Home Mangalorean News Kannada News ಬೆಂಗಳೂರು: ಬಾಕಿ ಬೇಕು, ಸಾಂತ್ವನ ಸಾಕು: ಕಬ್ಬು ಬೆಳೆಗಾರರ ಆಗ್ರಹ

ಬೆಂಗಳೂರು: ಬಾಕಿ ಬೇಕು, ಸಾಂತ್ವನ ಸಾಕು: ಕಬ್ಬು ಬೆಳೆಗಾರರ ಆಗ್ರಹ

Spread the love

ಬೆಂಗಳೂರು: ಪರಿಹಾರ ನೀಡಬೇಕಾದವರೇ ಸಮಸ್ಯೆಗೆ ಕಾರಣವಾಗಿದ್ದಾರೆ! ಇದಕ್ಕೆ ಉತ್ತಮ ನಿದರ್ಶನ ಕಬ್ಬು ಬೆಳೆಗಾರರ ಬಾಕಿ ಹಣ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆ ಮಾಲೀಕರು. ಎಲ್ಲ  ಪಕ್ಷಗಳ ರಾಜಕಾರಣಿಗಳು ಇಲ್ಲಿದ್ದಾರೆ.

ಯಾವ ಸರ್ಕಾರ ಬಂದ್ರು ಇವ್ರು ಅಲ್ಲಾಡಲ್ಲ, ಯಾರ ಮಾತೂ ಕೇಳಲ್ಲ. ಪರಿಸ್ಥಿತಿ ಹೀಗಿರುವಾಗ, ಸಿಎಂ ಸಿದ್ದರಾಮಯ್ಯ ಪಕ್ಷಭೇದ ಮರೆತು ಕ್ರಮ ತೆಗೆದುಕೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸಬಲ್ಲರೇ?  ಹೋಗಲಿ, ತಮ್ಮದೇ ಸಂಪುಟದ ಸದಸ್ಯರು ಮತ್ತು ಕಾಂಗ್ರೆಸ್ ಶಾಸಕರ ಒಡೆತನದ ಫ್ಯಾಕ್ಟರಿಗಳು ಉಳಿಸಿಕೊಂಡಿರುವ ಬಾಕಿ ಪಾವತಿಸಿ ಎಂದು ಸ್ವಪಕ್ಷೀಯರ ವಿರುದ್ಧ ಚಾಟಿ ಬೀಸುವರೇ? ಅದೇ ರೀತಿ ಬಿಜೆಪಿ, ಜೆಡಿಎಸ್ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಬದಲು ತಮ್ಮ ಪಕ್ಷದ ಶಾಸಕರು ಹೊಂದಿರುವ ಕಾರ್ಖಾನೆಗಳ ಬಾಕಿ ಪಾವತಿಸಿ ಎಂದುತಾಕೀತು ಮಾಡುವರೇ? ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ರಾಜಕಾರಣದ ಬದಲಿಗೆ ತಮ್ಮ ತಮ್ಮ ಪಕ್ಷಗಳ ಜನಪ್ರತಿಗಳ ಮಾಲೀಕತ್ವದ ಫ್ಯಾಕ್ಟರಿಗಳು ರೈತರಿಗೆ ಪಾವತಿಸಬೇಕಾದ ಬಾಕಿ  ಹಣವನ್ನು ಬಿಡುಗಡೆ ಮಾಡಿ ಎಂಬ ಸಂದೇಶ ಕಳುಹಿಸುವರೇ?

