ಬಿ.ಜೆ.ಪಿ ಪಕ್ಷದ ಜನಪ್ರತಿನಿಧಿಗಳ ಹಸ್ತಕ್ಷೇಪ- ಜನರ ಆರೋಗ್ಯ ಕಾಪಾಡುವಲ್ಲಿ ಎಡವಿದ ಜಿಲ್ಲಾಡಳಿತ –ಎಸಿ ವಿನಯ್ ರಾಜ್

Spread the love

ಬಿ.ಜೆ.ಪಿ ಪಕ್ಷದ ಜನಪ್ರತಿನಿಧಿಗಳ ಹಸ್ತಕ್ಷೇಪ- ಜನರ ಆರೋಗ್ಯ ಕಾಪಾಡುವಲ್ಲಿ ಎಡವಿದ ಜಿಲ್ಲಾಡಳಿತ –ಎಸಿ ವಿನಯ್ ರಾಜ್

ಮಂಗಳೂರು: ದಕ ಜಿಲ್ಲೆಯಲ್ಲಿ ಬಿಜೆಪಿ ಪಕದ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಜಿಲ್ಲಾಡಳಿತ ಸಾಮಾನ್ಯ ಜನರ ಆರೋಗ್ಯ ಕಾಪಾಡುವಲ್ಲಿ ಎಡವುತ್ತಿದೆ ಎಂದು ದಕ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಎ ಸಿ ವಿನಯ್ ರಾಜ್ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 70 ಪ್ರಾಥಮಿಕ ಆರೋಗ್ಯ ಕೇಂದ್ರ , 8 ಸಮುದಾಯ ಆರೋಗ್ಯ ಕೇಂದ್ರ ಹಾಗೂ 4 ತಾಲೂಕು ಆಸ್ಪತ್ರೆಗಳು ಹಾಗೂ 1 ಜಿಲ್ಲಾ ಆಸ್ಪತ್ರೆ ಇದೆ. ಮಾತ್ರವಲ್ಲದೇ ಅನೇಕ ಖಾಸಗಿ ಆಸ್ಪತ್ರೆಗಳು ಕಾರ್ಯಾಚರಿಸುತ್ತಿದೆ. ಈ ಎಲ್ಲಾ ಖಾಸಗಿ ಆಸ್ಪತ್ರೆಗಳು ಚಾರಿಟೇಬಲ್ ಟ್ರಸ್ಟ್ನ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದು ಸರ್ಕಾರಕ್ಕೆ ಕಟ್ಟುವ ತೆರಿಗೆಯಿಂದ ವಿನಾಯಿತಿ ಪಡೆದಿದೆ ಎಂಬುವುದು ಉಲ್ಲೇಖನೀಯ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯ, ಡೆಂಗಿ, ಚಿಕನ್ ಗುನ್ಯ ಜ್ವರ ಸರ್ವೇಸಾಮಾನ್ಯವಾಗಿ ಎಲ್ಲಾ ಮಳೆಗಾಲದ ಸಂಧರ್ಭದಲ್ಲಿ ಬರುತ್ತಿದೆ. 2019 ಕ್ಕೆ ಸಂಭಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,997 ಮಲೇರಿಯ ಪ್ರಕರಣಗಳು ಅದರಲ್ಲೂ ನಗರ ಪ್ರದೇಶದಲ್ಲಿ 2,593 ಹಾಗೂ ಗ್ರಾಮೀಣ ಪ್ರದೇಶದಲ್ಲಿ 570 ವರದಿಯಾಗಿದ್ದು, ಅದೇ ರೀತಿಯಲ್ಲಿ ಡೆಂಗಿ ಜ್ವರ ಪ್ರಕರಣ 1,539 ವರದಿಯಾಗಿದ್ದು ನಗರ ಪ್ರದೇಶದಲ್ಲಿ 969 ಮತ್ತು ಗ್ರಾಮೀಣ ಪ್ರದೇಶದಲ್ಲಿ 570 ವರದಿಯಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಯ ಮೂಲಗಳಿಂದ ತಿಳಿದುಬಂದಿರುತ್ತದೆ. ಹಲವಾರು ಮಂದಿ ಡೆಂಗಿ ಪ್ರಕರಣಕ್ಕೆ ಸಂಭಂಧಪಟ್ಟಂತೆ ಮರಣಪಟ್ಟಿರುತ್ತಾರೆ. ಮಂಗಳೂರು ನಗರದ ಎಲ್ಲಾ ಆಸ್ಪತ್ರೆಗಳಲ್ಲಿ ಸಾವಿರಾರು ಮಂದಿ ಒಂದೇ ಸಂಧರ್ಭದಲ್ಲಿ ಚಿಕಿತ್ಸೆ ಪಡೆಯುವ ಸಂಧರ್ಭ ಈ ಜಿಲ್ಲೆ ಕಂಡಿದೆ.

