ಬೆಂಗಳೂರಿನಲ್ಲಿ ಸದ್ಯಕ್ಕೆ ಲಾಕ್ ಡೌನ್ ಇಲ್ಲ: ಉನ್ನತ ಮಟ್ಟದ ಸಭೆಯಲ್ಲಿ ಅಭಿಮತ
ಬೆಂಗಳೂರು: ಬೆಂಗಳೂರು ನಗರದಲ್ಲಿ ಕೋವಿಡ್ 19 ಸೋಂಕು ತೀವ್ರಗೊಳ್ಳುತ್ತಿದ್ದು, ಸದ್ಯಕ್ಕೆ ಲಾಕ್ ಡೌನ್ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಸಚಿವರು, ಅಧಿಕಾರಿಗಳನ್ನೊಳಗೊಂಡಂತೆ ಉನ್ನತಮಟ್ಟದ ಸಭೆ ನಡೆಸಿದ್ದು, ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡದೇ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ತಜ್ಞರು ಲಾಕ್ ಡೌನ್ ಬೇಡ ಎಂದು ಸಲಹೆ ಮಾಡಿದ್ದಾರೆ.
ನಗರದಲ್ಲಿ ಸೋಂಕು ದೃಢ ಪಟ್ಟ ನಂತರ ಸೋಂಕಿತರನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಬೇಕು. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಅಂಬ್ಯುಲೆನ್ಸ್ ಗಳನ್ನು ಈ ಉದ್ದೇಶಕ್ಕೆ ಬಳಸುವ, ನಗರ ವಾರ್ಡ್ ಗಳಲ್ಲಿ ಇನ್ನಷ್ಟು ಬಿಗಿಬಂದೋಬಸ್ತ್ ನಂತಹ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ನಿಲುವಿಗೆ ಬರಲಾಗಿದೆ. ರೋಗಿಗಳು ಕಾಯುವ ಪರಿಸ್ಥಿತಿ ಬರಬಾರದು. ಸೋಂಕಿತರನ್ನು ಕರೆದೊಯ್ಯಲು ಈಗ 100 ಅಂಬ್ಯುಲೆನ್ಸ್ ಗಳು ಲಭ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಅಂಬ್ಯುಲೆನ್ಸ್ ಗಳನ್ನು ಈ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಗಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸಚಿವರಿಗೆ ಸೂಚಿಸಲಾಗಿದೆ.
ಹೆಚ್ಚುತ್ತಿರುವ ಪ್ರಕರಣಗಳಿಗೆ ತಕ್ಕಂತೆ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಬೇಕು. ರೋಗ ಲಕ್ಷಣ ಕಡಿಮೆ ಇರುವವರಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಗೂ ರೋಗ ಲಕ್ಷಣ ಇಲ್ಲದವರಿಗೆ ಖಾಸಗಿ ಹೋಟೆಲ್ ಗಳು ಹಾಗೂ ಹಜ್ ಭವನದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಹಾಸಿಗೆಗಳ ಲಭ್ಯತೆ ಬಗ್ಗೆ ಸಮಗ್ರ ಮಾಹಿತಿ ಲಭ್ಯವಿರಬೇಲು. ಪ್ರತಿ ರೋಗಿಯ ದಾಖಲಿಸುವ ಕುರಿತು ಕ್ಷಣ ಕ್ಷಣದ ಮಾಹಿತಿ ಒದಗಿಸುವ ಕುರಿತು ಡಿಜಿಟಲ್ ಪ್ಲಾಟ್ ಫಾರ್ಮ್ ಸೃ಼ಜಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಶೇ. 61 ರಷ್ಟು ಸೊಂಕಿತರು ಗುಣಮುಖರಾಗಿದ್ದಾರೆ. 3700 ಸಕ್ರಿಯ ಪ್ರಕರಣಗಳು ಇವೆ.
ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಸುವಂತೆ ಯಡಿಯೂರಪ್ಪ ನಿರ್ದೇಶನ ನೀಡಿದ್ದು, ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸಚಿವರು, ಶಾಸಕರ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ತೀರ್ಮಾನಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ. ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಕೋವಿಡ್ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲು ಸಚಿವರಿಗೆ ಸೂಚನೆ ನೀಡಲಾಯಿತು.
ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಬೆಂಗಳೂರಿನಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ. ಸೋಂಕು ಹೆಚ್ಚಿರುವ ವಾರ್ಡ್ ಗಳಲ್ಲಿ ಸೀಲ್ ಡೌನ್ ಮುಂದುವರಿಯಲಿದೆ. ಲಾಕ್ಡೌನ್ ಮಾಡುವಂತೆ ಶ್ರೀಮಂತ ವರ್ಗ ಬೇಡಿಕೆ ಇಟ್ಟಿದೆ. ಆದರೆ ಕೂಲಿ ಕಾರ್ಮಿಕರು ಲಾಕ್ಡೌನ್ ಬೇಡ ಎಂದಿದ್ದಾರೆ. ಸರ್ಕಾರ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡಬೇಕಾಗುತ್ತದೆ. ಶೇ 85 ರಷ್ಟು ಜನ ಲಾಕ್ ಡೌನ್ ಬೇಡ ಎಂದಿದ್ದಾರೆ. ಹೀಗಾಗಿ ಬಡವರ ಪರ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ನಗರದಲ್ಲಿ 100 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ಬೆಡ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದ್ದು, ತುಷಾರ್ ಗಿರಿನಾಥ್ ಅವರಿಗೆ ಈ ಜವಬ್ದಾರಿ ನೀಡಲಾಗಿದೆ ಎಂದರು.
ಕೊರೊನಾ ಯುದ್ಧದಂತೆ.ಈ ಯುದ್ಧದ ಸಮಯದಲ್ಲಿ ರಾಜಕೀಯ ಬೇಡ. ಕಾಂಗ್ರೆಸ್ ನಾಯಕರು ರಾಜಕೀಯ ಬಿಟ್ಟು ಸಲಹೆ ನೀಡಲಿ. ಪರಿಸ್ಥಿತಿ ಕೈಮೀರುವ ಸ್ಥಿತಿಯಿಲ್ಲ. ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ಕ್ವಾರಂಟೈನ್ ಕಡ್ಡಾಯ. ಚೆನ್ನೈ, ದೆಹಲಿಯಿಂದ ಬಂದರೆ ಕ್ವಾರಂಟೈನ್ ಅವಶ್ಯಕತೆ ಇಲ್ಲ ಎಂದರು.
ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ: ಸಿ.ಎನ್. ಅಶ್ವತ್ಥ್ ನಾರಾಯಣ್ ಹಾಗೂ ಗೋವಿಂದ ಕಾರಜೋಳ, ಸಚಿವರಾದ ವಿ.ಸೋಮಣ್ಣ, ಬಿ.ಶ್ರೀರಾಮುಲು, ಭೈರತಿ ಬಸವರಾಜ, ಸಂಸದ ತೇಜಸ್ವಿ ಸೂರ್ಯ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.