Home Mangalorean News Kannada News ಬೀಚ್ ಸ್ವಚ್ಛತೆಯ ಮೂಲಕ ಪ್ರವಾಸೋದ್ಯಮ ಅಭಿವೃದ್ದಿ- ಜಿಲ್ಲಾಧಿಕಾರಿ ಜಗದೀಶ್

ಬೀಚ್ ಸ್ವಚ್ಛತೆಯ ಮೂಲಕ ಪ್ರವಾಸೋದ್ಯಮ ಅಭಿವೃದ್ದಿ- ಜಿಲ್ಲಾಧಿಕಾರಿ ಜಗದೀಶ್

Spread the love

ಬೀಚ್ ಸ್ವಚ್ಛತೆಯ ಮೂಲಕ ಪ್ರವಾಸೋದ್ಯಮ ಅಭಿವೃದ್ದಿ- ಜಿಲ್ಲಾಧಿಕಾರಿ ಜಗದೀಶ್

ಉಡುಪಿ: ಬೀಚ್ ಗಳನ್ನು ಸ್ವಚ್ಛವಾಗಿಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋಧ್ಯಮವನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಪಡಿಸಲು ಸಾದ್ಯ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

ಅವರು ಶನಿವಾರ, ಕರಾವಳಿ ಕಾವಲು ಪೊಲೀಸ್ ವತಿಯಿಂದ ,ಮಲ್ಪೆ ಬೀಚ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಬೀಚ್ ಸ್ವಚ್ಚತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೀಚ್ ಗಳು ಸ್ವಚ್ಛವಾಗಿದ್ದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ , ಆ ಮೂಲಕ ಪ್ರವಾಸೋದ್ಯಮ ಅಭಿವೃದ್ದಿಗೊಳ್ಳಲಿದ್ದು, ಸ್ಥಳಿಯರಿಗೆ ಹೆಚ್ಚಿನ ಆರ್ಥಿಕ ಅಭಿವೃದ್ದಿಯೂ ಸಾಧ್ಯ, ಅಲ್ಲದೇ ಸಚ್ಛವಾಗಿರುವ ಕಡೆಯಲ್ಲಿ ಯಾರೂ ಸಹ ತ್ಯಾಜ್ಯ ಎಸೆಯಲು ಇಚ್ಚಿಸುವುದಿಲ್ಲ , ಸಮುದ್ರ ದಡದಲ್ಲಿ ಎಸೆಯುವ ತಾಜ್ಯಗಳು ಸಮುದ್ರ ಸೇರಿ, ಜಲಚರಗಳು ಮತ್ತು ಮೀನುಗಾರರ ಜೀವನದ ಮೇಲೂ ಸಹ ವ್ಯತಿರಿಕ್ತ ಪರಿಣಾಮ ಬೀರುವುದರಿಂದ , ಬೀಚ್ ಗಳಲ್ಲಿ ಸ್ವಚ್ಛತೆ ಕಾಪಾಡುವುದು ಅವಶ್ಯಕ ಹಾಗೂ ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಡಿಸಿ ಜಗದೀಶ್ ಹೇಳಿದರು.

ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಮಾತನಾಡಿ, ಸ್ವಚ್ಛತೆಯ ಕುರಿತು ಈಗಾಗಲೇ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ, ಪ್ಲಾಸ್ಟಿಕ್ ನಿಷೇಧವನ್ನೂ ಸಹ ಕಟ್ಟುನಿಟ್ಟಾಗಿ ಪಾಲಿಸುತಿದ್ದು, ಉಡುಪಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ , ಕರಾವಳಿ ಕಾವಲು ಪೊಲೀಸ್ ನ ಎಸ್ಪಿ ಚೇತನ್ ಮಾತನಾಡಿ, ಸಮುದ್ರ ತೀರ ಸ್ವಚ್ಛವಾಗಿದ್ದರೆ ಕಡಲೂ ಸಹ ಸ್ವಚ್ಚವಾಗಲಿದೆ, ಇದರಿಂದ ಸಮುದ್ರ ಮಾಲಿನ್ಯ ಸಹ ಕಡಿಮೆಯಾಗಲಿದ್ದು, ಸಮೀಕ್ಷೆ ಪ್ರಕಾರ ಸಮುದ್ರ ತೀರದಿಂದ 1.5 ಕಿಮೀ ಸಮುದ್ರ ಒಳಗೆ 40 ರಿಂದ 45 ಸಾವಿರ ಪ್ಲಾಸ್ಟಿಕ್ ವಸ್ತುಗಳು ಶೇಖರವಾಗಲಿದ್ದು, ಇದರಿಂದ ಜಲಚರಗಳಿಗೆ ಮತ್ತು ಮೀನುಗಾರರಿಗೆ ಸಹ ತೊಂದರೆಯಾಗಲಿದೆ, ಮುದ್ರ ತೀರದಲ್ಲಿ ತ್ಯಾಜ್ಯವನ್ನು ಎಸೆಯದೇ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ಉಡುಪಿ ನಗರಸಭಾ ಸದಸ್ಯೆ ಲಕ್ಷ್ಮಿ ಮಂಜುನಾಥ, ಮಂಗಳೂರು ಕೋಸ್ಟ್‍ಗಾರ್ಡ್ ನ ಡೆಪ್ಯುಟಿ ಕಮಾಂಡೆಂಟ್ ಪ್ರದೀಪ್ ಕುಮಾರ್ ಸಹಾ, ಎಎಸ್‍ಪಿ ಕುಮಾರ ಚಂದ್ರ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಗಣೇಶ ಉಪಸ್ಥಿತರಿದ್ದರು.

ಕರಾವಳಿ ಕಾವಲು ಪೊಲೀಸ್ ನ ಗುಪ್ತವಾರ್ತಾ ವಿಭಾಗದ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್ ಸ್ವಾಗತಿಸಿದರು, ನಿರೀಕ್ಷಕ ರಾಘವೇಂದ್ರ ಕಾಂಡಿಕೆ ವಂದಿಸಿದರು, ಪಿಎಸ್‍ಐ ಬಿ. ಮನಮೋಹನ ರಾವ್ ನಿರೂಪಿಸಿದರು.

ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ, ಮಿಲಾಗ್ರಿಸ್. ಪೂರ್ಣ ಪ್ರಜ್ಞಾ ಸಂಜೆ ಕಾಲೇಜು, ಸರಕರಿ ಪದವಿ ಪೂರ್ವ ಕಾಲೇಜು ಮಲ್ಪೆ, ಜಿ.ಶಂಕರ್ ಪದವಿ ಪೂರ್ವ ಕಾಲೇಜು ಕಿದಿಯೂರು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Click Here To View More Photos


Spread the love

Exit mobile version