ಬಿ.ಎ/ಬಿ.ಎಸ್ಸಿ ಯೊಂದಿಗೆ ಬಿಎಡ್ ಕೋರ್ಸು: ರಥಬೀದಿಯ ಕಾಲೇಜು ಆಯ್ಕೆ
ಮಂಗಳೂರು: ಮಂಗಳೂರಿನ ರಥಬೀದಿಯ ಡಾ.ಪಿ.ದಯಾನಂದ ಪೈ. ಪಿ. ಸತೀಶ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2020-21 ರ ಸಾಲಿನಿಂದ 4 ವರ್ಷಗಳ 2 ಯುನಿಟ್‍ಗಳ 100 ವಿದ್ಯಾರ್ಥಿ ಸಂಖ್ಯೆಯೊಂದಿಗೆ ಇಂಟಗ್ರೇಟೆಡ್ ಬಿ.ಎ. ಬಿಎಡ್ ಹಾಗೂ ಬಿ.ಎಸ್ಸಿ. ಬಿ.ಎಡ್ ಕೋರ್ಸುಗಳನ್ನು ಆರಂಭಿಸಲು ಆಯ್ಕೆಯಾಗಿದೆ.
ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುತ್ತದೆ ಎಂದು ಮಂಗಳೂರು ದಕ್ಷಿಣ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ತಿಳಿಸಿರುತ್ತಾರೆ. ಸದ್ರಿ ಕೋರ್ಸುಗಳನ್ನು ಆರಂಭಿಸಲು ಈಗಾಗಲೇ ಮೂಲಭೂತ ಸೌಕರ್ಯಗಳ ಕಾಮಗಾರಿ ಆರಂಭವಾಗಿರುತ್ತದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 3 ಸರ್ಕಾರಿ ಕಾಲೇಜುಗಳು ಈ ಕೋರ್ಸಿಗೆ ಆಯ್ಕೆ ಹೊಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ರಿ ಏಕೈಕ ಕಾಲೇಜಿನಲ್ಲಿ ಮಾತ್ರ ಈ ಕೋರ್ಸನ್ನು ಆರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಇದರಿಂದ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷದ ಉಳಿತಾಯದ ಜೊತೆಗೆ ಕಾಲೇಜಿನಿಂದ ನೇರವಾಗಿ ಉದ್ಯೋಗ ರಂಗಕ್ಕೆ ಕಾಲಿಡಲು ಎಲ್ಲಾ ಅನುಕೂಲಗಳನ್ನು ಒದಗಿಸಲಾಗುವುದೆಂದು ತಿಳಿಸಿರುತ್ತಾರೆ. ಸದ್ರಿ ಕೋರ್ಸನ್ನು ಆರಂಭಿಸಲು ಕಾಲೇಜನ್ನು ಆಯ್ಕೆ ಮಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಅಶ್ವಥ್ ನಾರಾಯಣ್ ಅವರಿಗೆ ಹಾಗೂ ಸದ್ರಿ ಕೋರ್ಸನ್ನು ಆರಂಭಿಸಲು ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಮಂಜೂರಾತಿಗೆ ನಿರ್ದೇಶನ ಕೋರಿ ಪತ್ರ ಬರೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾಸಕರು ಕೃತಜ್ಞತೆ ತಿಳಿಸಿದ್ದಾರೆ.