ಬಿ.ಕೆ.ಹರಿಪ್ರಸಾದ್ ಕುರಿತು ತುಚ್ಛವಾಗಿ ಮಾತನಾಡಿರುವ ಶಾಸಕ ಹರೀಶ್ ಪೂಂಜಾ ಕ್ಷಮೆ ಯಾಚಿಸಲಿ: ಚಿತ್ತರಂಜನ್‌ ಶೆಟ್ಟಿ ಆಗ್ರಹ

Spread the love

ಬಿ.ಕೆ.ಹರಿಪ್ರಸಾದ್ ಕುರಿತು ತುಚ್ಛವಾಗಿ ಮಾತನಾಡಿರುವ ಶಾಸಕ ಹರೀಶ್ ಪೂಂಜಾ ಕ್ಷಮೆ ಯಾಚಿಸಲಿ: ಚಿತ್ತರಂಜನ್‌ ಶೆಟ್ಟಿ ಆಗ್ರಹ

ಮಂಗಳೂರು: ಜಾತಿ ಗಣತಿಯನ್ನು ಜಾರಿ ಮಾಡಬೇಕೆಂದು ಪ್ರಸ್ತಾಪವನ್ನಿಟ್ಟ ಸಚ್ಚಾರಿತ್ರ್ಯ ರಾಜಕಾರಣಿ, ಹಿಂದುಳಿದ ವರ್ಗದ ನಾಯಕ ಬಿ.ಕೆ. ಹರಿಪ್ರಸಾದ್ ಬಗ್ಗೆ ತುಚ್ಚವಾಗಿ ಮಾತನಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಹರಿಪ್ರಸಾದ್ ಹಾಗೂ ಅವರ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಹರೀಶ್ ಪೂಂಜಾ ಅವರು ಬಿ.ಕೆ. ಹರಿಪ್ರಸಾದ್ ಅವರ ಡಿಎನ್ಎ ಪರೀಕ್ಷೆ ಮಾಡಬೇಕೆಂದು ಕೀಳುಮಟ್ಟದ ರಾಜಕೀಯ ಹೇಳಿಕೆ ನೀಡಿರುವುದು ಖಂಡನೀಯ ಎಂದರು

ಹರಿಪ್ರಸಾದ್ ರ ಡಿಎನ್ಎ ಪರಿಶೀಲನೆ ಮಾಡಿದರೆ ಸಿಗುವುದು ಈ ದೇಶದ ಮೂಲ ನಿವಾಸಿಯ ಗುರುತು. ಪದೇ ಪದೇ ನೀವು ಡಿಎನ್ಎ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದರೆ ನಿಮಗೆ ನಿಮ್ಮ ಡಿಎನ್ಎ ಬಗ್ಗೆ ಸಂಶಯ ಇರುಬಹುದು ಮತ್ತು ಅದನ್ನು ಪರಿಶೀಲನೆ ಮಾಡಿದರೆ ಮಹಾತ್ಮ ಗಾಂಧೀಜಿ ಹತ್ಯೆ ಮಾಡಿದ ದೇಶದ್ರೋಹಿ ಡಿಎನ್ಎ ಜೊತೆಗೆ ಹೊಂದಾಣಿಕೆಯಾಗ ಬಹುದು. ಡಿಎನ್‌ಎ ಪರಿಶೀಲನೆಗೆ ಬರುವವರು ಇದ್ದರೆ ಈ ದೇಶದ ಮೂಲ ನಿವಾಸಿಗಳು ದೇಶಕ್ಕೆ ಪ್ರಾಣ ತ್ಯಾಗ ಮಾಡಿರುವ ಡಿಎನ್‌ಎ ಹೊಂದಿರುವ ನಾವು ಪರಿಶೀಲನೆಗೆ ಸಿದ್ದರಿದ್ದೇವೆ ಎಂದು ಸವಾಲೆಸೆದರು. ಹರಿಪ್ರಸಾದ್ ರನ್ನು ಹಿಂದೂ ವಿರೋಧಿ ರೀತಿ ಬಿಂಬಿಸಲಾಗುತ್ತಿದೆ. ಪೂಂಜಾ ಪದೇ ಪದೇ ಈ ರೀತಿಯ ಹೇಳಿಕೆ ನೀಡುತ್ತಿದ್ದು, ಇವರ ಚಾಳಿ ಮುಂದುವರಿಸಿದರೆ ಅದಕ್ಕೆ ತಕ್ಕ ಬೆಲೆ ತೆರಲಿದ್ದಾರೆ ಎಂದರು.

ಪೇಜಾವರ ಶ್ರೀ ಹೇಳಿಕೆ ಬಗ್ಗೆ ಬಿ.ಕೆ. ಹರಿಪ್ರಸಾದ್ ನೀಡಿದ ಪ್ರತಿಕ್ರಿಯೆಯಲ್ಲಿ ಯಾವುದೇ ಲೋಪವಿಲ್ಲ. ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ಪೂರ್ವಾಗ್ರಹ ಪೀಡಿತ ಹೇಳಿಕೆ ಪೇಜಾವರ ಶ್ರೀ ಮಾತಿನಲ್ಲಿತ್ತು. ದಲಿತ ಕೇರಿಗೆ ಹೋಗಿ ‘ನಾವೆಲ್ಲ ಒಂದು’ ಎಂದು ಹೇಳಿಕೆ ನೀಡುವ ಪೇಜಾವರ ಶ್ರೀ ಹಿಂದೂಗಳಿಗೆ ಸಾಮಾಜಿಕ ನ್ಯಾಯ ನೀಡುವ ಜಾತಿ ಗಣತಿ ವ್ಯವಸ್ಥೆಯನ್ನು ವಿರೋಧಿಸುವುದು ಯಾತಕ್ಕಾಗಿ? ಉಡುಪಿಯ ಉಳಿದ ಮಠಾಧೀಶರು ರಾಜಕೀಯರಹಿತವಾಗಿ ಇದ್ದರೆ ಪೇಜಾವರ ಶ್ರೀ ಯಾವತ್ತೂ ಒಂದು ಪಕ್ಷದ ಪರವಾಗಿ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರಜ್ ಚಂದ್ರಪಾಲ್, ಪ್ರಧಾನ ಕಾರ್ಯದರ್ಶಿ ಟಿ.ಡಿ.ವಿಕಾಸ್ ಶೆಟ್ಟಿ, ಯೋಗೀಶ್ ಕುಮಾರ್, ಮುಖಂಡರಾದ ನಿತ್ಯಾನಂದ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಮಂಜುಳಾ ನಾಯಕ್ ಉಪಸ್ಥಿತರಿದ್ದರು.


Spread the love