ಬಿ.ಆರ್.ಎಸ್ ಸಂಸ್ಥೆ ನಿಯಮಬದ್ಧವಾಗಿ 400 ಬೆಡ್ ಆಸ್ಪತ್ರೆಗೆ ಪರವಾನಿಗೆ ಕೇಳಿದರೆ ಒಂದೇ ದಿನದಲ್ಲಿ ಅನುಮತಿ ನೀಡಲು ಸಿದ್ದ – ರಘುಪತಿ ಭಟ್
ಉಡುಪಿ: ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಪೂರಕವಾದ 400 ಬೆಡ್ಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಉದ್ಯಮಿ ಬಿ ಆರ್ ಶೆಟ್ಟಿ ಯವರು ಜಿಲ್ಲಾಡಳಿತ, ನಗರಸಭೆಯಿಂದ ನಿಯಮದಡಿಯಲ್ಲಿ ಕಾನೂನು ಪ್ರಕಾರದಲ್ಲಿ ಅನುಮತಿ ಕೇಳಿದ್ದಲ್ಲಿ ಒಂದೇ ದಿನದಲ್ಲಿ ನೀಡಲು ನಾವು ಸಿದ್ದ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಅವರು ಗುರುವಾರ ಸಂಜೆ ಅವರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪಕ್ಕದಲ್ಲಿ ಜನರ ವಿರೋಧದ ನಡುವೆಯೂ ಉದ್ಯಮಿ ಬಿ ಆರ್ ಶೆಟ್ಟಿಯವರ ನೇತೃತ್ವದ ಬಿಆರ್ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ವತಿಯಿಂದ 200 ಹಾಸಿಗೆಗಳ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿದ್ದು, ಏಪ್ರಿಲ್ 4ರಂದು ರಾಜ್ಯ ಸರಕಾರಕ್ಕೆ ಬಿಆರ್ ಎಸ್ ಸಂಸ್ಥೆಯ ವತಿಯಿಂದ ಪತ್ರ ಬರೆದು ಸರಕಾರ ಇನ್ನೂ ಕೂಡ ಯಾವುದೇ ರೀತಿಯ ಶಾಶ್ವತ ಒಪ್ಪಂದ ಮಾಡಿಕೊಟ್ಟಿಲ್ಲ ಅಲ್ಲದೆ ಮಕ್ಕಳಎ ಆಸ್ಪತ್ರೆಯ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಪೂರಕವಾದ 400 ಬೆಡ್ಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿಯನ್ನೂ ನೀಡಿಲ್ಲ ಎಂಬ ಕಾರಣಕ್ಕೆ ಏಪ್ರಿಲ್ 30ರಿಂದ ಆಸ್ಪತ್ರೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಪತ್ರ ಬರೆದಿದೆ. ಆದರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಬುಧವಾರ ಆಸ್ಪತ್ರೆಯ ಆಡಳಿತ ಮಂಡಳಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದು ಈ ಕುರಿತಂತೆ ಜನತೆಗೆ ಸತ್ಯಾಂಶ ತಿಳಿಸುವುದು ನನ್ನ ಜವಾಬ್ದಾರಿ ಎಂದರು
ಏ.4ಕ್ಕೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಬಿಆರ್ಎಸ್ ಸಂಸ್ಥೆ ಸ್ಪಷ್ಟವಾಗಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಬಗ್ಗೆ ಎಂಬುದಾಗಿ ಉಲ್ಲೇಖಿಸಿದೆ. ಎಂಒಯು ಆಗಿ ಮೂರು ವರ್ಷ ಕಳೆದರೂ ಬಿಆರ್ಎಸ್ ಸಂಸ್ಥೆಗೆ ರಾಜ್ಯ ಸರ್ಕಾರದೊಂದಿಗೆ ನಿರ್ಧಾರಕ ಒಪ್ಪಂದಕ್ಕೆ (ಡೆಫಿನೆಟಿವ್ ಅಗ್ರೀಮೆಂಟ್) ಸಹಿ ಹಾಕಲು ಸಾಧ್ಯವಾಗಿಲ್ಲ. ಇದಕ್ಕೆ ಜಿಲ್ಲಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳು ಕಾರಣವಲ್ಲ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೆಫರಲ್ ಆಗಿ ಬರುವ ರೋಗಿಗಳಿಗೆ ಹೊಸ ಸೂಪರ್ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂಬ ಸರ್ಕಾರದ ಶರತ್ತಿಗೆ ಸಂಸ್ಥೆ ಒಪ್ಪಿಗೆ ಸೂಚಿಸದಿರುವುದರಿಂದ ಒಪ್ಪಂದ ನನೆಗುದಿಗೆ ಬಿದ್ದಿದೆ ಎಂದರು..
