ಬೀದಿ ಬದಿ ವ್ಯಾಪಾರಿಗಳಿಗೆ ವೆಂಡರ್ ಝೋನ್ – ಅಪರ ಜಿಲ್ಲಾಧಿಕಾರಿ
ಉಡುಪಿ: ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರು ಸಂಚರಿಸುವ ರಸ್ತೆಗಳನ್ನು ಆಕ್ರಮಿಸಿ ವ್ಯಾಪಾರ ಮಾಡುವುದನ್ನು ತಪ್ಪಿಸಲು , ಅವರಿಗಾಗಿ ಪ್ರತ್ಯೇಕ ವೆಂಡರ್ ಝೋನ್ ಗಳನ್ನು ಗುರುತಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಅವರು ಶುಕ್ರವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ , ರಾಜ್ಯ ನಗರಾಭಿವೃದ್ದಿ ಸಂಸ್ಥೆ ಮೈಸೂರು, ಉಡುಪಿ ಜಿಲ್ಲಾ ನಗರಾಭಿವೃದ್ದಿ ಕೋಶ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ, ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನ ಕಾರ್ಯಕ್ರಮದಡಿ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಅಧಿನಿಯಮ-2014 ರ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ನಗರದಲ್ಲಿ 289 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಈಗಾಗಲೇ ಗುರುತಿನ ಚೀಟಿ ನೀಡಲಾಗಿದೆ, ಅಗತ್ಯವಿದ್ದಲ್ಲಿ ಇತರರಿಗೂ ನೀಡಲಾಗುವುದು ಇವರಿಗೆ ಮಣಿಪಾಲ, ಕಲ್ಸಂಕ, ಅಜ್ಜರಕಾಡು ಹಾಗೂ ಅಂಬಾಗಿಲು ನಲ್ಲಿ ವೆಂಡರ್ ಝೋನ್ ಗುರುತಿಸಲಾಗಿದೆ, ಈ ಸ್ಥಳದಲ್ಲಿ ವ್ಯಾಪಾರಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸ್ಥಳೀಯ ಸಂಸ್ಥೆಗಳು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಅಭದ್ರತೆ ಇದೆ, ಇವರಿಗೆ ಅಗತ್ಯವಿರುವ ಕೌಶಲಾಭಿವೃದ್ದಿ ನೀಡುವ ಹಾಗೂ ಸಣ್ಣ ಪ್ರಮಾಣದಲ್ಲಿ ಬ್ಯಾಂಕ್ ಗಳ ಮೂಲಕ ಸಾಲ ವಿತರಿಸುವ ಕುರಿತಂತೆ ಕ್ರಮ ಕೈಗೊಳ್ಳಬೇಕು ಮತ್ತು ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರಿಗೆ ತೊಂದರೆಯಾದಂತೆ ವ್ಯವಸ್ಥಿತ ರೀತಿಯಲ್ಲಿ ವ್ಯಾಪಾರ ನಡೆಸುವಂತೆ ಅನುರಾಧ ತಿಳಿಸಿದರು.
ಉಡುಪಿ ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಉಪಾಧ್ಯಕ್ಷೆ ಸಂಧ್ಯಾ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ್, ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ,ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ರತ್ನಾ, ಉಡುಪಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್ ಬೋರ್ಗಿಯಾ, ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್ ಹಾಗೂ ವಿಶ್ವನಾಥ್ ಉಪಸ್ಥಿತರಿದ್ದರು.
ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಸ್ವಾಗತಿಸಿದರು.