ಬೆಂಗಳೂರಿನಲ್ಲಿ ನೆರವೇರಿದ ಪ್ರಜ್ಞಾ ಅನಂತ್ ಭರತನಾಟ್ಯ ರಂಗ ಪ್ರವೇಶ

Spread the love

ಬೆಂಗಳೂರಿನಲ್ಲಿ ನೆರವೇರಿದ ಪ್ರಜ್ಞಾ ಅನಂತ್ ಭರತನಾಟ್ಯ ರಂಗ ಪ್ರವೇಶ

ಕಂಠದಿಂದ ಹಾಡನ್ನು ಹಾಡಿ, ಕೈಯಲ್ಲಿ ಅರ್ಥವ ತೋರಿ ,ದೃಷ್ಟಿಯಲ್ಲಿ ಭಾವವ ತುಂಬಿ, ಪಾದದಲ್ಲಿ ತಾಳವ ಸಂರಕ್ಷಿಸಿ ನೃತ್ಯಲೋಕದಲ್ಲಿ ಮೈಮರೆಸುವ ಭರತನಾಟ್ಯವೆಂಬ ಮೇರು ಕಲೆಯ ರಂಗಪ್ರವೇಶವನ್ನು ತಾ. 4-8-2018ರ ಸಂಜೆ ಗಾಯನಸಮಾಜ ಸಭಾಂಗಣ ಬೆಂಗಳೂರಿನಲ್ಲಿ ಕು. ಪ್ರಜ್ಞಾ ಅನಂತ್ ರವರು ಯಶಸ್ವಿಯಾಗಿ ನೆರವೇರಿಸಿದರು .

ನಾಟ್ಯದೇವ ನಟರಾಜನಿಗೆ , ಗುರುಗಳಿಗೆ, ಮಹಾ ಗುರುಗಳಿಗೆ ಮಾತಾಪಿತೃಗಳಿಗೆ ವಂದಿಸಿ ಗುರು ವಿದುಷಿ ಸಪ್ನಾಕಿರಣ್ ಅವರಿಂದ ಗೆಜ್ಜೆ ಹಾಗು ಆಶೀರ್ವಾದವನ್ನು ಪಡೆದು ಗಣೇಶವಂದನೆ ಹಾಗು ಪುಷ್ಪಾಜಲಿಯೊಂದಿಗೆ ಪ್ರಜ್ಞಾರವರು ಬಹಳ ಆತ್ಮವಿಶ್ವಾಸದಿಂದ ರಂಗ ಪ್ರವೇಶಿಸಿದರು . ಹಾಡಿನಿಂದ ಹಾಡಿಗೆ ತನ್ಮಯತೆ ಹಾಗು ಆತ್ಮವಿಶ್ವಾಸವನ್ನು ಬೆಳೆಸುತ್ತಾ ನೆರೆದವರ ಪ್ರಶಂಸೆಗೆ ಪಾತ್ರರಾದರು. ಗುರುವಿನ ಕಣ್ಣಲ್ಲಿ ಆನಂದ ಭಾಷ್ಪತರಿಸಿದರು . ಇದು ಶಿಷ್ಯೆಯ ಶ್ರದ್ದೆ ಮತ್ತು ಸಮರ್ಪಣೆಗೆ ಹಿಡಿದ ಕನ್ನಡಿಯಾಗಿತ್ತು.

ಭರತನಾಟ್ಯ ‘ಮಾರ್ಗ’ ವನ್ನು ಅನುಸರಿಸಿ ,ಶಾಸ್ತ್ರಬದ್ಧವಾಗಿ ಅಲರಿಪು ,ಜತಿಸ್ವರ ,ಶಬ್ಧಮ್ ,ವರ್ಣ ನಂತರ ಕನಕದಾಸರ ಕೀರ್ತನೆ , ಹರಿಹರನ ‘ಗುಂಡಯ್ಯನ ರಗಳೆ’ ,ತಿಲ್ಲಾನ ಮಂಗಳವನ್ನು ಪ್ರಸ್ತುತ ಪಡಿಸಿದರು.