ಇಲ್ಲಿ ಸರಕಾರದ ಯಾವುದೇ ಅಧಿಕಾರಿ, ಸಿಬಂದಿ ಇಲ್ಲದಿರುವುದರಿಂದ ಜನಪ್ರತಿನಿಧಿಗಳಿಗೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಹಾಗಾಗಿ ಇಲ್ಲಿರುವ ಖಾಸಗಿಯ ಯುನಿಟ್ ಜತೆಗೆ 1 ಸರಕಾರದ ಯುನಿಟ್ ಆರಂಭಿಸಬೇಕು. ಇಲ್ಲಿ ಹೆಸರಿಗೆ ಮಾತ್ರ ಸರಕಾರಿ ಎಂಬುದಾಗಿ ಇದೆ; ನಿಯಂತ್ರಣ ಖಾಸಗಿಯವರದ್ದೇ ಆಗಿದೆ. ಇಲ್ಲಿ ಒಂದು ಸರಕಾರಿ ಯುನಿಟ್ ಕೂಡ ಆರಂಭಿಸುವಂತೆ ವಿಧಾನಸಭೆಯಲ್ಲಿ ಒತ್ತಾಯಿಸಲಾಗಿತ್ತು. 200 ಬೆಡ್ಗಳ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಹಿಂದೆ ಇದ್ದಂತೆ ಸರ್ಕಾರಿ ವೈದ್ಯರು, ದಾದಿಯರನ್ನು ಒಳಗೊಂಡ 70 ಬೆಡ್ಗಳ ಯುನಿಟ್ ರಚಿಸಬೇಕು. ಸರ್ಕಾರಿ ಹಿರಿಯ ಸ್ತ್ರೀರೋಗ ತಜ್ಞರು ವೈದ್ಯಕೀಯ ಅಧೀಕ್ಷಕರಾಗಿರಬೇಕು. ಜಿಲ್ಲಾ ಮೇಲುಸ್ತವಾರಿ ಸಮಿತಿಯಲ್ಲಿ ಜನಪ್ರತಿನಿಧಿಯೊಬ್ಬರನ್ನು ಸದಸ್ಯರಾಗಿ ಸೇರಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ 3 ನೆಲಅಂತಸ್ತಿನ ಕಟ್ಟಡ ನಿರ್ಮಾಣ ಕಾನೂನುಬಾಹಿರವಾಗಿದ್ದು, ಝಡ್ಆರ್ ನಿಯಮಪ್ರಕಾರ ಕೇವಲ 2 ನೆಲಅಂತಸ್ತಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿಲ್ಲ. ಬಿಆರ್ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿದರೆ 1 ದಿನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು.
ಈ ಸಂಸ್ಥೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರದ ಜೊತೆ ಅಂತಿಮ ಒಪ್ಪಂದ ಆಗುವ ಮೊದಲೇ ರಾತ್ರೋರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಹಳೆ ಆಸ್ಪತ್ರೆ ಕಟ್ಟಡವನ್ನು ಕೆಡವಿ ಮೂರು ಅಂತಸ್ತುಗಳಷ್ಟು ಆಳಕ್ಕೆ ಗುಂಡಿ ತೋಡಿದ್ದಾರೆ. ಇದು ಜವಾಬ್ದಾರಿಯುತ ನಡೆಯಲ್ಲ. 150 ಕೋಟಿ ರೂ. ಬೆಳೆಬಾಳುವ ಸರ್ಕಾರಿ ಆಸ್ತಿಯನ್ನು ಸೇವೆಯ ಬದಲು ಉದ್ಯಮಕ್ಕೆ ಬಳಸಿಕೊಳ್ಳಲು ಜನಪ್ರತಿನಿಧಿಗಳು ಅವಕಾಶ ನೀಡುವುದಿಲ್ಲ ಎಂದರು.
