ಬೀಯಿಂಗ್ ವಾರಿಯರ್ಸ್ ತಂಡ ವತಿಯಿಂದ ಸಂತ ಅಂತೋನಿ ಆಶ್ರಮವಾಸಿಗಳಿಗೆ ಭೋಜನ ವ್ಯವಸ್ಥೆ
ಮಂಗಳೂರು: ಕತಾರ್ ಮೂಲದ ಬೀಯಿಂಗ್ ವಾರಿಯರ್ಸ್ ತಂಡ ವತಿಯಿಂದ ನಗರದ ಜೆಪ್ಪುವಿನಲ್ಲಿ ಇರುವ ಸಂತ ಅಂತೋನಿಯವರ ಆಶ್ರಮಕ್ಕೆ ಭೇಟಿ ನೀಡಿ ಮಧ್ಯಾಹ್ನದ ಭೋಜನವನ್ನು ನೀಡಲಾಯಿತು.
ಈ ವೇಳೆ ಮಾತನಾಡಿದ ತಂಡದ ಅಧ್ಯಕ್ಷರಾದ ಲುಗ್ನಾ ಕೌಸರ್ ಕುಶಾಲ್ ಅವರು ತನ್ನ ತಂದೆ ತಾಯಿಯ ನೆನಪಿಗಾಗಿ ಬಡವರ ಏಳಿಗೆಗಾಗಿ ಮತ್ತು ಸಹಾಯ ಮಾಡುವುದಕ್ಕಾಗಿ ಏನಾದರೂ ಮಾಡುವ ಆಸೆಯನ್ನು ಹೊಂದಿದ್ದು ಅದರಂತೆ ಒಂದು ಚಾರಿಟೇಬಲ್ ಟ್ರಸ್ಟಿನ್ನು ರಚಿಸಬೇಕು ಎಂಬ ಅಪೇಕ್ಷೆಯನ್ನು ಹೊಂದಿದ್ದೆ. ಅದರಂತೆ ಬೀಯಿಂಗ್ ವಾರಿಯರ್ಸ್ ಎಂಬ ಟ್ರಸ್ಟನ್ನು ರಚನೆ ಮಾಡಿದ್ದು, 15 ವರ್ಷಗಳಿಂದ ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದು, ಅದರ ನೋಂದಣಿ ಕಾರ್ಯ ಬುಧವಾರ ನಡೆದಿದ್ದು ಅದರ ಸಂತೋಷವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಆಶ್ರಮಕ್ಕೆ ಭೇಟಿ ನೀಡಿ ಇಲ್ಲಿನ ಆಶ್ರಮವಾಸಿಗಳೊಂದಿಗೆ ಸಹಭೋಜನ ಆಯೋಜಿಸಲಾಗಿದೆ. ಪ್ರಸ್ತುತ ತಂಡದಲ್ಲಿ 10 ಮಂದಿಯಿದ್ದು ಬಡವರಿಗೆ ಸಹಾಯವನ್ನು ಮುಂದೆಯೂ ಮಾಡಲಾಗುವುದು ಎಂದರು.
ಟ್ರಸ್ಟಿನ ಕಾರ್ಯದರ್ಶಿ ಕುಶಾಲ್ ಕುಮಾರ್ ಮಾತನಾಡಿ ಟ್ರಸ್ಟಿನ ಪ್ರಮುಖ ಉದ್ದೇಶ ಬಡವರಿಗೆ ಸಹಾಯ ಮಾಡುವುದಾಗಿದ್ದು, ಮುಂದಿನ ದಿನಗಳಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ, ಬಡವರ ಆರೋಗ್ಯಕ್ಕಾಗಿ ಹೆಚ್ಚಿನ ಸಹಾಯ ಮಾಡುವ ಯೋಜನೆಯನ್ನು ಟ್ರಸ್ಟ್ ಹಮ್ಮಿಕೊಳ್ಳಲಾಗಿದೆ. ಕತಾರ್ ದೇಶದಲ್ಲಿ ತನ್ನದೇ ಆದ ವಾರಿಯರ್ ಕ್ರಿಕೆಟ್ ಕ್ಲಬ್ ಮತ್ತು ಕ್ರಿಕೆಟ್ ಅಕಾಡೆಮಿಯನ್ನು ಹೊಂದಿದ್ದು ಅದನ್ನು ಮಂಗಳೂರಿನಲ್ಲೂ ಸದ್ಯವೇ ಆರಂಭಿಸಲಾಗುವುದು ಎಂದರು.
ಆಶ್ರಮದ ವಂ ಪೀಟರ್ ಮಾತನಾಡಿ ಆಶ್ರಮದಲ್ಲಿ ಸುಮಾರು 400 ಮಂದಿ ಆಶ್ರಯವನ್ನು ಪಡೆದಿದ್ದು, ಆಶ್ರಮದ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶೇಖ್ ಕೈಫ್, ಮೋಹನ್ ಕೊಠಾರಿ, ಜೂಹಿ ಜಾನ್, ಶೈಜಾದಿ, ಮಹೇಶ್ (ಮನಿ)ಜೆಪ್ಪು, ಸಾಗರ್ ಜೆಪ್ಪು, ಅಯಾನ್ ಕತಾರ್, ರೋಹನ್ ಮೊಂತೆರೋ ಉಪಸ್ಥಿತರಿದ್ದರು.