1

ಬಾಕಿ ಕೊಡಿಸಿ ಎಂದು ಸಿದ್ದರಾಮಯ್ಯನವರನ್ನು ಆಗ್ರಹಿಸುವ ಮೊದಲು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ  ಜೆಡಿಎಸ್‍ನ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಶಾಸಕರನ್ನು ಏಕೆ ಪ್ರಶ್ನಿಸುತ್ತಿಲ್ಲ?  ಮೊದಲು ತಮ್ಮವರು ಬಾಕಿ ಚುಕ್ತಾ ಮಾಡಿದರೆ ಆಗ ಮತ್ತೊಬ್ಬರನ್ನು ಪ್ರಶ್ನಿಸುವ ಇಲ್ಲವೇ ಕೇಳುವ  ನೈತಿಕತೆ ಇರುತ್ತದೆ ಎಂಬುದನ್ನು ಈ ನಾಯಕರು ಅರ್ಥ ಮಾಡಿಕೊಂಡರೆ ಸೂಕ್ತ. ರಾಜ್ಯದಲ್ಲಿ ದಿನದಿಂದ ದಿನಕ್ಕೆ `ಕಬ್ಬಿನ ರಾಜಕಾರಣ’ ಬಿಸಿಯೇರುತ್ತಿದ್ದು, ಎಲ್ಲರ ದೃಷ್ಟಿ ಈಗ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರತ್ತ ನೆಟ್ಟಿದೆ. ಸಕ್ಕರೆ ರಾಜರ ಲಾಬಿಯನ್ನು ಮೆಟ್ಟಿ ನಿಂತು ರೈತರತ್ತ ಸರ್ಕಾರ ನೆರವಿನ ಹಸ್ತ ಚಾಚುತ್ತದೆಯೇ ಎಂಬ ಚರ್ಚೆ ಈಗ ಆರಂಭವಾಗಿದೆ.

ಬಾಕಿಗೆ ಇಲ್ಲ ಭೇದ

ಏಕೆಂದರೆ ಸಕ್ಕರೆ ಲಾಬಿಯ ಪ್ರಬಲ ಪ್ರತಿಪಾದಕರು ಆಡಳಿತ ಮತ್ತು ಪ್ರತಿಪಕ್ಷಗಳೆರಡರಲ್ಲೂ ಇದ್ದಾರೆ. ಅ„ಕಾರದ ವಿಚಾರದಲ್ಲಿ ಮಾತ್ರ ಈ ಸಕ್ಕರೆ ಲಾಬಿಗೆ ಪಕ್ಷಭೇದ. ರೈತರಿಗೆ ಉತ್ತಮ ಬೆಲೆ  ನೀಡುವ ವಿಚಾರ ಬಂದಾಗ ಇವರದ್ದು ಪ್ರತ್ಯೇಕ ಗಣರಾಜ್ಯ. ಯಾರೇ ಸರ್ಕಾರ ನಡೆಸುತ್ತಿರಲಿ ಅವರ ಮೇಲೆ ಪ್ರಭಾವ ಬೀರಿ ರೈತರಿಗೆ ನಿರಂತರವಾಗಿ ಅನ್ಯಾಯವೆಸಗುವ ಪ್ರಕ್ರಿಯೆ ರಾಜ್ಯದಲ್ಲಿ ಹಲವು ವರ್ಷದಿಂದ ಬೆಳೆದು ಬಂದಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಎಲ್ಲರಂತೆ `ಸಕ್ಕರೆ ಪ್ರಭಾವಕ್ಕೆ’ ಬೆಲೆ ಕೊಡುತ್ತಾರೋ, ರೈತರಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುತ್ತಾರೋ ಎಂಬ  ಕುತೂಹಲ ಸೃಷ್ಟಿಯಾಗಿದೆ. ಆಡಳಿತರೂಢ ಕಾಂಗ್ರೆಸ್‍ನಲ್ಲಿ ಪ್ರಭಾವಿ ಸಕ್ಕರೆ ಕಾರ್ಖಾನೆ ಮಾಲೀಕರ ಸಂಖ್ಯೆ ಮತ್ತು ಅವರು ಉಳಿಸಿಕೊಂಡ ಬಾಕಿ ಹಣವೇನು ಕಡಿಮೆ ಇಲ್ಲ.

ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಇಂಡಿಯಾ ಕೇನ್ ಶುಗರ್ ರು.2,128 ಲಕ್ಷ, ಶಾಸಕ ಸಿದ್ದು ನ್ಯಾಮೇಗೌಡ ಅವರ ಜಮಖಂಡಿ ಶುಗರ್ಸ್ ರು.3,311 ಲಕ್ಷ, ಬಿ.ಬಿ. ಚಿಮ್ಮನಕಟ್ಟಿ  ಅವರ ಬಾದಾಮಿ ಶುಗರ್ಸ್ ರು313 ಲಕ್ಷ, ಸಚಿವ ಸತೀಶ್ ಜಾರಕಿಹೊಳಿ ಅವರ ಸತೀಶ್ ಶುಗರ್ಸ್ ರು.2,122 ಲಕ್ಷ , ಸಚಿವ ಎಂ.ಬಿ. ಪಾಟೀಲ್ ಅವರ ಬಸವೇಶ್ವರ ಶುಗರ್ಸ್ ರು.847 ಲಕ್ಷ ಬಾಕಿ  ಉಳಿಸಿಕೊಂಡಿದೆ. ಶಾಸಕ ಡಿ.ಬಿ. ಇನಾಂದಾರ್, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕ ಜಿ.ಟಿ. ಪಾಟೀಲ್, ರಮೇಶ್ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆಯ ಯಜಮಾನಿಕೆ ಹೊಂದಿದ್ದಾರೆ.

ರೈತರ ಬಾಕಿ ಹಣವನ್ನು ಸರ್ಕಾರ ಕೊಡಿಸಬೇಕು ಎಂದು ಪಟ್ಟು ಹಿಡಿದಿರುವ ಪ್ರತಿಪಕ್ಷ ಬಿಜೆಪಿ ಪಾಳಯದಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಬಲ್ಲ ಸಕ್ಕರೆ ಕಾರ್ಖಾನೆ  ಮಾಲೀಕರು ಇದ್ದಾರೆ. ಅವರ ಪೈಕಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ನಿರಾಣಿ ಶುಗರ್ಸ್ ರು.33,856 ಲಕ್ಷ, ಶಾಸಕ ಲಕ್ಷ್ಮಣ ಸವದಿ ಅವರ ಕೃಷ್ಣಾ ಶುಗರ್ಸ್ ರು.5,613 ಲಕ್ಷ, ಸಂಸದ  ಪ್ರಭಾಕರ ಕೋರೆ ಅವರ ಶಿವಶಕ್ತಿ ಶುಗರ್ಸ್ ರು.5,677 ಲಕ್ಷ, ಶಾಸಕ ಉಮೇಶ್ ಕತ್ತಿ ಅವರ ವಿಶ್ವರಾಜ್ ಶುಗರ್ಸ್ ರು.27 ಲಕ್ಷ ಬಾಕಿ ಉಳಿಸಿಕೊಂಡಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ  ಬರಲಿ, ರೈತರಿಗೆ ವೈಜ್ಞಾನಿಕ ಬೆಲೆ ನೀಡುವ ಸಂದರ್ಭದಲ್ಲಿ ಮಾತ್ರ ಈ ಕಾರ್ಖಾನೆ ಹಿನ್ನೆಲೆಯ ರಾಜಕಾರಣಿಗಳೇ ಮಾತೆ ಅಂತಿಮ. ರೈತರು ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ನಾನು  ಯಾರ ಪ್ರಭಾವಕ್ಕೂ ಬಗ್ಗುವುದಿಲ್ಲ ಎಂದು ಆಗಾಗ ಬಹಿರಂಗ ಹೇಳಿಕೆ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಕಬ್ಬು ಬೆಳೆಗಾರರ ಸಮಸ್ಯೆ ಅಗ್ನಿಪರೀಕ್ಷೆಯಾಗಿದ್ದು, ಬದಟಛಿತೆ ಮತ್ತು  ಪ್ರಭಾವದ ಪೈಕಿ ಯಾರತ್ತ ಸಿದ್ದರಾಮಯ್ಯ ವಾಲುತ್ತಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ.


Spread the love

Exit mobile version