ಬೆಂಗಳೂರು: ಪ್ರಯಾಣಿಕರ ದರೋಡೆ; 6 ಮಂದಿ ಆರೋಪಿಗಳ ಬಂಧನ, 6 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
ಬೆಂಗಳೂರು: ಬಸ್‌ಗಾಗಿ ಕಾಯುವ ಪ್ರಯಾಣಿಕರನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಚಾಕು ತೋರಿಸಿ ಹಣ, ಚಿನ್ನಾಭರಣ ಮೊಬೈಲ್ ದೋಚುತ್ತಿದ್ದ 6 ಮಂದಿ ದರೋಡೆಕೋರರ ಗ್ಯಾಂಗ್ ಅನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ನಂದಿನಿ ಲೇಔಟ್ ಪೊಲೀಸರು 6 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ದರೋಡೆಕೋರರಾದ ಮಾಗಡಿಯ ಸುನೀಲ್ ಕುಮಾರ್ ಆಲಿಯಾಸ್ ಸುನೀಲ್ (19) ಹುಲಿಯಾರು ದುರ್ಗದ ಅಭಿಲಾಷ್ ಆಲಿಯಾಸ್ ಅಭಿ (25), ರಂಜನ್ ಆಲಿಯಾಸ್ ರಂಜು (19), ಲಗ್ಗೆರೆಯ ಸಂದೀಪ್ ಆಲಿಯಾಸ್ ದೀಪು(19), ಸುಂಕದಕಟ್ಟೆಯ ರೋಹಿತ್ ಆಲಿಯಾಸ್ ಕುಂಟ(19) ಇಮ್ಮಡಿ ಹಳ್ಳಿಯ ಹರೀಶ(19) ಬಂಧಿತ ಆರೋಪಿಗಳು. ಅವರಿಂದ 6 ಲಕ್ಷ ಮೌಲ್ಯದ ಇಟಿಯೋಸ್ ಕಾರು, 3 ಬೈಕ್ ಗಳು 8 ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ನಂದಿನಿಲೇಔಟ್ ನ 2 ದರೋಡೆ ಪ್ರಕರಣ, ರಾಜಗೋಪಾಲ ನಗರ ಹಾಗೂ ನಂದಿನಿಲೇಔಟ್‌ನ ತಲಾ ಒಂದು ದ್ವಿ ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಲ್ಲಿ ಅಭಿಲಾಷ್ ಎಂಬಾತ ತಾವರೆಕೆರೆ ಹಾಗೂ ನೆಲಮಂಗಲದಲ್ಲಿ ತಲಾ 2 ಸರಗಳವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ರಂಜನ್ ಹಾಗೂ ಹರೀಶ ಎಂಬವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು ಉಳಿದ ಮೂವರು ಮೊದಲ ಬಾರಿ ಹಣದಾಸೆಗೆ ಗ್ಯಾಂಗ್ ಸೇರಿ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.
ಆರೋಪಿಗಳು ಸುಮನಹಳ್ಳಿ ಬಸ್ ನಿಲ್ದಾಣದ ಬಳಿ ಕಳೆದ ಅಕ್ಟೋಬರ್ 18 ರಂದು ಬಸ್‌ಗಾಗಿ ಕಾಯುತ್ತಿದ್ದ ನಂದಿನಿಲೇಔಟ್‌ನ ಮಂಜುನಾಥ್ ಎಂಬವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಲಗ್ಗೆರೆ ಬ್ರಿಡ್ಜ್ ಬಳಿ ಬ್ಲೇಡ್ ತೋರಿಸಿ ಹಲ್ಲೆ ಮಾಡಿ 19 ಸಾವಿರ ನಗದು, ಕಸಿದು ಕಾರಿನಿಂದ ಹೊರ ನೂಕಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಂದಿನಿಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್ ಸಬ್ ಇನ್ಸ್‌ಪೆಕ್ಟರ್ ಗಳಾದ ನಿತ್ಯಾನಂದ ಚಾರಿ, ಜೋಗಣ್ಣ ನವರ್, ನವೀದ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.