ಬೆಂಗಳೂರು: ಧರ್ಮಸ್ಥಳ ಕ್ಷೇತ್ರವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಪ್ರಸ್ತಾಪವಿಲ್ಲ ಎಂದು ಹೇಳುವ ಈ ವಿಚಾರಕ್ಕೆ ಎದ್ದಿದ್ದ ಗೊಂದಲಗಳಿಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ತೆರೆ ಎಳೆದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವುದು ಕಾಯಿದೆ ಅಡಿಯಲ್ಲಿ ಬರುವುದಿಲ್ಲ. ಕೆಲವು ವಿರೋಧಿ ಧ್ವನಿಗಳು ತಪ್ಪು ಸಂದೇಶವನ್ನು ರವಾನಿಸಿ ಮುಜಾರಾಯಿ ಇಲಾಖೆ ವ್ಯಾಪ್ತಿಗೆ ವಹಿಸಲಾಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಧರ್ಮಸ್ಥಳ ದೇವಸ್ಥಾನವನ್ನು ವೀರೇಂದ್ರ ಹೆಗ್ಗಡೆಯವರು ಅಚ್ಚುಕಟ್ಟಾಗಿ ನಡೆಸುತ್ತಿದ್ದು, ತಮ್ಮ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಧರ್ಮಸ್ಥಳದ ಮೇಲೆ ನಂಬಿಕೆ ಇಟ್ಟವರು ಲಕ್ಷಾಂತರ ಜನ ಇದ್ದಾರೆ. ಅವರ ಭಾವನೆಗಳಿಗೆ ನೋವು ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ರಂಜನ್ ರಾವ್ ಎಂಬವರು ಧರ್ಮಸ್ಥಳದ ದೇವಾಲಯದ ಅಕ್ರಮದ ಬಗ್ಗೆ ಒಂದು ದೂರನ್ನು ನೀಡಿದ್ದರು. ಅದನ್ನು ನಮ್ಮ ಮುಜರಾಯಿ ಇಲಾಖೆ ಆಯುಕ್ತರಿಗೆ ಕಳುಹಿಸಿದ್ದೇವೆ ಹೊರತು, ದೇವಾಲಯವನ್ನು ವಶಕ್ಕೆ ಪಡೆಯುವ ಯಾವುದೇ ಪ್ರಸ್ತಾಪ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.