ದುಬೈ ನಿವಾಸಿ ಬೆಂಗಳೂರು ಮೂಲದ ಶ್ರೀಲೇಖಾ ಅನಂತ್ ಮತ್ತು ಅನಂತ್ ರಘುನಾಥ್ ರ ಪುತ್ರಿ ಪ್ರಜ್ಞಾ ದುಬೈಯ ಸಂಕೀರ್ಣ ನೃತ್ಯಶಾಲೆಯ ವಿದ್ಯಾರ್ಥಿನಿ ಹಾಗು ಬಹುಮುಖ ಪ್ರತಿಭೆಯ ನಾಟ್ಯಗುರು ವಿದುಷಿ ಸಪ್ನಾಕಿರಣ್ ರವರ ಶಿಷ್ಯೆ

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿರುವ ಚಿತ್ರನಟ ಪ್ರಣಯರಾಜ ಶ್ರೀನಾಥ್ ಮಾತನಾಡುತ್ತ , ಅತಿಕಿರಿಯ ವಯಸ್ಸಿನಲ್ಲಿ ಪ್ರಜ್ಞಾ ತೋರಿದ ಕಲಾಪ್ರೌಢಿಮೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಹಾಗು ಶ್ರೀಮತಿ ಸವಿತಾ ಅರುಣರವರ ಶಿಷ್ಯ ಪರಂಪರೆ ಮತ್ತು ನಾಟ್ಯ ಕ್ಷೇತ್ರದ ಅವರ ಕೊಡುಗೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು . ವೇದಿಕೆಯಲ್ಲಿ ಗಾಯನ ಸಮಾಜದ ಅಧ್ಯಕ್ಷರಾದ ಡಾ. ಎಂ. ಆರ್ .ವಿ .ಪ್ರಸಾದ್ , ಮಹಾ ಗುರು ಸವಿತಾ ಅರುಣ್ ಪ್ರಜ್ಞಾಳ ಪಿತಾಮಹರುಗಳಾದ ಪಿ . ರಘುನಾಥ್ , ಹನುಮಂತಾಚಾರ್ ಮತ್ತು ಗುರು ಸಪ್ನಾ ಕಿರಣ್ ಉಪಸ್ಥಿತರಿದ್ದರು .

ಪರಿಪೂರ್ಣ ಸಮಾಗಮದ ಈ ಕಾರ್ಯಕ್ರಮದಲ್ಲಿ ನಟುವಾಂಗದಲ್ಲಿ ಸಾಥ್ ನೀಡಿದವರು ಗುರು ವಿದುಷಿ ಸಪ್ನಾ ಕಿರಣ್ ಮತ್ತು ವಿಧ್ವಾನ್ ಅರ್ಜುನ್ ಯು .ಎ , ಹಾಡುಗಾರಿಕೆಯಲ್ಲಿ ಶ್ರೀಮತಿ ದಿವ್ಯಾ ಅರ್ಜುನ್ , ಮೃದಂಗಂ ನಲ್ಲಿ ವಿದ್ವಾನ್ ಪುರುಷೋತ್ತಮ್ , ಕೊಳಲು ವಿದ್ವಾನ್ ರಾಕೇಶ್ ದತ್ತ್ , ವಯಲಿನ್ ವಿದ್ವಾನ್ ದಯಾಕರ್ ರವರು.

ನಾಟ್ಯಶಾಸ್ತ್ರ, ಮಾರ್ಗದ,ಹಾಡು,ಕೀರ್ತನೆ ,ತಾಳ, ಲಯಗಳ ಸಂಪೂರ್ಣ ಮಾಹಿತಿಗಳೊಂದಿಗೆ ಡಾ.ಸುಗ್ಗನಹಳ್ಳಿ ಷಡಕ್ಷರಿಯವರು ಅತ್ಯುತ್ತಮವಾಗಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಅನಂತ್ ದಂಪತಿಗಳು ವಂದನಾರ್ಪಣೆ ಸಲ್ಲಿಸುತ್ತಾ ಅಚ್ಚುಕಟ್ಟಾದ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ನೆನಪಿನ ಕಾಣಿಕೆಯನ್ನಿಟ್ಟು ಗೌರವಿಸಿದರು.

ವರದಿ :ಆರತಿ ಅಡಿಗ, ದುಬೈ


Spread the love