ಬಿಸಿ ಗಾಳಿಯಿಂದ ರಕ್ಷಿಸಿಕೊಳ್ಳಲು ಉಡುಪಿ ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಸಲಹೆ
ಉಡುಪಿ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೇ 7 ರ ವರೆಗೆ ಹೀಟ್ ವೇವ್ (ಬಿಸಿಗಾಳಿ) ಮುಂದುವರೆಯಲಿದ್ದು, ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆ, ಹೀಟ್ ವೇವ್ (ಶಾಖದ ಹೊಡೆತ) ಸ್ಟ್ರೋಕ್ ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗಿನಂತೆ ಸಲಹೆಗಳನ್ನು ನೀಡಿದೆ.
- ಗರಿಷ್ಠ ತಾಪಮಾನದ ಅವಧಿಯಲ್ಲಿ ಮಧ್ಯಾಹ್ನ 12 ರಿಂದ 3 ರ ಅವಧಿಯಲ್ಲಿ ಬಿಸಿಲಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕು.
- ಶ್ರಮದಾಯಕ ಚಟುವಟಿಕೆಗಳಲ್ಲಿ ತೊಡಗಬಾರದು. ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯಬೇಕು. ಹಗುರ ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆಗಳನ್ನು ಧರಿಸಬೇಕು. ಸಾರ್ವಜನಿಕರು ಬಿಸಿಲು ದಿನಗಳಲ್ಲಿ ರಕ್ಷಣೆಗಾಗಿ ಕನ್ನಡಕ, ಕೊಡೆ, ಬೂಟು / ಚಪ್ಪಲಿಗಳನ್ನು ಬಳಸಬೇಕು.
- ಪ್ರಯಾಣದ ಸಂದರ್ಭದಲ್ಲಿ ನೀರಿನ್ನು ಜೊತೆಗೆ ಕೊಂಡೊಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ನಂತಹ ತಂಪು ಪಾನೀಯಗಳನ್ನು ಸೇವಿಸಬಾರದು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು. ಹಿರಿಯ ನಾಗರಿಕರು ಹಾಗೂ ಮಕ್ಕಳು ಹೆಚ್ಚು ನೀರು ಸೇವಿಸಬೇಕು.
- ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಹಾಗೂ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನ್ನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿಯೇ ತಯಾರಿಸಿದ ಪಾನೀಯ ಹಾಗೂ ಓ.ಆರ್.ಎಸ್ ಅನ್ನು ಬಳಸಬೇಕು. ಸಾಕು ಪ್ರಾಣಿಗಳನ್ನು ನೆರಳಿನಲ್ಲಿರಿಸಿ, ಅವುಗಳಿಗೆ ಸಾಕಷ್ಟು ಕುಡಿಯಲು ನೀರು ನೀಡಬೇಕು.
- ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್ಗಳು ಅಥವಾ ಸನ್ಶೆಡ್ಗಳನ್ನು ಬಳಸಬೇಕು ಹಾಗೂ ಆಗಿಂದಾಗ್ಗೆ ತಣ್ಣೀರು ಸ್ನಾನ ಮಾಡಬೇಕು. ಮನೆಯಿಂದ ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ, ಟೋಪಿ ಅಥವಾ ಕ್ಯಾಪ್, ಹೆಡ್ಕವರ್, ಹ್ಯಾಂಡ್ಟವೆಲ್, ಹ್ಯಾಂಡ್ಪಾö್ಯನ್, ಎಲೆಕ್ಟ್ರೋಲೈಟ್, ಗ್ಲೋಕೋಸ್, ಓ.ಆರ್.ಎಸ್ ಅನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್ ಅನ್ನು ಒಯ್ಯುವಂತೆ ನಾಗರಿಕರನ್ನು ಪ್ರೋತ್ಸಾಹಿಸಬೇಕು.
- ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಎಡೆರ್ನಾ (ಊತ) ಮತ್ತು ಮೂರ್ಛೆ ಹೋಗುವುದು, ಆಯಾಸ, ದೌರ್ಬಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕಲಿಕೆ, ವಾಂತಿ, ಸ್ನಾಯು ಸೆಳೆತ, ಬೆವರುವುದು ದೇಹದ ಉಷ್ಣತೆ ಹೆಚ್ಚಾಗುವುದು, ಉಸಿರಾಟದಲ್ಲಿ ವ್ಯತ್ಯಯ ಹಾಗೂ ಪ್ರಜ್ಞೆ ತಪ್ಪುವುದು ಸಂಭವಿಸಲಿದ್ದು, ಈ ಸಂದರ್ಭದಲ್ಲಿ ಅತೀ ಹೆಚ್ಚು ತಾಪಮಾನಕ್ಕೆ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆಯಾದ ಬಟ್ಟೆಯಿಂದ ಮೈ ಒರೆಸಬೇಕು ಅಥವಾ ತಂಪಾದ ಒದ್ದೆ ಬಟ್ಟೆಯನ್ನು ಆ ವ್ಯಕ್ತಿಯ ಮೇಲೆ ಹಾಕಬೇಕು. ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕಬೇಕು. ವ್ಯಕ್ತಿಯ ಬಟ್ಟೆಯನ್ನು ಸಡಿಲಗೊಳಿಸಿ, ತಂಪಾದ ಗಾಳಿಯ ವ್ಯವಸ್ಥೆಯನ್ನು ಮಾಡಬೇಕು. ವ್ಯಕ್ತಿಯು ಪ್ರಜ್ಞೆ ಹೊಂದಿದ್ದರೆ ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಓ.ಆರ್.ಎಸ್, ನಿಂಬೆ ಪಾನಕ ನೀಡಬೇಕು. ಹೀಟ್ ವೇವ್ ಸ್ಟೋಕ್ ಗೆ ಒಳಗಾದ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.