ಕೋವಿಡ್-19 ಮಹಾಮಾರಿಯಿಂದ ಜಿಲ್ಲೆ ತತ್ತರಿಸಿದೆ. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ರೋಗಿಗಳು ಚಿಕಿತ್ಸೆಯ ಬಗ್ಗೆ ಖಾಸಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆಗಳು, ಸರಕಾರಿ ಆಸ್ಪತ್ರೆಗಳಿಗೆ ಹೋಗುವಂತಹ ಸಂಧರ್ಭದಲ್ಲಿ ಅವರು ಕೋವಿಡ್-19 ಬಾಧಿತರಲ್ಲದಿದ್ದರೂ ಕೂಡ ಅವರನ್ನು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು ಬರಲು ಕೇಳಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ತುರ್ತು ಶಸ್ತ್ರ ಚಿಕಿತ್ಸೆ ಅಥವಾ ಇನ್ಯಾವುದೇ ತುರ್ತು ಚಿಕಿತ್ಸೆ ರೋಗಿಗಳು ಆಸ್ಪತ್ರೆಗೆ ಹೋಗುವ ಸಂಧರ್ಭದಲ್ಲಿ ಅವರನ್ನು ಕೋವಿಡ್-19 ಪರೀಕ್ಷಾ ವರದಿ ತೆಗೆದುಕೊಂಡು ಬರುವಂತೆ ಕೇಳಲಾಗುತ್ತಿದೆ. ಇದರಿಂದ ಸಾವಿರಾರು ಜನ ಮಾನಸಿಕ ಒತ್ತಡ ಹಾಗೂ ತೊಂದರೆಗೆ ಒಳಗಾಗುತ್ತಿದ್ದಾರೆ.

ದೆಹಲಿಯ ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಮುಖ್ಯಸ್ಥರು ಜೂನ್ ಜುಲೈ ತಿಂಗಳಲ್ಲಿ ಕೋವಿಡ್-19 ಪ್ರಕರಣಗಳು ದೇಶದಲ್ಲಿ ಉತ್ತುಂಘಕ್ಕೆ ಏರಲಿದೆ ಎಂದು ಹೇಳಿರುವುದು ಉಲ್ಲೇಖನೀಯ. ಮಳೆಗಾಲ ಸಮೀಪಿಸುತ್ತಿದ್ದು ಜಿಲ್ಲೆಯಲ್ಲಿ ಡೆಂಗಿ, ಮಲೇರಿಯ, ಚಿಕನ್ ಗುನ್ಯ ಹಾಗೂ ಕೋವಿಡ್-19 ಎಲ್ಲಾ ಪ್ರಕರಣಗಳು ಒಮ್ಮೆಲೇ ಹೆಚ್ಚಾಗುವ ಸಂಭವ ಇದೆ. ಇಂತಹ ಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್-19 ಪರೀಕ್ಷಾ ವರದಿ ತೆಗೆದುಕೊಂಡು ಬಾರದೇ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ನಿರಾಕರಿಸಿದಲ್ಲಿ ಜಿಲ್ಲೆಯಲ್ಲಿ ನೂರಾರು ಸಾವುಗಳು ಸಂಭವಿಸುವ ಸಂಧರ್ಭ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಯಾವ ಕ್ರಮವನ್ನು ಕೈಗೊಂಡಿದೆ ಎಂದು ಜನತೆಗೆ ತಿಳಿಸಬೇಕಾಗಿದೆ.

ಇಂತಹ ಸಂಧರ್ಭದಲ್ಲಿ ರೋಗಿಗಳನ್ನು ಪರೀಕ್ಷೆ ಅಥವಾ ಆರೈಕೆ ಮಾಡುವ ಆರೋಗ್ಯ ಸಿಬ್ಬಂದಿಗಳಿಗೆ ಪರ್ಸನಲ್ ಪ್ರೊಟೆಕ್ಷನ್ ಇಕ್ಯೂಪ್ಮೆಂಟ್ ಪೂರೈಕೆ ಮಾಡಲಾಗಿದೆಯೇ? ಕೋವಿಡ್-19 ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ತೆರೆಯಲಾಗುವುದೇ? ಕೋವಿಡ್-19 ಪೀಡಿತರು ಮತ್ತು ಇತರ ಜ್ವರಗಳಿಂದ ಪೀಡಿತರನ್ನು ಯಾವ ರೀತಿಯಲ್ಲಿ ಪರೀಕ್ಷೆ ಮಾಡಲು ಕೇಂದ್ರಗಳನ್ನು ತೆರೆಯಲಾಗುತ್ತದೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ, ಕೋವಿಡ್-19 ಪರೀಕ್ಷಾ ಕಿಟ್ಗಳ ಲಬ್ಯತೆ ಮುಂತಾದ ವಿಚಾರಗಳ ಬಗ್ಗೆ ರೂಪುರೇಷೆಯನ್ನು ಜಿಲ್ಲಾಡಳಿತ ತಯಾರಿಸಿದೆಯೇ? ಸಂಪೂರ್ಣ ವಿವರ ಜಿಲ್ಲೆಯ ಜನತೆಗೆ ನೀಡಬೇಕಾಗಿದೆ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆಗಳು ಮತ್ತು ಇತರ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ಕೆಮ್ಮು, ಜ್ವರ, ತಲೆನೋವು, ಶೀತ ಮೊದಲಾದ ಲಕ್ಷಣಗಳು ಇರುವ ರೋಗಿಗಳು ಬಂದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಕೋವಿಡ್-19 ರೋಗ ಭಾದಿತರಾಗದಂತೆ ರಕ್ಷಿಸಿಕೊಳ್ಳಲು ಜಿಲ್ಲಾಡಳಿತ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಖಂಡನೀಯ.

ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಂಸದರು ಹಾಗೂ ಜಿಲ್ಲೆಯ ಶಾಸಕರುಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಅವರು ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಆಹಾರದ ಕಿಟ್ಗಳನ್ನು ಪೂರೈಕೆ ಮಾಡುವ ಕೆಲಸದ ಮೂಲಕ ರಾಜಕೀಯ ಮಾಡುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.


Spread the love