ಬಿ ಆರ್ ಶೆಟ್ಟಿಯವರು 200 ಹಾಸಿಗೆಗಳ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣ ಅತ್ಯಾಧುನಿಕವಾಗಿ ಸೆಂಟ್ರಲ್ ಎಸಿ ವ್ಯವಸ್ಥೆಯಲ್ಲಿ ನಿರ್ಮಿಸಿದ್ದು ಅದನ್ನು ಈಗ ಸರಕಾರಕ್ಕೆ ವಾಪಾಸು ಮಾಡುವುದಾಗಿ ಹೇಳಿದರೆ ಅದರ ನಿರ್ವಹಣೆಯನ್ನು ಸರಕಾರಿ ವ್ಯವಸ್ಥೆಯಲ್ಲಿ ನಿರ್ವಹಿಸುವುದು ಕಷ್ಟದ ಮಾತಾಗಿದೆ. ಈ ವಿಚಾರದಲ್ಲಿ ಬೆಂಬಲ ನೀಡು ತ್ತೇವೆಯೇ ಹೊರತು ಇಡೀ ಆಸ್ಪತ್ರೆ ಬಿಟ್ಟುಕೊಟ್ಟರೆ ಸರಕಾರಕ್ಕೆ ನಡೆಸಲು ಸಾಧ್ಯ ಇಲ್ಲ ಎಂದು ತಿಳಿಸಿದೆ ಎಂದು ಅವರು ಹೇಳಿದರು.
ಅದರಂತೆ ಸರಕಾರದಿಂದ ಎನ್ಆರ್ಎಚ್ಎಂನಲ್ಲಿ ಆರು ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿರುವ ನಾಲ್ಕು ತಜ್ಞ ವೈದ್ಯರ ಪೈಕಿ ಒಬ್ಬರನ್ನು ಇಲ್ಲಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಆರೋಗ್ಯ ಸಚಿವರು, ಆರೋಗ್ಯ ಪ್ರಧಾನ ಕಾರ್ಯದರ್ಶಿ ಜೊತೆ ಚರ್ಚೆ ಮಾಡಲಾಗಿದ್ದು, ಇಲ್ಲಿನ 200 ಬೆಡ್ಗೆ ಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ತಿಳಿಸಲಾಗಿದೆ. ಆಗ ಮಾತ್ರ ಈ ಆಸ್ಪತ್ರೆಯನ್ನು ನಡೆಸಲು ಸಾಧ್ಯವಾಗಬಹುದು ಎಂದು ಅವರು ತಿಳಿಸಿದರು.
ಪ್ರತಿ ತಿಂಗಳು ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬರುತ್ತಿದ್ದು ಆ ಆಸ್ಪತ್ರೆಯನ್ನು ಈ ಹಂತದಲ್ಲಿ ನಾನ್ ಎಸಿ ಆಸ್ಪತ್ರೆಯಾಗಿ ಪರಿವರ್ತಿಸುವುದು ಕೂಡ ಸಾಧ್ಯವಾಗುತ್ತಿಲ್ಲ ಆದ್ದರಿಂದ ಒಪ್ಪಂದದ ಪ್ರಕಾರ ಅವರೇ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ಹಳೆ ಕಟ್ಟಡವನ್ನು ಯಾವುದೇ ಮಾಹಿತಿ ಕೂಡ ನೀಡದೆ ಕೆಡವಿ ಹಾಕಿದ್ದು ಮತ್ತೆ ಅದೇ ಜಾಗದಲ್ಲಿ ಕಟ್ಟಿಕೊಡಲಿ ಅಲ್ಲಿ ಸರಕಾರಿ ಆಸ್ಪತ್ರೆಯನ್ನು ನಾವು ನಡೆಸಲು ಸಿದ್ದರಿದ್ದೇವೆ ಎಂದರು.
ಬಿ ಆರ್ ಶೆಟ್ಟಿಯವರು ಸರಕಾರಕ್ಕೆ ಬರೆದ ಪತ್ರದಿಂದ ಒಂದು ವಿಷಯ ಸ್ಪಷ್ಟವಾಗಿದ್ದು ಅವರು ಈ ಊರಿನವರಾಗಿ ಯಾವುದೇ ರೀತಿಯ ಸಾಮಾಜಿಕ ಕಳಕಳಿಯನ್ನು ಹೊಂದಿ ಈ ಸರಕಾರಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿಲ್ಲ. ಬದಲಾಗಿ ಬಡವರನ್ನು ತೋರಿಸಿ ತನ್ನ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಡೆಸುವ ಇಚ್ಚೆ ಹೊಂದಿದ್ದಾರೆ. ಈ ಮೂಲಕ ಇವರು ಈ ಆಸ್ಪತ್ರೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪಡೆದುಕೊಂಡಿದ್ದಾರೆಯೇ ಹೊರತು ಸೇವೆಗಾಗಿ ಅಲ್ಲ ಎಂಬುದು ಈಗ ಸಾಬೀತಾಗಿದೆ ಎಂದರು.