರಿ ಅಥವಾ ಖಾಸಗಿ ಆರೋಗ್ಯ ಸಂಸ್ಥೆಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಇದ್ದಲ್ಲಿ 108 ಕ್ಕೆ ಕರೆ ಮಾಡಬೇಕು ಹಾಗೂ ಅಗತ್ಯ ಮಾಹಿತಿಗಳಿಗಾಗಿ 102 ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.

ಡೆಂಗ್ಯೂ ಜ್ವರ ನಿಯಂತ್ರಣ: ಪ್ರಸ್ತುತ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರವು ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ಜ್ವರವಿರಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಡೆಂಗ್ಯೂ ಖಾಯಿಲೆಯನ್ನು ಹರಡುವ ಈಡಿಸ್ ಸೊಳ್ಳೆಯನ್ನು ನಿಯಂತ್ರಿಸಲು ಮನೆಯ ಒಳಾಂಗಣ ಮತ್ತು ಹೊರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಶೇಖರಿಸಿಡುವ ಪರಿಕರಗಳಾದ ತೊಟ್ಟಿ, ಡ್ರಂ, ಬ್ಯಾರೆಲ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿ ಮುಚ್ಚಿಡಬೇಕು. ಘನ ತ್ಯಾಜ್ಯಗಳಾದ ಟೈರು, ಟ್ಯೂಬ್ ತೆಂಗು ಮತ್ತು ಎಳನೀರಿನ ಚಿಪ್ಪುಗಳು, ಅನುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಫ್ರೀಡ್ಸ್, ಕೂಲರ್, ಹೂವಿನಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವ ಮೂಲಕ ಸಾರ್ವಜನಿಕರು ಡೆಂಗ್ಯೂ ಕಾಯಿಲೆ ಬಾರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version